ಭಟ್ಕಳ| ಗ್ರಾಮ ಆಡಳಿತಾಧಿಕಾರಿಗಳಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Update: 2024-09-26 12:24 GMT

ಭಟ್ಕಳ: ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಇತ್ತೀಚಿನ ನಿರ್ಣಯದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಭಟ್ಕಳ ತಾಲೂಕಾ ಘಟಕದ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಆ.22ರಂದು ನಡೆದ ಚಿತ್ರದುರ್ಗದ ಕಾರ್ಯಕಾರಿಣಿ ಸಭೆಯ ನಿರ್ಧಾರಗಳ ಅನುಸರಿಸಿ, ಸಂಘದ ಸದಸ್ಯರು ಇಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಿದರು.

ಭಟ್ಕಳ ಘಟಕದ ಗೌರವಾಧ್ಯಕ್ಷ ಕೆ. ಶಂಭು ಅವರು ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ಇದು ತಾಂತ್ರಿಕ ಹುದ್ದೆಯಲ್ಲದರೂ, ನಿರಂತರವಾಗಿ ತಾಂತ್ರಿಕ ಕೆಲಸ ಮಾಡಬೇಕಾಗಿ ಬರುತ್ತಿದೆ. 21ಕ್ಕೂ ಹೆಚ್ಚು ಮೊಬೈಲ್ ಆಪ್‌ಗಳ ಮೂಲಕ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ," ಎಂದು ಅವರು ತಿಳಿಸಿದರು.

ಭಟ್ಕಳ ಘಟಕದ ಸದಸ್ಯ ಚಾಂದ್ ಬಾಷಾ ಮಾತನಾಡಿ, "ಗ್ರಾಮ ಆಡಳಿತಾಧಿಕಾರಿಗಳು ತಳಮಟ್ಟದ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದಿಂದಾಗಿ ಕೆಲವರು ದುಶ್ಚಟಗಳಿಗೆ ಗುರಿಯಾಗುತ್ತಿದ್ದಾರೆ. ಕಳೆದ 5-6 ವರ್ಷ ಗಳಲ್ಲಿ ಭಟ್ಕಳ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೆಯೇ ರಾಜ್ಯಾದ್ಯಂತ ಅನೇಕ ನೌಕರರು ಕೆಲಸದ ಒತ್ತಡದಿಂದ ದುಶ್ಚಟಗಳಿಗೆ ಒಳಗಾಗಿದ್ದಾರೆ." ಎಂದರು.

ಧರಣಿ ವೇಳೆ, ತಹಶೀಲ್ದಾರ್ ಸ್ಥಳಕ್ಕೆ ಬಂದು, ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ಮುಷ್ಕರಕ್ಕೆ ಅನುಮತಿ ಇಲ್ಲದ ಕಾರಣ, ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ಪ್ರತಿಭಟನಾಕಾರರು ಧರಣಿಯನ್ನು ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಲತಾ ನಾಯ್ಕ, ಉಪಾಧ್ಯಕ್ಷೆ ಹೇಮಾ ನಾಯ್ಕ, ಕಾರ್ಯದರ್ಶಿ ಚರಣ ಗೌಡ, ಸಂಘಟನಾ ಕಾರ್ಯದರ್ಶಿ ಗಣೇಶ ಕುಲಾಲ್, ಸದಸ್ಯರಾಧ ವಿನುತ, ಶ್ರುತಿ ದೇವಾಡಿಗ, ಶಬಾನ ಬಾನು, ದೀಕ್ಷಿತ, ದಿಪ್ತಿ, ದಿವ್ಯಾ, ವೀಣಾ, ಐಶ್ವರ್ಯ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News