ಭಾವ - ವಿಕಲ್ಪ
ಭವತಿ ಭಿಕ್ಷಾಂದೇಹಿ
ಬೇಡಿ ನಿಂದನು ಸಂತ
ಮನೆಯ ಬಾಗಿಲಲ್ಲಿ
ನೀಡ ಬಂದಳು ಗರತಿ
ಆಗಿನ್ನ ಮಿಂದು ಮಡಿಯುಟ್ಟ
ಮಹಾಸತಿ ಚೆಲುವಿನ ರತಿ.
ಮೊರದ ತುಂಬಾ ಕಾಳು
ತುಂಬು ನಗೆಯ ಬಾಳು
ಕಂಡದ್ದೆ ಸಂತನ ಭಾವ ಚಂಚಲನ
ತುಂಬಿದೆದೆಯೆಡೆಗೆ
ನಿಡುನೋಟ
ಇರಿವ ಕಾಮನ ಬೇಟ.
ಜೋಳಿಗೆ ಯೊಡ್ಡದೆ ನಿಂತ
ಸಂತನ ಭಾವದಿಂಗಿತಕೆ
ನಕ್ಕಳು ಮಹಾಸತಿ ಗರತಿ.
ಕ್ಷಣದಲ್ಲಿ ಎಚ್ಚೆತ್ತ ಸಂತ;
ಭಾವದೊಳಗಿನ ಭಾವ
ಅನುಭಾವದೆರಕದಲಿ.
ಕಣ್ಣಿಗೆ ಕಾಣುವ ದೇವರು
ಭಾವದೇವನ ತವರು
ಭಾವವಿಕಲ್ಪದಲಿ ಮಂಪರು.
ಪರಿತಪಿಸುತ ಸತಿಯ
ಪಾದಕೆ ಸುತನೆರಗಿದ
ಗುರು ಗೋವಿಂದ
ಸ್ಮರಣೆಯಲಿ.
ಬಗಲ ಜೋಳಿಗೆ ತೆಗೆದು
ಪಕ್ಕಕಿರಿಸುತ ನಿಂದ
ತಾಯಿಯೆದುರಿಗೆ
ಕರಮುಗಿದು.
ಭಿಕ್ಷುಕ ನಿಂದಿಹೆನು
ನಿನ್ನೆದುರು ದೀನನಾಗಿ
ಭಿಕ್ಷೆಯ ಕೊಡು ತಾಯೆ.
ನಾನು ಕೇಳುವ ಭಿಕ್ಷೆ
ಇಲ್ಲವೆನ್ನಲು ಬೇಡ
ಗುರುವಿನ ಆಣತಿಯಾಗಿದೆ
ಬೇಡಿ ನಿಂದೆನು ತಾಯೆ.
ತಂದಿರುವೆ ಮೊರತುಂಬಿ
ಭಾವ ಬಾವುಣಿಕೆಯಲಿ
ನೀಡುವೆನು ಜೋಳಿಗೆಗೆ
ಒಡ್ಡಿ ಗುರುವೇ ಗುರು ಪಾದವೆ
ಮೊರದ ಭಿಕ್ಷೆಯು
ಮಲಿನಗೊಂಡಿದೆ ತಾಯೆ
ಗುರುವಿನಾದೇಶ
ಬೇಡೆನಗೆ ಆ ಭಿಕ್ಷೆ.
ಬೇರೆ ಮೊರದಲಿ
ಬೇರೆ ದವಸವ ತರುವೆ
ಬೇಡ ತಾಯೇ ಬೇಡ
ಕಾಳಿನ ಭಿಕ್ಷೆಗೆ ಕರಗುವ
ಭಾವ ವಿಕಲ್ಪವಿದಲ್ಲ.
ಕೊಟ್ಟು ಪಡೆವ ದಾನವಿದಲ್ಲ
ಸುಟ್ಟು ಕಳೆವ ಕಸವಿದವ್ವ
ಕೊಡುವವರೆಗೂ
ಬಿಡೆನು ಜಾಗವ.
ಏನ ಕೊಡಲಿ ಹೇಳಿ ತಂದೆ
ದೀನಳಾಗಿ ಬೇಡುತಿಹೆನು.
ಪಡಸಾಲೆಯ ಗೊಡೆಯಲ್ಲಿ
ನೇತು ಹಾಕಿದ ಬಾರುಕೋಲು
ತೋರಿಸುತ್ತ ಸಂತ ಹೇಳಿದ
ಎಣಿಸಿ ಇಪ್ಪತ್ತೈದು
ಛಡಿಯೇಟು
ಹೊಡೆ ತಾಯೆ .
ಹಾಲು ಕುಡಿಸುವ
ಎದೆಯ ಬೆದೆಗೆ
ಎಳಸಿದ್ದಕ್ಕೆ.
ನಿಬ್ಬೆರಗಿನಲಿ
ಬೆಬ್ಬಳಿಸಿದಳು ತಾಯಿ.
ಶಿರ ಬಾಗಿ ಬೆನ್ನೊಡ್ಡಿ
ನಿಂದನು ತಂದೆ.