ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉತ್ತೇಜಿಸಬೇಕು: ಡಾ.ಎಂ.ಸಿ.ಸುಧಾಕರ್

Update: 2023-09-06 16:23 GMT

ಡಾ.ಎಂ.ಸಿ.ಸುಧಾಕರ್

ಭಟ್ಕಳ: ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉತ್ತೇಜಿಸುವಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕರೆ ನೀಡಿದರು.

ಅವರು ಸೆ.5ರಂದು ರಾತ್ರಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (AIITA) ಕರ್ನಾಟಕವು ಝೂಮ್ ಮೂಲಕ ಆಯೋಜಿಸಿದ್ದ ಆನ್ ಲೈನ್ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದು ದೇಶದಲ್ಲಿ ಅನೇಕ ವೈಜ್ಞಾನಿಕ ಚಟುವಟಿಕೆಗಳು ನಡೆಯುತ್ತಿವೆ ಎಂದ ಅವರು, ಜಗತ್ತಿನಲ್ಲಿ ಹುಟ್ಟಿದ ಎಲ್ಲ ಮಹಾನ್ ವ್ಯಕ್ತಿಗಳನ್ನು ಯಶಸ್ವಿಗೊಳಿಸುವಲ್ಲಿ ನಮ್ಮ ಗುರುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೆಮ್ಮೆಪಡಬೇಕು. ಆದ್ದರಿಂದ, ಪ್ರತಿ ವೈಜ್ಞಾನಿಕ ಬೆಳವಣಿಗೆಯ ಹಿಂದೆ ಶಿಕ್ಷಕರಿದ್ದಾರೆ. ದೇಶದಲ್ಲಿ ಒಂದು ವಲಯವು ಪರಸ್ಪರ ಭಿನ್ನಾಭಿಪ್ರಾಯ ಗಳನ್ನು ಹರಡಲು ಬಯಸುತ್ತದೆ. ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಮತ್ತು ಡಾ.ಭೀಮರಾವ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಶ್ರಮಿಸುವುದು ಶಿಕ್ಷಕರಾಗಿ ನಮ್ಮ ಜವಾಬ್ದಾರಿಯಾಗಿದೆ ಮತ್ತು ಅದರ ಅಡಿಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದರು.

ದೇಹಲಿಯ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಟ್ರಸ್ಟ್ (TWEET) ಇದರ ಅಧ್ಯಕ್ಷೆ ಮತ್ತು ಮನಾರುಲ್ ಉಲೂಮ್ ಇಂಟರ್ನ್ಯಾಷನಲ್ ಸ್ಕೂಲ್ ಜೆದ್ದಾ (Jeddah KSA) ಇದರ ಸ್ಥಾಪಕ ಪ್ರಾಂಶುಪಾಲೆ ಶ್ರೀಮತಿ ರಹಮತ್ತುನ್ನಿಸ್ಸಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಕ್ಷಕರು ಸದಾ ತಮ್ಮ ಕೆಲಸದ ಬಗ್ಗೆ ಪ್ರೀತಿ, ಸ್ಥಾನಮಾನದ ತಿಳುವಳಿಕೆ ಮತ್ತು ಆಧುನಿಕ ಬೋಧನಾ ವಿಧಾನಗಳ ಬಗ್ಗೆ ಜ್ಞಾನ ಹೊಂದಿರಬೇಕು, ಶಿಕ್ಷಕರು ಯಾವತ್ತೂ ಸಣ್ಣ ಅಥವಾ ಕೀಳರಿಮೆ ಅನುಭವಿಸಬಾರದು. ಇಂದು ನೈತಿಕತೆ ಮತ್ತು ಮೌಲ್ಯಗಳ ಕೊರತೆಯಿಂದ ಒಬ್ಬರನ್ನೊಬ್ಬರು ನಂಬಲು ಸಾಧ್ಯವಾಗುತ್ತಿಲ್ಲ ಎಂದರು. ಈ ಅಪನಂಬಿಕೆಯ ವಾತಾವರಣವನ್ನು ಕೊನೆಗಾಣಿಸಲು ಶಿಕ್ಷಕರು ಬಹುಮುಖ್ಯ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಷ್ಟ್ರೀಯ ಅಧ್ಯಕ್ಷ ಮಹಾರಾಷ್ಟ್ರದ ಅಬ್ದುಲ್ ರಹೀಮ್ ಶೇಖ್ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶಾವಾದಿ ವ್ಯಕ್ತಿ ಮಾತ್ರ ಜಗತ್ತಿನಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯ, ಹಾಗಾಗಿ ಶಿಕ್ಷಕ ಸಮುದಾಯ ಆಶಾವಾದಿಗಳಾಗಿರಬೇಕು. ಶಿಕ್ಷಕರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಐಟಾ ದ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಯಾಸೀನ್ ಭಿಕ್ಬಾ ಧನ್ಯವಾದ ಅರ್ಪಿಸಿದರು. ರಾಜ್ಯಸಮಿತಿ ಸದಸ್ಯ ಪ್ರೋ.ಮಹೇಬೂಬ್ ಉಲ್ ಹಖ್ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News