25 ವರ್ಷ ಸಾರ್ಥಕ ಸೇನಾ ಸೇವೆ: ಅಂತರರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ನಿವೃತ್ತಿ

Update: 2025-01-29 13:51 GMT
25 ವರ್ಷ ಸಾರ್ಥಕ ಸೇನಾ ಸೇವೆ: ಅಂತರರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ನಿವೃತ್ತಿ

ನಿರಜ್ ಚೋಪ್ರರೊಂದಿಗೆ ತರಬೇತುದಾರ ಕಾಶಿನಾಥ ನಾಯ್ಕ

  • whatsapp icon

ಭಟ್ಕಳ: ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಒಲಂಪಿಕ್ ಪದಕ ಗೆಲ್ಲುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರಥಮ ಹಂತದ ತರಬೇತಿದಾರನಾಗಿ ಸೇನಾ ಸೇವೆಯಲ್ಲಿ ದುಡಿದ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಸುಭೇದಾರ ಕಾಶಿನಾಥ ನಾಯ್ಕ ಅವರು 25 ವರ್ಷಗಳ ದೀರ್ಘ ಸೇನಾ ಸೇವೆಯ ನಂತರ ಜ.31ರಂದು ನಿವೃತ್ತಿ ಹೊಂದಲಿದ್ದಾರೆ.

ಕ್ರೀಡೆಯಲ್ಲಿ ಆಸಕ್ತಿ ಮತ್ತು ಜೀವನೋಪಾಯಕ್ಕಾಗಿ ಸೇನಾ ಸೇವೆಯನ್ನು ಆಯ್ಕೆ ಮಾಡಿಕೊಂಡ ಕಾಶಿನಾಥ ನಾಯ್ಕ, ವಿದ್ಯಾರ್ಥಿ ಜೀವನದಿಂದಲೂ ಜಾವಲಿನ್ ಎಸೆತದಲ್ಲಿ ಪ್ರತಿಭೆ ಪ್ರದರ್ಶಿಸಿದ್ದರು. ಸೇನಾ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ 2010ರಲ್ಲಿ ನಡೆದ 19ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು, ತಮ್ಮ ಕ್ರೀಡಾ ಪ್ರತಿಭೆಯನ್ನು ದೇಶಕ್ಕೆ ಅರ್ಪಿಸಿದ್ದಾರೆ.

ಸುಭೇದಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕಾಶಿನಾಥ ನಾಯ್ಕ, ಕ್ರೀಡಾಪಟುಗಳಿಗೆ ತರಬೇತುದಾರನಾಗಿ ನೀಡಿದ ಕೊಡುಗೆ ಅಪಾರ. ಸೇನಾ ಕ್ರೀಡಾ ತರಬೇತಿ ಶಿಬಿರದಲ್ಲಿ ಅಥ್ಲೆಟಿಕ್ಸ್ ತರಬೇತುದಾರನಾಗಿ ಸೇವೆ ಸಲ್ಲಿಸಿದ ಅವರು, ಪ್ರಸ್ತುತ ಗೋವಾ ಮತ್ತು ಪುಣೆಯಲ್ಲಿ ಕ್ರೀಡಾ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾವಲಿನ್ ಎಸೆತದಲ್ಲಿ ಅವರ ವೈಯಕ್ತಿಕ ಉತ್ತಮ ಸಾಧನೆ 79.96 ಮೀಟರ್ ಆಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಅವರ ಸಾಧನೆಗೆ 2012ರಲ್ಲಿ ಎಕಲವ್ಯ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು 2023ರಲ್ಲಿ ಗುರು ವಿದ್ಯಾರಣ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವರ ಕ್ರೀಡಾ ಜೀವನದಲ್ಲಿ 19 ಅಂತರರಾಷ್ಟ್ರೀಯ ಪಂದ್ಯಾಟಗಳಲ್ಲಿ ಭಾಗವಹಿಸಿದ್ದು, 2010ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2008ರ ಏಷಿಯನ್ ಗ್ರಾಂಡ್ ಪ್ರಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ತರಬೇತಿದಾರರಾಗಿ ಕೊಡುಗೆ

2013ರಿಂದ ಸೇನಾ ಕ್ರೀಡಾ ತರಬೇತಿ ಸಂಸ್ಥೆಯಲ್ಲಿ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಕಾಶಿನಾಥ ನಾಯ್ಕ, ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ನಿರಜ್ ಚೋಪ್ರಾ, ಅಣ್ಣು ರಾಣಿ, ರಾಜೇಶ್ ಕುಮಾರ್ ಬಿಂದ್, ದೇವೇಂದ್ರ ಸಿಂಗ್, ಸಮರ್ಜಿತ್ ಸಿಂಗ್, ಅಮಿತ್ ಕುಮಾರ್, ರಾಹಿತ್ ಯಾದವ, ಮನು ಡಿ.ಪಿ., ಅನಿಲ್ ಕುಮಾರ್ ಮತ್ತು ಉತ್ತಮ್ ಪಾಟೀಲ್ ಮುಂತಾದ ಪ್ರತಿಭಾವಂತ ಕ್ರೀಡಾಪಟುಗಳ ಸೃಷ್ಟಿಗೆ ಕಾರಣರಾಗಿದ್ದಾರೆ. ಇದು ದೇಶಕ್ಕೆ ಅವರು ನೀಡಿರುವ ದೊಡ್ಡ ಕೊಡುಗೆಯಾಗಿದೆ.

ಗ್ರಾಮೀಣ ಪ್ರತಿಭೆಯಾಗಿ ಮೆರೆದ ಕಾಶಿನಾಥ


ಹಿಂದುಳಿದ ಪ್ರದೇಶದಿಂದ ಬಂದು ಕ್ರೀಡಾಪಟು, ಸೈನಿಕ ಮತ್ತು ತರಬೇತಿದಾರನಾಗಿ ದೇಶಕ್ಕೆ ಸೇವೆ ಸಲ್ಲಿಸಿರುವ ಕಾಶಿನಾಥ ನಾಯ್ಕ ಅವರ ಸಾಧನೆ ಗ್ರಾಮೀಣ ಪ್ರತಿಭೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಸೇನಾ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಅವರ ತರಬೇತಿ ಕೌಶಲ್ಯವನ್ನು ದೇಶದ ಕ್ರೀಡಾಪಟುಗಳಿಗೆ ಲಭ್ಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು ಸ್ಪಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಒತ್ತಾಯಿಸಿದ್ದಾರೆ.

ಕಾಶಿನಾಥ ನಾಯ್ಕ ಅವರ ಸೇವೆ ಮತ್ತು ಸಾಧನೆಗಳು ದೇಶದ ಯುವಕರು ಮತ್ತು ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿವೆ. ಅವರ ನಿವೃತ್ತಿಯ ನಂತರವೂ ಅವರ ಅನುಭವ ಮತ್ತು ತರಬೇತಿ ಕೌಶಲ್ಯವನ್ನು ದೇಶದ ಕ್ರೀಡಾ ಕ್ಷೇತ್ರದ ಉನ್ನತಿಗೆ ಬಳಸಿಕೊಳ್ಳುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ​ಎಂ.ಆರ್. ಮಾನ್ವಿ

contributor

Similar News