ವಿಪಕ್ಷ ಮೈತ್ರಿಕೂಟ ಪ್ರಬಲ ಪರ್ಯಾಯವಾಗಲು ಒಂದು ಹೆಜ್ಜೆ ಹಿಂದಿಡಬೇಕಿದೆಯೆ ಕಾಂಗ್ರೆಸ್?
ವಿಧಾನಸಭೆ ಚುನಾವಣೆ ಫಲಿತಾಂಶಗಳಲ್ಲಿ ಕಾಂಗ್ರೆಸ್ನ ಸಂಭವನೀಯ ಗೆಲುವುಗಳು ಮೈತ್ರಿಗೆ ಒಂದು ದೊಡ್ಡ ಮಟ್ಟದ ಬಲವಾಗಲಿದೆ ಎಂಬುದನ್ನೂ, ಇಂಡಿಯಾ ಮೈತ್ರಿಕೂಟದ ನಾಯಕರ ನಡುವಿನ ಅಸಮಾಧಾನ ಶಮನಕ್ಕೆ ಅದು ಕಾರಣವಾದೀತು ಎಂಬುದನ್ನೂ ಯಾರೂ ಅಲ್ಲಗಳೆಯುವಂತಿಲ್ಲ. ಅಂತೆಯೇ, ಕಾಂಗ್ರೆಸ್ಗೆ ನಿರೀಕ್ಷೆಗಿಂತ ಭಿನ್ನವಾಗಿ ಹಿನ್ನಡೆಯಾದರೆ ಅದು ಮಿತ್ರಪಕ್ಷಗಳನ್ನು ಮತ್ತಷ್ಟು ಕೆರಳಿಸಲೂ ಬಹುದು.
28 ಪಕ್ಷಗಳ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಹಿನ್ನಡೆ ಕಂಡಿದೆಯೆ? ಇಂಥದೊಂದು ಪ್ರಶ್ನೆ ಎದುರಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೇಲೆ ಕಾಂಗ್ರೆಸ್ ಪ್ರತ್ಯೇಕವಾಗಿ ಗಮನ ಹರಿಸಿರುವುದು, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಡುವೆ ಒಂದು ಬಗೆಯ ಬಿರುಕಿಗೆ ಕಾರಣವಾಗಿದೆ. ಕಾಂಗ್ರೆಸ್ನ ಈ ನಡೆ ‘ಇಂಡಿಯಾ’ ಮೈತ್ರಿ ಪಕ್ಷಗಳಲ್ಲಿ ಒಂದು ಬಗೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಮೈತ್ರಿಕೂಟದ ಆಧಾರ ಸ್ತಂಭದಂತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟದ ವಿಚಾರವಾಗಿ ಕಾಂಗ್ರೆಸ್ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಾಟ್ನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಪ್ರತಿಪಕ್ಷಗಳೆಲ್ಲವೂ ಕಾಂಗ್ರೆಸ್ ನೇತೃತ್ವ ವಹಿಸುವುದನ್ನು ಒಪ್ಪಿಕೊಂಡಿದ್ದರೂ, ವಿಧಾನಸಭೆ ಚುನಾವಣೆಯ ಕಡೆಗೆ ಅದು ತೋರಿದ ಗಮನ ಇಂಡಿಯಾ ಮೈತ್ರಿಕೂಟದ ಆದ್ಯತೆಗಳನ್ನು ಮರೆ ಮಾಡಿದೆ ಎಂದು ತಕರಾರು ಎತ್ತಿದ್ದಾರೆ. ವಿಧಾನಸಭಾ ಚುನಾವಣೆಗಳ ಪರಿಣಾಮದ ಬಳಿಕವೇ ಕಾಂಗ್ರೆಸ್ ಪ್ರತಿಕ್ರಿಯಿಸಲಿದ್ದು, ಆನಂತರವೇ ಮೈತ್ರಿಕೂಟದ ಮುಂದಿನ ಸಭೆಯನ್ನು ಕರೆಯುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಆದರೂ, ನಿತೀಶ್ ಕುಮಾರ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇಬ್ಬರೂ ಬಿಹಾರ ಸರಕಾರದ ವಿವರವಾದ ಜಾತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮೂಲಕ ಬಿಜೆಪಿ ವಿರುದ್ಧ ರಾಜಕೀಯವಾಗಿ ಸೆಡ್ಡು ಹೊಡೆದಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಒಬಿಸಿ, ಎಸ್ಸಿ ಮತ್ತು ಎಸ್ಟಿಗಳಿಗೆ ಶೇ.೬೫ರಷ್ಟು ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ನಲ್ಲಿ ಅಳವಡಿಸುವಂತೆ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಜಾತಿ ಸಮೀಕ್ಷೆಯು ವೈಜ್ಞಾನಿಕವಾಗಿ ತೋರಿಸಿದ ಸವಾಲುಗಳನ್ನು ಎದುರಿಸಲು ಬಿಹಾರಕ್ಕೆ ವಿಶೇಷ ವರ್ಗ ಸ್ಥಾನಮಾನವನ್ನು ನೀಡಬೇಕೆಂದೂ ಆಗ್ರಹಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ಟೀಕೆ ಮಾಡಿರುವುದನ್ನು ಗಮನಿಸಬಹುದು. ಎಸ್ಪಿ ಮತ್ತು ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆಯ ವಿಚಾರದಲ್ಲಿ ಸೂಕ್ತ ತೀರ್ಮಾನಕ್ಕೆ ಬರುವಲ್ಲಿ ವಿಫಲವಾದ ನಂತರ, ಅಖಿಲೇಶ್ ಅವರು ಇಂಡಿಯಾ ಮೈತ್ರಿಯಲ್ಲಿ ತಮ್ಮ ಪಕ್ಷ ಇರಬೇಕೇ ಬೇಡವೇ ಎಂಬುದನ್ನು ಪುನರ್ವಿಮರ್ಶಿಸಬೇಕಾಗಿದೆ ಎಂದು ಹೇಳಿದರು. ಇಂಡಿಯಾ ಮೈತ್ರಿಕೂಟವು ೨೦೨೪ರ ಲೋಕಸಭೆ ಚುನಾವಣೆ ವಿಚಾರವಾಗಿ ಮಾತ್ರ ಒಂದು ತಿಳುವಳಿಕೆಗೆ ಬಂದಿರುವುದು ಎಂಬುದು ಕಾಂಗ್ರೆಸ್ ಸಮರ್ಥನೆ. ಆದರೆ ಈ ಸಮರ್ಥನೆ ಅಖಿಲೇಶ್ ಅವರು ಮಧ್ಯಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ದಾಳಿ ಮಾಡುವುದನ್ನು ತಡೆಯಲಿಲ್ಲ. ಹಿಂದುಳಿದವರು, ದಲಿತರು ಮತ್ತು ಆದಿವಾಸಿಗಳನ್ನು ಒಗ್ಗೂಡಿಸುವ ಎಸ್ಪಿಯ ರಾಜಕೀಯ ತಂತ್ರವು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸುತ್ತದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ ಮತದಾನ ಮುಗಿದ ನಂತರ ಅಖಿಲೇಶ್ ಅವರು ಕಾಂಗ್ರೆಸ್ನೊಂದಿಗೆ ಒಂದು ಬಗೆಯ ರಾಜಿ ಮಾಡಿಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವರು ತೋರುತ್ತಿರುವ ನಿಲುವು, ಲೋಕಸಭೆ ಚುನಾವಣೆಗೆ ಮೊದಲು ‘ಇಂಡಿಯಾ’ ಮೈತ್ರಿಕೂಟ ಏನೆಲ್ಲವನ್ನೂ ಎದುರಿಸಬೇಕಾಗಿ ಬರಬಹುದು ಎಂಬುದರ ಉತ್ತಮ ಸೂಚನೆಯಾಗಿದೆ.
‘ಇಂಡಿಯಾ’ ಮೈತ್ರಿಕೂಟ ರೂಪು ತಳೆದಾಗ, ಅದರೊಳಗೆ ಒಗ್ಗೂಡುವ ಪಕ್ಷಗಳು ತಮ್ಮ ಎಲ್ಲ ಹಳೆಯ ಭಿನ್ನಾಭಿಪ್ರಾಯಗಳನ್ನು ಪೂರ್ತಿ ಮರೆಯಬೇಕು ಇಲ್ಲವೇ ಬದಿಗಿಡಬೇಕು ಎಂಬುದು ಸ್ಪಷ್ಟವಾಗಿತ್ತು. ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದ ಮೈತ್ರಿಕೂಟದ ಮೊದಲ ಮೂರು ಸಭೆಗಳು, ಎಲ್ಲ ಪಕ್ಷಗಳು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಮತ್ತು ಬಿಜೆಪಿ ಆಡಳಿತದಲ್ಲಿನ ನಿರುದ್ಯೋಗ, ಹಣದುಬ್ಬರ, ಕೋಮು ಉದ್ವಿಗ್ನತೆ ಮತ್ತು ಪ್ರಜಾಪ್ರಭುತ್ವದ ಹಿನ್ನಡೆಯಂತಹ ವಿಚಾರಗಳ ಬಗ್ಗೆ ರಾಜಕೀಯ ನಿರೂಪಣೆಯನ್ನು ಪ್ರತಿಪಾದಿಸಲು ಹೆಚ್ಚು ದೃಢವಾಗಿರುವಂತೆಯೂ ಕಂಡುಬಂದವು.
ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಬೇಡಿಕೆಯು ಮೈತ್ರಿಕೂಟಕ್ಕೆ ಒಂದು ಸೈದ್ಧಾಂತಿಕ ಸ್ವರೂಪವನ್ನು ನೀಡಿತು. ಒಂದು ಕಾಲದಲ್ಲಿ ಸಾಮಾನ್ಯವಾಗಿ ಹಿಂಜರಿದಿದ್ದ ಕಾಂಗ್ರೆಸ್ ಕೂಡ ಸಾಮಾಜಿಕ ನ್ಯಾಯದ ರಾಜಕೀಯದ ಈ ಪ್ರತಿಪಾದನೆಯಲ್ಲಿ ಮುಖ್ಯವಾಗಿ ನಿಂತಿತು. ಮೇಲ್ನೋಟಕ್ಕೇ ಕಾಣಿಸಿದ ಬಿಜೆಪಿಯ ಗೊಂದಲ ಮತ್ತು ಭೀತಿ ‘ಇಂಡಿಯಾ’ ಮೈತ್ರಿಕೂಟದ ರಾಜಕೀಯ ನಿರೂಪಣೆಯನ್ನು ಮತ್ತಷ್ಟು ದೃಢಪಡಿಸಿತು. ಏಕೆಂದರೆ ಜಾತಿ ಜನಗಣತಿಯನ್ನು ಕೇಸರಿ ಪಕ್ಷದ ಹಿಂದೂ ರಾಷ್ಟ್ರೀಯತೆಯ ವಿರುದ್ಧ ಪ್ರಬಲ ಸವಾಲು ಎಂದು ಗ್ರಹಿಸಲಾಯಿತು. ಇಂಡಿಯಾ ಮೈತ್ರಿಕೂಟವನ್ನು ಕೇವಲ ೨೦೨೪ರ ಚುನಾವಣೆಗೆ ಪೂರ್ವದ ಮೈತ್ರಿಯಾಗಿ ನೋಡದೆ ಬಿಜೆಪಿ ವಿರುದ್ಧದ ಸೈದ್ಧಾಂತಿಕ ವೇದಿಕೆಯಾಗಿಯೂ ನೋಡಲಾಗಿದೆ.
ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗಮನ ಕೇಂದ್ರೀಕರಿಸುತ್ತಿದ್ದಂತೆ ‘ಇಂಡಿಯಾ’ ಪರಿಕಲ್ಪನೆಗೆ ಹಿನ್ನಡೆಯಾಯಿತು. ‘ಇಂಡಿಯಾ’ ಮೈತ್ರಿಕೂಟದ ನಾಯಕರ ನಡುವಿನ ಅಸಮಾಧಾನವು ಯುನೈಟೆಡ್ ಫ್ರಂಟ್ನ ಕಲ್ಪನೆಯನ್ನು ಮತ್ತೆ ಕೇಂದ್ರ ಸ್ಥಾನಕ್ಕೆ ತರಲು ಮತ್ತೊಂದು ದೊಡ್ಡ ಸುತ್ತಿನ ರಾಜಕೀಯ ಕಸರತ್ತಿನ ಅಗತ್ಯ ಇರುವ ಹಾಗೆ ಈಗ ಕಾಣಿಸುತ್ತಿದೆ. ಆದರೂ, ವಿಧಾನಸಭೆ ಚುನಾವಣೆ ಫಲಿತಾಂಶಗಳಲ್ಲಿ ಕಾಂಗ್ರೆಸ್ನ ಸಂಭವನೀಯ ಗೆಲುವುಗಳು ಮೈತ್ರಿಗೆ ಒಂದು ದೊಡ್ಡ ಮಟ್ಟದ ಬಲವಾಗಲಿದೆ ಎಂಬುದನ್ನೂ, ‘ಇಂಡಿಯಾ’ ಮೈತ್ರಿಕೂಟದ ನಾಯಕರ ನಡುವಿನ ಅಸಮಾಧಾನ ಶಮನಕ್ಕೆ ಅದು ಕಾರಣವಾದೀತು ಎಂಬುದನ್ನೂ ಯಾರೂ ಅಲ್ಲಗಳೆಯುವಂತಿಲ್ಲ. ಅಂತೆಯೇ, ಕಾಂಗ್ರೆಸ್ಗೆ ನಿರೀಕ್ಷೆಗಿಂತ ಭಿನ್ನವಾಗಿ ಹಿನ್ನಡೆಯಾದರೆ ಅದು ಮಿತ್ರಪಕ್ಷಗಳನ್ನು ಮತ್ತಷ್ಟು ಕೆರಳಿಸಲೂ ಬಹುದು.
‘ಇಂಡಿಯಾ’ ಮೈತ್ರಿಕೂಟ ದಲ್ಲಿ ಎಸ್ಪಿ, ಆರ್ಜೆಡಿ ಅಥವಾ ಶಿವಸೇನೆಯಂತಹ ಹೆಚ್ಚಿನ ಸಂಖ್ಯೆಯ ಪಕ್ಷಗಳು ಕಾಂಗ್ರೆಸ್ ಅನ್ನು ವಿರೋಧಿಸುವ ಮೂಲಕ ರಾಜಕೀಯ ಶಕ್ತಿಗಳಾಗಿ ಹೊರಹೊಮ್ಮಿದವು. ಈ ಪಕ್ಷಗಳ ಒಟ್ಟಾರೆ ನಿಲುವು ಕಾಂಗ್ರೆಸ್ ಜೊತೆಗೆ ಕೆಲಸ ಮಾಡುವ ಆಲೋಚನೆಗೆ ವಿರುದ್ಧವಾಗಿದೆ. ಆದರೆ ಕಳೆದ ದಶಕದಲ್ಲಿ ಬಿಜೆಪಿಯ ಸರ್ವತೋಮುಖ ಪ್ರಾಬಲ್ಯವು ಈ ಪಕ್ಷಗಳನ್ನು ಹಿಂದೆಂದಿಗಿಂತಲೂ ಹತ್ತಿರಕ್ಕೆ ತಂದಿದೆ. ಈ ಪಕ್ಷಗಳ ಕಾರ್ಯಕರ್ತರಿಗೆ ಈಗ ಅವರ ನಾಯಕರಿಂದ ಬೇಕಾಗಿರುವುದು ಒಗ್ಗಟ್ಟಿನಿಂದ ಹೋರಾಡಬೇಕೆಂಬ ಸ್ಪಷ್ಟ ಸಂದೇಶ.
ಇತರ ವಿಚಾರಗಳೂ ಇವೆ. ಉದಾಹರಣೆಗೆ, ಜಾತಿ ಗಣತಿಗೆ ಬೇಡಿಕೆಯಿಡುವ ಮೂಲಕ ಉತ್ತರ ಪ್ರದೇಶದಲ್ಲಿ ತನ್ನ ಸಂಘಟನೆಯ ಬಲವನ್ನು ಬೆಳೆಸಲು ಪ್ರಯತ್ನಿಸಿದರೆ ಸಮಾಜವಾದಿ ಪಕ್ಷದ ವಿರುದ್ಧವೇ ಕಾಂಗ್ರೆಸ್ ಸಜ್ಜಾಗಬಹುದು ಎಂಬ ಭಯ ಅಖಿಲೇಶ್ ಯಾದವ್ ಅವರನ್ನು ಕಾಡುತ್ತಿದೆ. ಹೀಗಾಗಿ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ‘ಇಂಡಿಯಾ’ ಬಣವು ಒಗ್ಗೂಡಲು, ಜಾತಿ ಮತ್ತು ವರ್ಗದ ಗುಂಪುಗಳ ಮತದಾರರನ್ನು ಸೆಳೆಯಲು ಎರಡೂ ಪಕ್ಷಗಳು ವಿಭಿನ್ನ ವಿಷಯಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಅವರು ನಂಬುತ್ತಾರೆ. ಮಧ್ಯಮ ವರ್ಗದವರನ್ನು ಆಕರ್ಷಿಸುವ ಅಭಿವೃದ್ಧಿ ನಿರೂಪಣೆಯನ್ನು ಮುನ್ನಡೆಸಲು ಕಾಂಗ್ರೆಸ್ ಸಮರ್ಥವಾಗಿದ್ದರೆ, ಸಮಾಜವಾದಿ ಪಕ್ಷವು ಜಾತಿ ಗಣತಿಯ ಕಲ್ಪನೆಯನ್ನು ಮುಂದೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂಬುದು ಅವರ ಲೆಕ್ಕಾಚಾರ.
ಆದರೂ, ಬಿಜೆಪಿ ವಿರುದ್ಧ ನೇರ ಪೈಪೋಟಿಗೆ ಇಳಿಯಬೇಕಿರುವ ಮಧ್ಯಪ್ರದೇಶ, ರಾಜಸ್ಥಾನ ಅಥವಾ ಛತ್ತೀಸ್ಗಡದಂತಹ ರಾಜ್ಯಗಳಲ್ಲಿ ಒಬಿಸಿಗಳು ಮತ್ತು ದಲಿತರನ್ನು ಸೆಳೆಯಲು ಅಗತ್ಯವಾಗಿ ಬೇಕಿರುವ ತಂತ್ರಗಳನ್ನೇ ಕಾಂಗ್ರೆಸ್ ಸಮರ್ಪಕವಾಗಿ ಅನುಸರಿಸಲಿದೆ. ಈಗಾಗಲೇ ಅದು ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ನಡೆಸುವ ವಿಚಾರವನ್ನು ಮುಖ್ಯವಾಗಿ ಪ್ರತಿಪಾದಿಸಿದೆ.
ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳ ನಡುವಿನ ಈ ವ್ಯತ್ಯಾಸಗಳು ಈಗ ಅಥವಾ ನಂತರ ‘ಇಂಡಿಯಾ’ ಮೈತ್ರಿಕೂಟದಲ್ಲಿ ಮುಖ್ಯ ವಿಚಾರಗಳಾಗಲಿವೆ. ವಿಧಾನಸಭಾ ಚುನಾವಣೆಯಲ್ಲಿನ ಸಕಾರಾತ್ಮಕ ಫಲಿತಾಂಶವು ತನಗೆ ಹೆಚ್ಚು ಅಗತ್ಯವಿರುವ ಬಲವನ್ನು ನೀಡುತ್ತದೆ ಮತ್ತು ಪರಸ್ಪರರ ನಿಲುವುಗಳನ್ನು ಒಂದು ಮಿತಿಗೆ ಒಳಪಡಿಸುವ ರಾಜ್ಯವಾರು ಚುನಾವಣಾ ಮತ್ತು ರಾಜಕೀಯ ಸೂತ್ರವನ್ನು ರೂಪಿಸಲು ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೆ ಅವಕಾಶವನ್ನು ನೀಡುತ್ತದೆ ಎಂಬುದು ಕಾಂಗ್ರೆಸ್ ಆಶಯ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸಾಮಾನ್ಯ ಕಾಳಜಿಗಳ ಸುತ್ತ ಒಗ್ಗೂಡಿರುವುದರಿಂದ, ಅವು ಭಿನ್ನಾಭಿಪ್ರಾಯಗಳನ್ನು ಹೆಚ್ಚು ಮಾಡಿಕೊಳ್ಳುವ ಬದಲು ಸಾಧ್ಯವಾದಷ್ಟೂ ಪರಿಹರಿಸಿಕೊಳ್ಳುವ ಸಂಭವ ಹೆಚ್ಚು.
‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಪಕ್ಷಗಳು ಮುಂದಿನ ಕೆಲವು ಸಭೆಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪರಸ್ಪರರ ಕಾಳಜಿಯ ವಿಚಾರವಾಗಿ ಒಮ್ಮತಕ್ಕೆ ಬರಲು ಪ್ರಯತ್ನಿಸುತ್ತವೆ. ಮೈತ್ರಿಕೂಟದ ನೇತೃತ್ವ ವಹಿಸುವ ಕಾಂಗ್ರೆಸ್, ಬಿಜೆಪಿಯೊಂದಿಗೆ ನೇರ ಸ್ಪರ್ಧೆಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಎಲ್ಲಾ ಪಕ್ಷಗಳ ಬೆಂಬಲವನ್ನು ಪಡೆಯುವ ಹೊತ್ತಲ್ಲಿಯೇ, ಕೆಲವು ರಾಜ್ಯಗಳಲ್ಲಿ ನಿಜವಾಗಿಯೂ ಪ್ರಬಲವಾಗಿರುವ ಪಕ್ಷಗಳಿಗೆ ಬೆಂಬಲ ನೀಡಲು ತಾನು ಹಿಂದೆ ಸರಿಯುವುದು ರಾಜಕೀಯವಾಗಿ ಮಹತ್ವದ ನಡೆಯಾಗಲಿದೆ. ಆಗ ಮಾತ್ರ ‘ಇಂಡಿಯಾ’ ಪರಿಕಲ್ಪನೆಯನ್ನು ನಂಬಲರ್ಹ ಪರ್ಯಾಯವಾಗಿ ಕಾಣುವ ಅವಕಾಶ ಒದಗಲಿದೆ.
(ಕೃಪೆ: thewire.in)