ಮೆಕ್ಕಾ ಮಸೀದಿ ಎದುರು ನಾಮಫಲಕ ಅಳವಡಿಕೆ: ಸಂಘಪರಿವಾರದಿಂದ ಮುಂದುವರಿದ ಪ್ರತಿಭಟನೆ

Update: 2024-01-16 16:54 GMT

ಭಟ್ಕಳ: ಭಟ್ಕಳದ ಎರಡನೆ ತಿರುವಿನಲ್ಲಿರುವ ಮೆಕ್ಕಾ ಮಸೀದಿ ಎದುರು ದೇವಿನಗರ ನಾಮಫಲಕ ಅಳವಡಿಕೆಯನ್ನು ಒತ್ತಾಯಿಸಿ ಮಂಗಳವಾರವೂ ಪ್ರತಿಭಟನೆಗಳು ಮುಂದುವರಿದವು. ಆದರೆ, ನಾಮಫಲಕ ಅಳವಡಿಕೆಗೆ ಪ್ರಾಧಿಕಾರಗಳು ಇದುವರೆಗೂ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಜಾಲಿ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸುವಂತೆ ಪ್ರತಿಭಟನಾಕಾರರಿಗೆ ಸೂಚಿಸಲಾಗಿದೆ. ಆ ಬಳಿಕ ಪಂಚಾಯತ್ ನಾಮಫಲಕ ಅಳವಡಿಕೆ ಕುರಿತು ತನ್ನ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.

ರವಿವಾರ ಮೆಕ್ಕಾ ಮಸೀದಿ ಎದುರಿಗಿರುವ ಕಲ್ಲಿನ ನಾಮಫಲಕಕ್ಕೆ ಬಣ್ಣ ಬಳಿದು, ಅದರ ಮೇಲೆ ದೇವಿನಗರ ಎಂದು ಬರೆದ ನಂತರ, ಅದರ ಪಕ್ಕ ಕಂಬವೊಂದನ್ನು ನೆಟ್ಟಿದ್ದರಿಂದ ವಿವಾದ ಭುಗಿಲೆದ್ದಿತ್ತು. ಸಂಘ ಪರಿವಾರದ ಕಾರ್ಯಕರ್ತರು ಮಸೀದಿಯ ಎದುರು ಕೇಸರಿ ಧ್ವಜವನ್ನು ಹಾರಿಸುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿರುವ ಮಸೀದಿಯ ಪ್ರತಿನಿಧಿಗಳು, ಈ ನಡೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದರ ಬೆನ್ನಿಗೇ, ಪೊಲೀಸರ ಮೇಲ್ವಿಚಾರಣೆಯಲ್ಲಿ ಕಂಬವನ್ನು ತೆರವುಗೊಳಿಸಲಾಯಿತು ಎಂದು ವರದಿಯಾಗಿದೆ.

ಕಂಬ ತೆರವಿಗೆ ಅಸಮಾಧಾನ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು, ಈ ನಡೆಯನ್ನು ವಿರೋಧಿಸಲು ಮಸೀದಿಯ ಮುಂದೆ ನೆರೆದಿದ್ದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು, ತಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಮಂಗಳವಾರ ಬೆಳಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಗುವುದು ಎಂದು ಮನವೊಲಿಸಿ, ಅವರೆಲ್ಲ ಅಲ್ಲಿಂದ ಚದುರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಜಾಲಿ ಪಂಚಾಯತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಸೀದಿ ಎದುರು ಯಾವುದೇ ನಾಮಫಲಕ ಅಥವಾ ಕಂಬವನ್ನು ನೆಡಲು ಅವಕಾಶ ನೀಡದಿರಲು ತೀರ್ಮಾನಿಸಲಾಯಿತು. ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದೂ ಸೂಚಿಸಲಾಯಿತು ಎಂದು ತಿಳಿದು ಬಂದಿದೆ. ಸಂಸತ್ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಲು ಇದರ ಹಿಂದೆ ಪ್ರಬಲ ರಾಜಕೀಯ ಚಿತಾವಣೆ ಅಡಗಿದೆ ಎಂದು ಅಭಿಪ್ರಾಯ ಪಟ್ಟಿರುವ ಜಾಲಿ ಪಂಚಾಯಿತಿ ಸದಸ್ಯರು, ಅಂತಹ ಪ್ರಯತ್ನಗಳನ್ನು ಪೊಲೀಸರು ಹಾಗೂ ಪ್ರಾಧಿಕಾರಗಳು ಚಿವುಟಿ ಹಾಕಬೇಕು ಎಂದು ಆಗ್ರಹಿಸಿದರು ಎನ್ನಲಾಗಿದೆ.

ಆದರೆ, ಸಭೆಯಲ್ಲಿ ಈ ತೀರ್ಮಾನವನ್ನು ಒಪ್ಪಿಕೊಂಡ ನಂತರವೂ, ನಾಮಫಲಕ ಹಾಗೂ ಕಂಬವನ್ನು ನೆಡಬೇಕು ಎಂದು ಪಟ್ಟು ಹಿಡಿದ ಬಿಜೆಪಿ ಕಾರ್ಯಕರ್ತರು, ಮಕ್ಕಾ ಮಸೀದಿ ಎದುರು ಜಮಾಯಿಸಿ ಮತ್ತೆ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಯಾವುದೇ ಧ್ವಜಾರೋಹಣ ಮಾಡದೆ, ದೇವಿನಗರ ಹೆಸರನ್ನು ಕಣ್ಣಿಗೆ ಕಾಣುವಷ್ಟು ಎತ್ತರದಲ್ಲಿ ಬರೆಯುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಅವರು ನಾಮಫಲಕವನ್ನು ನೆಡಲು ಮುಂದಾದಾಗ ಪೊಲೀಸರು ಮಧ‍್ಯಪ್ರವೇಶಿಸಿದ್ದರಿಂದ, ಅವರ ನಡುವೆ ಮಾತಿನ ಚಕಮಕಿಯೂ ನಡೆಯಿತು ಎಂದು ತಿಳಿದು ಬಂದಿದೆ. ಈ ಘರ್ಷಣೆಯ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಭಟ್ಕಳ ಉಪ ಪೊಲೀಸ್ ವರಿಷ್ಠಾಧಿಕಾರಿ ಶ‍್ರೀಕಾಂತ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಮ್ಮ ಬೇಡಿಕೆಗಳನ್ನು ಲಿಖಿತ ಅಥವಾ ಮನವಿ ಪತ್ರದ ಮೂಲಕ ತಹಶೀಲ್ದಾರ್ ಮತ್ತು ಪಂಚಾಯಿತಿಗೆ ಸಲ್ಲಿಸುವಂತೆ ಪ್ರತಿಭಟನಾಕಾರಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಸೂಚಿಸಿದರು ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ, ಮದ್ರಸಾದೊಂದಿಗೆ ನಿರ್ಮಾಣವಾಗಿರುವ ಮಸೀದಿಯು ಅಕ್ರಮವಾಗಿದ್ದು, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಪರಿವಾರದ ಕಾರ್ಯಕರ್ತರು ಆಗ್ರಹಿಸಿದರು ಎನ್ನಲಾಗಿದೆ.

ನಾಮಫಲಕ ನೆಡಲು ವಿಫಲವಾದ ನಂತರ, ಜಾಲಿಪಟ್ಟಣ ಪಂಚಾಯತಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಆ ಮನವಿ ಪತ್ರದಲ್ಲಿ ಮಸೀದಿಯು ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ನಡುವೆ, ಜಾಲಿ ಪಂಚಾಯಿತಿ ಎದುರು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕರು, ಒಂದು ವೇಳೆ ನಾಮಫಲಕ ನೆಡಲು ಅವಕಾಶ ನೀಡದಿದ್ದರೆ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇನ್ನಿತರ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಬೆದರಿಕೆ ಒಡ್ಡಿದರು ಎಂದು ತಿಳಿದು ಬಂದಿದೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News