ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ

Update: 2024-11-15 13:39 GMT

ಭಟ್ಕಳ: ಲಂಚ ಸ್ವೀಕರಿಸುತ್ತಿರುವ ವೇಳೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಒಳಚರಂಡಿ ಜೋಡಣೆಗೆ 50 ಸಾವಿರ ರೂ. ಲಂಚ ಪಡೆಯುವಾಗಲೇ ನೀಲಕಂಠ ಮೇಸ್ತಾ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ಬೆಳ್ಳಿಗ್ಗೆಯಿಂದ ಸಂಜೆ ತನಕ ವಿಚಾರಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊಹ್ಮದ್ ಇದ್ರಿಸ್ ಮೋಹತೇಷಾಮ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಶುಕ್ರವಾರ ಕಾರವಾರ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾ ಗಿದೆ. ಒಳಚರಂಡಿ ಜೋಡಣೆ ವಿಚಾರದಲ್ಲಿ ನೀಲಕಂಠ ಮೇಸ್ತಾ ಲಂಚ ಸ್ವೀಕರಿಸುತ್ತಿದ್ದರು. ದೂರುದಾರ ನೀಡಿದ ಹೇಳಿಕೆ ಪ್ರಕಾರ ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರು, ನೀಲಕಂಠ ಮೇಸ್ತಾ ಲಂಚ ಪಡೆಯುವ ವಿಚಾರದಲ್ಲಿ ಮೋಹತೇಷಾಮ್‌ ಕಾರವಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರುದಾರ ಸಂಬಂಧಿಕರೋರ್ವರ 20 ಗುಂಟೆ ಜಾಗ ಭಟ್ಕಳದ ಸೂಸಗಡಿಯಲ್ಲಿದ್ದು ಸದ್ಯ ಅವರು ಚೆನೈಯಲ್ಲಿ ಕೆಲಸ ಮಾಡುತ್ತಿದ್ದರು. ಅವರು 2003 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡಿದ್ದರು. ಆದರೆ ಆ ವೇಳೆಯಲ್ಲಿ ಮನೆ ಕಟ್ಟಲು ಸಾಧ್ಯವಾಗದ ಕಾರಣ ಅದನ್ನು ಮುಂದೂಡಿದ್ದರು. ಬಳಿಕ 2015ಕ್ಕೆ ಮನೆ ಕೆಲಸ ಪೂರ್ಣಗೊಳಿಸಿದ್ದರು. ಆದರೆ ಮನೆಯಲ್ಲಿ ವಾಸವಾಗಿರಲಿಲ್ಲ. ಬಳಿಕ ಈ ವರ್ಷ ಜುಲೈ ತಿಂಗಳಲ್ಲಿ ನಾವು ಮನೆಯಲ್ಲಿ ವಾಸ ಮಾಡುತ್ತೇವೆ. ಪುರಸಭೆಯವರಿಂದ ಫಾಮ್ 3 ಪಡೆದುಕೊಳ್ಳುವಂತೆ ಮೋಹತೇಷಾಮ್ ಬಳಿ ಹೇಳುತ್ತಾರೆ. ಬಳಿಕ ಇವರು ತಮ್ಮ ಸ್ನೇಹಿತ‌ ಶಕೀಲ್ ಮೋಹತೇಷಾಮ್‌ ಎಂಬವರು ಮುಖ್ಯಾಧಿಕಾರಿ ಬಳಿ ತೆರಳಿ ವಿಚಾರಿಸಿಕೊಂಡು ಫಾಮ್ 3 ಗೆ ಅರ್ಜಿ ಹಾಕುವಂತೆ ಹೇಳುತ್ತಾರೆ.

ಬಳಿಕ ಶಕೀಲ್ ಅರ್ಜಿ ನೀಡಿ ಮುಖ್ಯಾಧಿಕಾರಿ ಬಳಿ ವಿಚಾರಿಸಿದಾಗ ಅನೇಕ ವರ್ಷದಿಂದ ತೆರಿಗೆ ತುಂಬದೇ ಬಾಕಿ ಇರುವುದರಿಂದ ತೆರಿಗೆ ಮತ್ತು ದಂಡ ತುಂಬಿದರೆ ಫಾಮ್ 3 ಸಿಗುತ್ತದೆ ಎಂದು ಹೇಳಿದ್ದಾರೆ. ನಂತರ ಜುಲೈ 21ಕ್ಕೆ ಹೋಗಿ ಎಷ್ಟು ಹಣ ನೀಡಬೇಕು ಎಂದು ಕೇಳಿದಾಗ 2 ಲಕ್ಷ ಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದ್ದರು. ನಂತರ ದೂರುದಾರರು ತಮ್ಮ ಸಂಬಂಧಿಕರ ಬಳಿ ಹೇಳಿದಾಗ ಹಣ ನೀಡುವಂತೆ ಹೇಳಿದ್ದರು. ಬಳಿಕ ಶಕೀಲ್ ಬಳಿ 2 ಲಕ್ಷ ಕೊಟ್ಟು ಕಳುಹಿಸುತ್ತಾರೆ. ನಂತರ ಮುಖ್ಯಾಧಿಕಾರಿ ಹಣ ತೆಗೆದುಕೊಂಡು ಮನೆಗೆ ಬರಲು ತಿಳಿಸಿದ್ದರು. 2 ಲಕ್ಷ ಹಣ ಪಡೆದುಕೊಂಡ ಮುಖ್ಯಾಧಿಕಾರಿ 90,068 ರೂ. ರಶೀದಿ ನೀಡಿ. ಉಳಿದ ಮೊತ್ತವನ್ನು ತಾವೇ ಇಟ್ಟುಕೊಂದಿದ್ದರು. ಆದರೂ ಕೂಡ ಆ ವೇಳೆ ಫಾಮ್ 3 ನೀಡಿರಲಿಲ್ಲ. ಇಷ್ಟಾದರೂ ಒಂದು ವರ್ಷದಿಂದ ಫಾಮ್ 3 ನೀಡದೆ ಯುಜಿಡಿ ಕಾಮಗಾರಿ ಕೂಡ ನಡೆಸದೆ ಇರುವುದರಿಂದ ನ.12 ರಂದು ಶಕೀಲ್ ಪುನಃ ಮುಖ್ಯಾಧಿಕಾರಿ ಬಳಿ ಬಂದು ಮನವಿ ಮಾಡಿಕೊಳ್ಳುತ್ತಾರೆ. ಆ ವೇಳೆ ಮತ್ತೆ ಮುಖ್ಯಾಧಿಕಾರಿ 1 ಲಕ್ಷಕ್ಕೆ ಬೇಡಿಕೆ ಇಟ್ಟು ಸದ್ಯ 50 ಸಾವಿರ ನೀಡಿ ಬಳಿಕ ತಕ್ಷಣ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಮತ್ತೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಗುರುವಾರ ಕಾರವಾರದ ಕಚೇರಿಗೆ ಬಂದು ದೂರು ನೀಡಿದ್ದರು. ಅದರಂತೆ ನಾವು ಬೆಳ್ಳಿಗ್ಗೆ ಬಂದು ಅವರು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ  ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಪ್ರಸಾದ ಪನ್ನೆಕರ ಹಾಗೂ 14 ಜನ ಪಿಐ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News