ಫ್ಯಾಕ್ಟ್ ಚೆಕ್ | ಜವಾಹರಲಾಲ್ ನೆಹರೂ ಭಾವಚಿತ್ರ 1954ರ ಕುಂಭಮೇಳದ್ದಲ್ಲ

Photo Source : X/Modified by Logically Facts
ಹೊಸದಿಲ್ಲಿ: ಹಲವಾರು ಎಕ್ಸ್ ಬಳಕೆದಾರರು ಭಾರತದ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಪ್ರಯಾಗ್ ರಾಜ್(ಈ ಹಿಂದೆ ಅಲಹಾಬಾದ್)ನಲ್ಲಿ ನಡೆದಿದ್ದ ಹಿಂದೂಗಳ ಧಾರ್ಮಿಕ ತೀರ್ಥಯಾತ್ರೆಯಾದ 1954ರ ಕುಂಭಮೇಳದ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಮಿಂದೆದ್ದರು ಎಂದು ಅವರ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದರು. ಈ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನುದ್ದೇಶಿಸಿ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, “ಕುಂಭಮೇಳಕ್ಕೆ ತೆರಳಿ ಗಂಗಾ ನದಿಯಲ್ಲಿ ಮಿಂದೇಳುವುದರಿಂದ ದೇಶದ ಬಡತನ ನಿವಾರಣೆಯಾಗುವುದೇ?” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಪ್ರತಿಯಾಗಿ, “1954ರಲ್ಲಿ ಪ್ರಯಾಗ್ ರಾಜ್ ನಲ್ಲಿ ಗಂಗಾ ನದಿಯಲ್ಲಿ ಮಿಂದೇಳುವ ಮೂಲಕ ಜವಾಹರಲಾಲ್ ನೆಹರೂ ಅವರು ದೇಶದ ಬಡತನವನ್ನು ಅಂತ್ಯಗೊಳಿಸುತ್ತಿದ್ದಾರೆ” ಎಂಬ ವ್ಯಂಗ್ಯಭರಿತ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ಈ ಕುರಿತು ಸತ್ಯ ಶೋಧನೆ ನಡೆಸಿರುವ abplive.com, ಜವಾಹರ್ ಲಾಲ್ ನೆಹರೂ ಅವರು ಗಂಗಾ ನದಿಯಲ್ಲಿ ಮುಳುಗೇಳುತ್ತಿರುವುದು ನಿಜವಾದರೂ, ಅದು ಕುಂಭ ಮೇಳದ್ದಲ್ಲ. ವಾಸ್ತವವಾಗಿ 1938ರಲ್ಲಿ ತಮ್ಮ ತಾಯಿಯ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಿದ ಸಂದರ್ಭದಲ್ಲಿ ಮಿಂದೆದ್ದದ್ದು ಎಂದು ದೃಢಪಡಿಸಿದೆ.
ಈ ಭಾವಚಿತ್ರದ ಕುರಿತು ರಿವರ್ಸ್ ಸರ್ಚ್ ನಡೆಸಿದಾಗ, “Book reviews: ‘The Nehrus: Personal Histories’ by Mushirul Hasan and Priya Kapoor” ಎಂಬ ಶೀರ್ಷಿಕೆಯ ಲೇಖನ ಪತ್ತೆಯಾಗಿದೆ. ಈ ಲೇಖನವು 2006ರಲ್ಲಿ India Today ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಭಾವಚಿತ್ರದ ಶೀರ್ಷಿಕೆಯಲ್ಲಿ ನೆಹರೂ ಅವರು ತಮ್ಮ ತಾಯಿಯ ಚಿತಾಭಸ್ಮವನ್ನು ಅಲಹಾಬಾದ್ ನಲ್ಲಿ ವಿಸರ್ಜಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕ ದಾಖಲೆಗಳ ಪ್ರಕಾರ, ಜವಾಹರ್ ಲಾಲ್ ನೆಹರೂ ಅವರ ತಾಯಿ ಸ್ವರೂಪ್ ರಾಣಿ ನೆಹರೂ ಅವರು ಜನವರಿ 10, 1938ರಂದು ನಿಧನರಾಗಿದ್ದರು.
The Quint ವರದಿಯ ಪ್ರಕಾರ, ಭಾರತವು ಸ್ವಾತಂತ್ರ್ಯ ಗಳಿಸಿದ ನಂತರ, 1954ರಲ್ಲಿ ನಡೆದಿದ್ದ ಕುಂಭಮೇಳಕ್ಕೆ ಭಾರತದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಹಾಗೂ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಸೇರಿದಂತೆ ಹಲವಾರು ರಾಜಕಾರಣಿಗಳು ಭೇಟಿ ನೀಡಿದ್ದರು. ಆದರೆ, ರಾಜೇಂದ್ರ ಪ್ರಸಾದ್ ಅವರು ನದಿಯಲ್ಲಿ ಮೀಯುವಾಗ, ನೆಹರೂ ಅವರು ಕುಂಭಮೇಳದ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದರು ಎನ್ನಲಾಗಿದೆ. ಈ ವರದಿಯ ಪ್ರಕಾರ, ಫೆಬ್ರವರಿ 4, 1954ರಂದು ಅಮೃತ ಬಝಾರ್ ಪತ್ರಿಕಾ ವರದಿಯಂತೆ ಸಂಗಮದಲ್ಲಿ ನಡೆದಿದ್ದ ಈ ಪವಿತ್ರ ಸ್ನಾನದಲ್ಲಿ ನೆಹರೂ ಭಾಗಿಯಾಗಿರಲಿಲ್ಲ. “ನಾನು ಪವಿತ್ರವಲ್ಲದೆ ಇರುವುದರಿಂದ, ಇತರರು ಸ್ನಾನ ಮಾಡಲಿ” ಎಂದು ಅವರು ಹೇಳಿದ್ದರು ಎಂದು ವರದಿಯಾಗಿದೆ.

ಕುಂಭಮೇಳಕ್ಕೆ ನೆಹರೂ ಹಾಗೂ ರಾಜೇಂದ್ರ ಪ್ರಸಾದ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಕಾಕತಾಳೀಯವೆಂಬಂತೆ ಮೌನಿ ಅಮಾವಾಸ್ಯೆಯಂದು ನಡೆದಿದ್ದ ಪವಿತ್ರ ಸ್ನಾನದ ಸಂದರ್ಭದಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯಲ್ಲಿ ಸುಮಾರು 800 ಮಂದಿ ಮೃತಪಟ್ಟಿದ್ದರು.
ಹೀಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಜವಾಹರ್ ಲಾಲ್ ನೆಹರೂ ಅವರ ಭಾವಚಿತ್ರ 1954ರದ್ದಲ್ಲ ಹಾಗೂ ಕುಂಭಮೇಳದಲ್ಲಿ ಗಂಗಾ ನದಿಯಲ್ಲಿ ಮುಳುಗೆದ್ದಿಲ್ಲ. ಬದಲಿಗೆ ಅವರ 1938ರಲ್ಲಿ ಅವರ ತಾಯಿ ನಿಧನರಾದಾಗ, ಅವರ ಚಿತಾಭಸ್ಮವನ್ನು ಅಂದಿನ ಅಲಹಾಬಾದ್ ನಲ್ಲಿನ ನದಿಯಲ್ಲಿ ವಿಸರ್ಜಿಸುವ ಸಂದರ್ಭದಲ್ಲಿ ತೆಗೆದಿದ್ದ ಭಾವಚಿತ್ರ ಎಂಬುದು ದೃಢಪಟ್ಟಿದೆ.
ಸೌಜನ್ಯ: news.abplive.com