"ಸಮಾಜಕ್ಕಾಗಿ ಮೀಸಲಾಗಿದ್ದ ಜೀವನ ಸಯ್ಯದ್ ಖಲೀಲ್ ಅವರದ್ದು"

Update: 2024-11-23 14:37 GMT

ಭಟ್ಕಳ: ಇಫ್ತಿಖಾರ್-ಇ-ಖೌಮ್ ಬಿರುದಾಂಕಿತ, ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ, ಧಾರ್ಮಿಕ ಧುರೀಣ ಸೈಯ್ಯದ್ ಖಲೀಲುರ್ರಹ್ಮಾನ್ (ಸಿ.ಎ. ಖಲೀಲ್) ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಭಟ್ಕಳದ ಐದು ಪ್ರಮುಖ ಸಂಘಟನೆಗಳು ಜಂಟಿಯಾಗಿ ಸಂತಾಪ ಸಭೆ ನಡೆಸಿದವು. ಈ ಸಭೆ ಶುಕ್ರವಾರ ರಾತ್ರಿ ಜಾಮಿಯಾ ಮಸೀದಿಯಲ್ಲಿ ಜರುಗಿತು.

ಸಂತಾಪ ಸಭೆಯನ್ನು ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್, ಜಮಾಅತುಲ್ ಮುಸ್ಲಿಮೀನ್ ಭಟ್ಕಳ, ಜಾಮಿಯಾ ಇಸ್ಲಾಮಿಯಾ, ಅಂಜುಮನ್ ಹಾಮಿಯೇ ಮುಸ್ಲಿಮೀನ್ ಮತ್ತು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಿ.ಎ.ಖಲೀಲ್ ಸಾಹೇಬರ ಬದುಕು, ಅವರ ವ್ಯಕ್ತಿತ್ವ ಮತ್ತು ಸೇವೆಗಳ ಕುರಿತಂತೆ ವಿವಿಧ ಗಣ್ಯರು ಮಾತನಾಡಿದರು.


ಮರ್ಕಝಿ ಖಲಿಫಾ ಜಮಾಅತ್‌ನ ಪ್ರಧಾನ ಕಾಝಿ ಮೌಲಾನಾ ಖಾಜಾ ಮುಈನುದ್ದೀನ್ ಅಕ್ರಮಿ ನದ್ವಿ ಅವರು ಮಾತನಾಡಿ, "ಖಲೀಲ್ ಸಾಹೇಬರು ಧಾರ್ಮಿಕ ಪ್ರಜ್ಞೆ ಮತ್ತು ದೇವನ ಮೇಲಿನ ಅಪಾರ ವಿಶ್ವಾಸದೊಂದಿಗೆ ತಮ್ಮ ಬದುಕಿನ ಪ್ರತಿಯೊಂದು ಕಾರ್ಯವನ್ನು ನಡೆಸುತ್ತಿದ್ದರು." ಎಂದು ಹೇಳಿದರು.

ಜಮಾಅತುಲ್ ಮುಸ್ಲಿಮೀನ್‌ನ ಪ್ರಧಾನ ಖಾಝಿ ಮೌಲಾನಾ ಅಬ್ದುಲ್ ರಬ್ ಖತೀಬಿ ನದ್ವಿ ಅವರು, "ಅವರ ಸರಳತೆ ಹಾಗೂ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡಿರುವ ಶ್ರೇಷ್ಠ ಸೇವೆಗಳು ನಮಗೆಲ್ಲಾ ಮಾದರಿಯಾಗಿದೆ." ಎಂದು ಸ್ಮರಿಸಿದರು.


ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, "ಖಲೀಲ್ ಸಾಹೇಬರ ಜೀವನ ಸಂಪೂರ್ಣವಾಗಿ ಸಮಾಜಕ್ಕಾಗಿ ಮೀಸಲಾಗಿತ್ತು. ಅವರು ತಮ್ಮ ಆಸ್ತಿ, ಸಂಪತ್ತು, ಮತ್ತು ವ್ಯಕ್ತಿತ್ವವನ್ನು ಜನಸೇವೆಗಾಗಿ ಅರ್ಪಿಸಿದ್ದು ಅವರ ಅದ್ಭುತ ವ್ಯಕ್ತಿತ್ವವನ್ನು ತೋರಿಸುತ್ತದೆ" ಎಂದು ಹೇಳಿದರು.

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಖ್ ಪಿಲ್ಲೂರು, "ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ನೀಡಿರುವ ಕೊಡುಗೆ ಅಮೂಲ್ಯ. ಉ.ಕ. ಜಿಲ್ಲೆ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಅವರು ತಮ್ಮ ಶ್ರಮದ ಫಲವನ್ನು ಮುಡಿಪಾಗಿಟ್ಟಿದ್ದಾರೆ" ಎಂದರು.


ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು, "ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗಲು ಅವರು ಬಹಳಷ್ಟು ಪ್ರಯತ್ನಗಳನ್ನು ಮಾಡಿದರು. ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಮುಖಂಡರೊಂದಿಗೆ ಉತ್ತಮ ಸಂಬಂಧ ಬೆಳೆಸಿದ್ದು, ಭಟ್ಕಳದ ಪ್ರಗತಿಗೆ ದಾರಿಯಾಯಿತು" ಎಂದು ಹೇಳಿದರು.

ಸಭೆಯಲ್ಲಿ, ಖಲೀಫಾ ಜಮಾಅತ್ ಉಪಖಾಝಿ ಮೌಲಾನಾ ಐಮನ್ ನದ್ವಿ, ಜಮಾಅತುಲ್ ಮುಸ್ಲಿಮೀನ್ ಉಪಖಾಝಿ ಅಬ್ದುಲ್ ಆಹದ್ ಫರ್ಕದೆ ನದ್ವಿ, ಝುಬೇರ್ ಕೋಲಾ, ಮತ್ತು ಮೊಹತಿಷಾಮ್ ಸಂಸ್ಥೆಯ ಎಸ್ ಎಂ ಅರ್ಷದ್ ಮತ್ತಿತರರು ಭಾಗವಹಿಸಿ, ಸಂತಾಪ ಸೂಚಿಸಿದರು.

ಸಭೆಯ ಕೊನೆಯಲ್ಲಿ, ಐದು ಪ್ರಮುಖ ಕೇಂದ್ರಿಯ ಸಂಘಟನೆಗಳು ಜಂಟಿಯಾಗಿ ಸಂತಾಪ ಸೂಚಕ ಠರಾವು ಮಂಡಿಸಿದವು. ಇದರಲ್ಲಿ 'ಸಿ.ಎ. ಖಲೀಲ್' ಸಾಹೇಬರ ಅಗಲಿಕೆಯನ್ನು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಒತ್ತಿ ಹೇಳಲಾಗಿದೆ.

ಮಜ್ಲಿಸೆ ಇಸ್ಲಾಹ್-ವ-ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.

ಸಮಾಜ ಮತ್ತು ದೇಶದ ಹಿತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿಸಿದ್ದ 'ಸಿ.ಎ. ಖಲೀಲ್' ಸಾಹೇಬರ ಅಗಲಿಕೆ ಭಟ್ಕಳ ಮಾತ್ರವಲ್ಲ, ದೇಶದಾದ್ಯಂತ ಮುಸ್ಲಿಂ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.


























Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News