ಸುಪ್ರೀಂ ಕೋರ್ಟ್ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆ ವಿರುದ್ಧ ಮಜ್ಲಿಸ್-ಎ-ಇಸ್ಲಾಹ್ ವ ತಂಜೀಮ್ ಖಂಡನೆ

ಭಟ್ಕಳ: ಸುಪ್ರೀಂ ಕೋರ್ಟ್ ಭಾರತದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರ ಹೇಳಿಕೆಯನ್ನು ಭಟ್ಕಳದ ಪ್ರಮುಖ ಸಾಮಾಜಿಕ-ರಾಜಕೀಯ ಮುಸ್ಲಿಂ ಸಂಘಟನೆಯಾದ ಮಜ್ಲಿಸ್-ಎ-ಇಸ್ಲಾಹ್ ವ ತಂಜೀಮ್ ತೀವ್ರವಾಗಿ ಖಂಡಿಸಿದೆ. ಈ ಹೇಳಿಕೆಯನ್ನು "ಅವಮಾನಕರ, ಸುಳ್ಳು ಮತ್ತು ಆಧಾರರಹಿತ" ಎಂದು ಕರೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (AIMPLB) ಸದಸ್ಯ ಮೌಲಾನಾ ಮಕ್ಬೂಲ್ ಕೊಬಟ್ಟೆ ನದ್ವಿ, ದುಬೆಯವರ ಹೇಳಿಕೆಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಇವು ಕಾನೂನಾತ್ಮಕವಾಗಿ ಅಪಮಾನಕರವಾಗಿದ್ದು, ನ್ಯಾಯಾಂಗವನ್ನು ಬೆದರಿಸಲು ಮತ್ತು ಸಾಮುದಾಯಿಕ ಅಶಾಂತಿಯನ್ನು ಉಂಟುಮಾಡುವ ಉದ್ದೇಶವಾಗಿದೆ. ರಾಷ್ಟ್ರದ ಐಕ್ಯತೆ ಮತ್ತು ಶಾಂತಿಗೆ ಅಪಾಯಕಾರಿ ಎಂದರು.
ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಕ ಮತ್ತು ನಾಗರಿಕರ ಹಕ್ಕುಗಳ ಸಂರಕ್ಷಕವಾಗಿದೆ ಎಂದು ಒತ್ತಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳಿಂದ ಬರುತ್ತಿರುವ ಟೀಕೆಗಳು ನ್ಯಾಯಾಂಗವನ್ನು ಬೆದರಿಸಿ ಮೌನಗೊಳಿಸುವ ಉದ್ದೇಶದಿಂದ ಕೂಡಿರುವಂತೆ ಕಾಣುತ್ತವೆ ಎಂದು ಅವರು ಆರೋಪಿಸಿದರು. ಇಂತಹ ಕೃತ್ಯಗಳು ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿಗೆ ನೇರ ಬೆದರಿಕೆಯಾಗಿವೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಶಿಕಾಂತ್ ದುಬೆಯನ್ನು ಪಕ್ಷದಿಂದ ಉಚ್ಚಾಟಿಸಿ ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯಬೇಕೆಂದು ಮೌಲಾನಾ ನದ್ವಿ ಒತ್ತಾಯಿಸಿದರು. ಜೊತೆಗೆ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದುಬೆ ಮತ್ತು ಸಂವಿಧಾನದ ತತ್ವಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ನ್ಯಾಯಾಂಗವನ್ನು ಗುರಿಯಾಗಿಸಿರುವ ಇತರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ, ಸದಸ್ಯರಾದ ವಕೀಲ ಇಮ್ರಾನ್ ಲಂಕಾ, ಅಝೀಝುರ್ ರಹಮಾನ್ ರುಕ್ನುದ್ದೀನ್ ನದ್ವಿ ಮತ್ತು ಆದಮ್ ಪಣಂಬೂರ್ ಉಪಸ್ಥಿತರಿದ್ದರು.