ಗೃಹಲಕ್ಷ್ಮಿ ಅನುದಾನ: ಇನ್ನೂ 7,517.79 ಕೋಟಿ ರೂ. ಬಿಡುಗಡೆಗೆ ಬಾಕಿ

Update: 2025-02-18 08:30 IST
ಗೃಹಲಕ್ಷ್ಮಿ ಅನುದಾನ: ಇನ್ನೂ 7,517.79 ಕೋಟಿ ರೂ. ಬಿಡುಗಡೆಗೆ ಬಾಕಿ
  • whatsapp icon

ಬೆಂಗಳೂರು, ಫೆ.17: ಮನೆ ಯಜಮಾನಿಗೆ ಪ್ರತೀ ತಿಂಗಳು 2,000 ರೂ. ನಗದು ನೀಡುವ ಗೃಹಲಕ್ಷ್ಮಿ ಯೋಜನೆಗೆ 2024-25ನೇ ಸಾಲಿನಲ್ಲಿ ಒದಗಿಸಿದ್ದ 26,084.40 ಕೋಟಿ ರೂ.ನಲ್ಲಿ ಜನವರಿ ಅಂತ್ಯಕ್ಕೆ ಇನ್ನೂ 7,517.79 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.

2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಫೆ.15ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಸಂಬಂಧಿಸಿದ ಅನುದಾನ ಬಿಡುಗಡೆ ಮತ್ತು ಆಗಿರುವ ವೆಚ್ಚದ ಕುರಿತು ಮಾಹಿತಿ ಒದಗಿಸಿದೆ. ಈ ಸಭೆಗೆ ಮಂಡಿಸಿರುವ ಅಂಕಿ ಅಂಶಗಳು ‘The-file.in’ಗೆ ಲಭ್ಯವಾಗಿವೆ.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಮೂರ್ನಾಲ್ಕು ತಿಂಗಳುಗಳಿಂದಲೂ ಹಣ ಪಾವತಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಈ ಯೋಜನೆಯಡಿಯಲ್ಲಿ ಹಂಚಿಕೆಯಾಗಿದ್ದ ಅನುದಾನದಲ್ಲಿಯೇ ಜನವರಿ ಅಂತ್ಯಕ್ಕೆ ಇನ್ನೂ 7,517.79 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

2024-25ನೇ ಸಾಲಿಗೆ ಈ ಯೋಜನೆಯಡಿಯಲ್ಲಿ 26,084.40 ಕೋಟಿ ರೂ. ಅನುದಾನ ಸರಕಾರ ಒದಗಿಸಿತ್ತು. ಈ ಪೈಕಿ ಜನವರಿ ಅಂತ್ಯಕ್ಕೆ 18,566.31 ಕೋಟಿ ರೂ. ಬಿಡುಗಡೆ ಮಾಡಿದೆ. ಬಿಡುಗಡೆಯಾಗಿದ್ದ ಈ ಹಣದ ಪೈಕಿ 18,353.03 ಕೋಟಿ ರೂ. ಖರ್ಚಾಗಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ಜನವರಿ ಅಂತ್ಯಕ್ಕೆ 213.28 ಕೋಟಿ ರೂ. ಬಾಕಿ ಇರುವುದು ಅಂಕಿ ಅಂಶದಿಂದ ಗೊತ್ತಾಗಿದೆ.

ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿದ್ದರೂ ಈ ವರ್ಷವೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು 2024-25ನೇ ಸಾಲಿಗೆ ಗೃಹ ಲಕ್ಷ್ಮಿ ಯೋಜನೆಗೆ 31,920 ಕೋಟಿ ರೂ. ಕೋರಿದ್ದರು.

ಗೃಹ ಲಕ್ಷ್ಮಿ ಯೋಜನೆಗೆ 2023-24ನೇ ಸಾಲಿಗೆ 17,500 ಕೋಟಿ ರೂ. ಸರಕಾರವು ಮೀಸಲಿಟ್ಟಿತ್ತು. ಇದರಲ್ಲಿ 11,200 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 8,609.20 ಕೋಟಿ ರೂ. ಖರ್ಚಾಗಿತ್ತು. ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಎಲ್ಲಾ 19 ಯೋಜನೆಗಳಿಗೆ ಒಟ್ಟಾರೆ 32,257.72 ಕೋಟಿ ರೂ. ಅಂದಾಜಿಸಿದೆ. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಗೆ 31,920.00 ಕೋಟಿ ರೂ. ಅನುದಾನ ಹಂಚಿಕೆ ಆದರೆ ಉಳಿದ 18 ಯೋಜನೆಗಳಿಗೆ ಕೇವಲ 332.72 ಕೋಟಿ ರೂ. ಉಳಿಯಲಿದೆ ಎಂದು ಅಂದಾಜಿಸಿತ್ತು.

ಇಲಾಖೆಯು ಸಲ್ಲಿಸಿರುವ ಬೇಡಿಕೆ ಪಟ್ಟಿ ಪ್ರಕಾರ ಗೃಹ ಲಕ್ಷ್ಮಿ ಯೋಜನೆ ಹೊರತುಪಡಿಸಿ 471.19 ಕೋಟಿ ರೂ. ಅನುದಾನ ಅಂದಾಜಿಸಿದೆ. ಇದರ ಪ್ರಕಾರ 138.47 ಕೋಟಿ ರೂ. ಅನುದಾನ ಕೊರತೆ ಬೀಳಲಿದೆ ಎಂದು ಹೇಳಲಾಗಿತ್ತು.

ಸಮಗ್ರ ಶಿಶು ಅಭಿವೃದ್ಧಿ ಸೇವೆ, ಐಸಿಡಿಎಸ್, ಪೋಷಣ ಅಭಿಯಾನ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ 2024-25ನೇ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟಾರೆ 4,782.84 ಕೋಟಿ ರೂ. ಅನುದಾನ ಒದಗಿಸಿತ್ತು. ಈ ಪೈಕಿ ಜನವರಿ ಅಂತ್ಯಕ್ಕೆ 2,580.13 ಕೋಟಿ ರೂ. ಬಿಡುಗಡೆ ಮಾಡಿದೆ. ಒಟ್ಟು ಅನುದಾನದಲ್ಲಿ ಬಿಡುಗಡೆಗೆ 2,202.71 ಕೋಟಿ ರೂ. ಬಾಕಿ ಇರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಒಟ್ಟು 25.00 ಕೋಟಿ ರೂ. ಅನುದಾನ ಒದಗಿಸಿತ್ತು. ಹೆಚ್ಚುವರಿಯಾಗಿ 11.96 ಕೊಟಿ ರೂ. ಸೇರಿ 36.96 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಜನವರಿ ಅಂತ್ಯಕ್ಕೆ ಖರ್ಚು ಮಾಡಿದ್ದು ಕೇವಲ 9.36 ಕೋಟಿ ರೂ. ಮಾತ್ರ. ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ಖರ್ಚು ಮಾಡಲು 27.6 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.

ವಿಶೇಷವೆಂದರೆ ಇದೇ ಇಲಾಖೆಯ ಇನ್ನಿತರ ಯೋಜನೆಗಳ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಮೊತ್ತವನ್ನೂ ನಿಗದಿಪಡಿಸಿ ಸೂಚಿಸಿತ್ತು. ಆದರೆ ಗೃಹಲಕ್ಷ್ಮಿ ಯೋಜನೆಗೆ ಇಂತಿಷ್ಟೇ ಮೊತ್ತ ಎಂದು ಸೂಚಿಸಿರಲಿಲ್ಲ.

ಇನ್ನು, ಈ ಯೋಜನೆಯ ಪ್ರಚಾರ, ಜಾಹೀರಾತು, ಅರ್ಜಿ ಶುಲ್ಕ, ಸಮಾಲೋಚಕರ ವೇತನ ಹಾಗೂ ಇತರ ವೆಚ್ಚಗಳಿಗೆಂದು 20 ಕೋಟಿ ರೂ. ಅವಶ್ಯಕತೆ ಇದೆ ಎಂದೂ ಬೇಡಿಕೆ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಜಿಲ್ಲಾ ವಲಯದ ಯೋಜನೆ ಮತ್ತು ಇತರ ಯೋಜನೆಗಳಿಗೆ 2024-25ನೇ ಸಾಲಿಗೆ 39,369.82 ಕೋಟಿ ರೂ. ಕೋರಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ 186.43 ಕೋಟಿ ರೂ., ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ 273.69 ಕೋಟಿ ರೂ., ವಿಕಲ ಚೇತನರ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯಕ್ಕೆ 292.47 ಕೋಟಿ ರೂ., ಕರ್ನಾಟಕ ಬಾಲ ವಿಕಾಸ ಅಕಾಡಮಿಗೆ 11.89 ಕೋಟಿ ರೂ., ಕರ್ನಾಟಕ ರಾಜ್ಯಮಹಿಳಾ ಆಯೋಗಕ್ಕೆ 6.35 ಕೋಟಿ ರೂ., ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ 3.23 ಕೋಟಿ ರೂ., ಬಾಲಭವನಗಳಿಗೆ 54.02 ಕೋಟಿ ರೂ. ಕೋರಿತ್ತು.

2024-25ನೇ ಸಾಲಿನಲ್ಲಿ ಘೋಷಿಸಲಿರುವ ಹೊಸ ಯೋಜನೆಗಳಾದ ಸ್ಮಾರ್ಟ್ ಅಂಗನವಾಡಿ ಯೋಜನೆಗೆ 408 ಕೋಟಿ ರೂ., ಅಂಗನವಾಡಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಶೂ, ಸಾಕ್ಸ್ಗಳನ್ನು ಒದಗಿಸಲು 212.30 ಕೋಟಿ ರೂ., ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಎರಡು ಜೊತೆ ಹೆಚ್ಚುವರಿ ಸಮವಸ್ತ್ರಗಳಿಗೆ 13.75 ಕೋಟಿ ರೂ., ಅಂಗನವಾಡಿ ಕಟ್ಟಡಗಳ ನಿರ್ಮಾಣ ಯೋಜನೆಗಳಿಗೆ 200.00 ಕೋಟಿ ರೂ., ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಘಟಕಗಳನ್ನು ಆರಂಭಿಸುವ ಸಂಬಂಧ 0.95 ಕೋಟಿ ರೂ. ಬೇಕಿದೆ ಎಂದು ಕೋರಿತ್ತು.

ಶ್ರೇಷ್ಠ ಆವಾಸ ಯೋಜನೆಗೆ 83.32 ಕೋಟಿ ರೂ., ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮಾಸಾಶನಕ್ಕೆ 57.42 ಕೋಟಿ ರೂ., ಸಮುದಾಯ ಆಧರಿತ ಪುನಶ್ಚೇತನ ಯೋಜನೆಗೆ 1.30 ಕೋಟಿ ರೂ., ಹಿರಿಯ ದೃಷ್ಟಿ ಯೋಜನೆಗೆ 1.35 ಕೋಟಿ ರೂ., ರಾಜ್ಯ ವಿಕಲಚೇತನರ ನಿಧಿ ಸ್ಥಾಪನೆಗೆ 10.00 ಕೋಟಿ ರೂ., ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ 1.52 ಕೋಟಿ ರೂ., ಸರಕಾರಿ ಅನುಪಾಲನ ಗೃಹಗಳಿಗೆ 4.00 ಕೋಟಿ ರೂ., ಬ್ಯಾಟರಿ ಚಾಲಿತ ವ್ಹೀಲ್ ಚೆಯರ್ಗಳಿಗೆ 50 ಕೋಟಿ ರೂ., ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಗೆ 3.83 ಕೋಟಿ ರೂ. ಅಂದಾಜಿಸಿತ್ತು.

ಅದೇ ರೀತಿ ವಿಕಲಚೇತರಿಗೆ ಮಾಸಾಶನ ಹೆಚ್ಚಿಸಲು 754.20 ಕೋಟಿ ರೂ., ಸ್ವಯಂ ಉದ್ಯೋಗಕ್ಕಾಗಿ 6.00 ಕೋಟಿ ರೂ., ಶಿಶುಪಾಲನಾ ಭತ್ತೆ ನೀಡಲು 0.70 ಕೋಟಿ ರೂ., ಸಾಧನೆ ಯೋಜನೆಯಡಿ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನಕ್ಕೆ 5.60 ಕೋಟಿ ರೂ., ವಿವಾಹ ಪ್ರೋತ್ಸಾಹ ಧನಕ್ಕೆ 5.50 ಕೋಟಿ ರೂ., ಹಿರಿಯ ನಾಗರಿಕರಿಗೆ ಮಾಸಾಶನ ಹೆಚ್ಚಿಸಲು 2,891.53 ಕೋಟಿ ರೂ. ಬೇಡಿಕೆ ಇರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - -ಜಿ.ಮಹಾಂತೇಶ್

contributor

Similar News