ಇಶಾ ಫೌಂಡೇಷನ್ ಗೆ ಜಮೀನು: ಪ್ರಾದೇಶಿಕ ಆಯುಕ್ತರಿಂದ ಕೋರಿಕೆ ತಿರಸ್ಕಾರ
ಬೆಂಗಳೂರು : ಸಾರ್ವಜನಿಕ ಹಿತಾಸಕ್ತಿ ಇಲ್ಲದ್ದಿದ್ದರೂ ರಸ್ತೆ ಉದ್ದೇಶದ ಹೆಸರಿನಲ್ಲಿ ಗೋಮಾಳ, ಗೋ ಕಾಡು ಕಡಿಮೆ ಮಾಡಬೇಕು ಎಂದು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ಕೋರಿಕೆ ಕುರಿತು ಸರಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಇಶಾ ಫೌಂಡೇಷನ್ ಗೆ ಜಮೀನು ಪ್ರಾದೇಶಿಕ ಆಯುಕ್ತರಿಂದ ಕೋರಿಕೆ ತಿರಸ್ಕಾರ ಸಲ್ಲಿಕೆ ಮಾಡಿದ್ದ ಕೋರಿಕೆ ಆಧರಿಸಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿಯವರು ಸಲ್ಲಿಸಿದ್ದ ವರದಿಗಳನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪರಿಶೀಲಿಸಿದ್ದಾರೆ. ಆದರೆ ಇಶಾ ಫೌಂಡೇಷನ್ ಕೋರಿಕೆಯನ್ನು ತಮ್ಮ ಹಂತದಲ್ಲಿ ತಿರಸ್ಕರಿಸಿಲ್ಲ. ಬದಲಿಗೆ ಈ ಕೋರಿಕೆಯು ಅನರ್ಹವಾಗಿದೆ ಎಂದು ಷರಾ ಬರೆದಿದ್ದಾರೆ.
ಇಶಾ ಫೌಂಡೇಷನ್ ಕೋರಿಕೆ ಮತ್ತು ಪ್ರಸ್ತಾವನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಗಾರಿಕೆಯನ್ನು ಸರಕಾರದ ಹೆಗಲಿಗೆ ಹಾಕಿದ್ದಾರೆ. ಈ ಸಂಬಂಧ "the-file.in"ಗೆ ದಾಖಲೆಗಳು ಲಭ್ಯವಾಗಿವೆ.
ಹಾಗೆಯೇ ರಸ್ತೆ ಉದ್ದೇಶಕ್ಕಾಗಿ ಕಾಯ್ದಿರಿಸಲು ಉದ್ದೇಶಿಸಿರುವ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶವನ್ನು ಮೀಸಲು ಅರಣ್ಯ ಎಂದು ತೀರ್ಮಾನಿಸುವ ಅಧಿಕಾರವಿರದಿದ್ದರೂ ಕೋಲಾರ ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಯು ತೀರ್ಮಾನಿಸಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ ಇಶಾ ಫೌಂಡೇಶನ್‌ನ ಕೋರಿಕೆಯು, ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸಂಪರ್ಕ ಹೊಂದಲು ದಾರಿ ಮಾಡಿಕೊಡುತ್ತದೆ. ಮತ್ತು ಫೌಂಡೇಶನ್‌ನ ಹಲವು ನಿವೇಶನಗಳನ್ನು ಏಕ ನಿವೇಶನವೆಂದು ಪರಿಗಣಿಸಲು ಸಹ ಅವಕಾಶ ಕಲ್ಪಿಸಲಿತ್ತು ಎಂಬುದು ಸಹ ಗೊತ್ತಾಗಿದೆ.
ಹೀಗಾಗಿ ಇಶಾ ಫೌಂಡೇಶನ್‌ನ ಕೋರಿಕೆಯು ಅನರ್ಹವಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಕೋರಿಕೆಯನ್ನು ತಮ್ಮ ಹಂತದಲ್ಲಿ ತಿರಸ್ಕರಿಸಿದ್ದಾರೆ. ಈ ಕುರಿತು ಸರಕಾರಕ್ಕೆ 2024ರ ಅಕ್ಟೋಬರ್ 10ರಂದು ತಮ್ಮ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಿದ್ದಾರೆ.
ಪ್ರಕರಣದ ವಿವರ
ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ಆವಲಗುರ್ಕಿ ಗ್ರಾಮದ ಸರ್ವೇ ನಂಬರ್ 174ರಲ್ಲಿ 4.23 ಎಕರೆ, ಸರ್ವೆ ನಂಬರ್ 175ರಲ್ಲಿ 1.37 ಎಕರೆ, ಕವರ್ನಹಳ್ಳಿ ಗ್ರಾಮದ ಸರ್ವೇ ನಂಬರ್ 137ರಲ್ಲಿ 0-19 ಎಕರೆ, ಸರ್ವೇ ನಂಬರ್ 123ರಲ್ಲಿ 1-18 ಎಕರೆ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಕಾಯ್ದಿರಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವದ ಕುರಿತು ಪ್ರಾದೇಶಿಕ ಆಯುಕ್ತರು ಹಲವು ಅಂಶಗಳನ್ನು ಗಮನಿಸಿದ್ದರು.
ಪಹಣಿಯಂತೆ ಸರ್ವೇ ನಂಬರ್ 174ರಲ್ಲಿ 125 ಎಕರೆ ಅರಣ್ಯ ಸೇರಿದಂತೆ ಗೋಮಾಳ ಜಮೀನು ಇದೆ. ಇದರಲ್ಲಿ ಗೋಮಾಳ ಮತ್ತು ಅರಣ್ಯ ಜಮೀನಿನ (ಅರಣ್ಯ ಜಮೀನು ಎಂದು ಅಧಿಸೂಚಿದಾಗಿನ ಗಡಿ ವಿವರಣೆಯಂತೆ) ಗಡಿಯನ್ನು ನಕ್ಷೆಯಲ್ಲಿ ಗುರುತಿಸಿಲ್ಲ ಎಂಬ ಅಂಶವನ್ನು ಪ್ರಾದೇಶಿಕ ಆಯುಕ್ತರು ಗಮನಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.
ರಸ್ತೆ ಉದ್ದೇಶಕ್ಕಾಗಿ ಕಾಯ್ದಿರಿಸಲು ಉದ್ದೇಶಿಸಿರುವ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶವನ್ನು ಮೀಸಲು ಅರಣ್ಯ ಎಂದು ತೀರ್ಮಾನಿಸಲಾಗಿದೆ ಎಂದು ಕೋಲಾರ ಉಪ ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿ ವರದಿ ಸಲ್ಲಿಸಿದ್ದರು. ಆದರೆ ಸರಕಾರದ ಹೊರತು ಅರಣ್ಯ ವ್ಯವಸ್ಥಾಪನಾಧಿಕಾರಿಯವರಿಗೆ ಇದನ್ನು ತೀರ್ಮಾನಿಸುವ ಅಧಿಕಾರವಿರುವುದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಸ್ಪಷ್ಟವಾಗಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪ್ರಸ್ತಾಪಿತ ರಸ್ತೆ ಉದ್ದೇಶಕ್ಕಾಗಿ ಕಾಯ್ದಿರಿಸಲು ಗುರುತಿಸಿರುವ ಸರ್ವೇ ನಂಬರ್‌ಗಳು ಮತ್ತು ವಿಸ್ತೀರ್ಣವು ವಿಸ್ತಾರವಾಗಿರುವ ಸರಕಾರಿ ಮತ್ತು ಖಾಸಗಿ ಸರ್ವೇ ನಂಬರ್‌ಗಳಿಂದ ಸಮ್ಮಿಶ್ರಿತವಾಗಿದೆ. ಪ್ರಸ್ತಾಪಿತ ರಸ್ತೆಯ ಭಾಗಶಃ ಭಾಗವು ಸಾರ್ವಜನಿಕ ರಸ್ತೆಯಾಗಿದೆಯಲ್ಲದೇ ಅತಿ ಹೆಚ್ಚಿನ
ಭಾಗವು ಖಾಸಗಿ ರಸ್ತೆಯಾಗಿದೆ. ಪ್ರಸ್ತಾಪಿತ ರಸ್ತೆಯು ಸಂಪೂರ್ಣವಾಗಿ ಸಾರ್ವಜನಿಕ ರಸ್ತೆಯಾಗಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.
ಅದೇ ರೀತಿ ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರ ಗೋಮಾಳ ಜಮೀನನ್ನು ಕಡಿಮೆ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದಿಲ್ಲ ಮತ್ತು ವಿಸ್ತಾರವಾದ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆ ಅಸ್ತಿತ್ವದಲ್ಲಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ರಸ್ತೆ ಉದ್ದೇಶಕ್ಕೆ ಗೋಮಾಳ, ಗೋಕಾಡು ಕಡಿಮೆ ಮಾಡಲು ಕೋರಿ ಖಾಸಗಿ ಸಂಸ್ಥೆಯಾದ ಇಶಾ ಫೌಂಡೇಷನ್ ಸಲ್ಲಿಸಿರುವ ಕೋರಿಕೆಯು ಅವರು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸಂಪರ್ಕ ಹೊಂದುವ ಮೂಲಕ ಅವರ ಹಲವು ನಿವೇಶನಗಳನ್ನು ಒಂದೇ ನಿವೇಶನವೆಂದು ಪರಿಗಣಿಸಲು ಅನುವು ಮಾಡಿಕೊಡುತ್ತದೆ. ಇದು ಸ್ವತಃ ಖಾಸಗಿ ಉದ್ದೇಶವನ್ನಾಗಿ ಮಾಡುತ್ತದೆ. ಮತ್ತು ಕೋರಿಕೆಯು ಪರಿಗಣಿಸಲು ಅನರ್ಹವಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರು ವಿವರಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಖಾಸಗಿ ಸರ್ವೇ ನಂಬರ್‌ಗಳಲ್ಲಿನ ಜಮೀನಿನಲ್ಲಿ ಪ್ರಸ್ತಾಪಿಸಿರುವ ರಸ್ತೆಯ ಪ್ರದೇಶವನ್ನು ಸರಕಾರಕ್ಕೆ ಪರಿತ್ಯಾಜನೆ (Relinquish) ಮಾಡಬೇಕು. ಆ ನಂತರ ಸರ್ವೇ ನಂಬರ್ 174ರಲ್ಲಿ ಒಳಗೊಂಡಿರುವ ಗೋಮಾಳ ಮತ್ತು ಅರಣ್ಯ ಜಮೀನಿನ ಗಡಿಯನ್ನು ಜಂಟಿ ಸರ್ವೇ ನಡೆಸಬೇಕು. ನಂತರ ಪ್ರಸ್ತಾವನೆಯನ್ನು ಪರಿಗಣಿಸುವ ಬಗ್ಗೆ ಸರಕಾರದ ಹಂತದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದ್ದಾರೆ.