ಪಣಿಯನ್ ಹೆಣ್ಣು ಮಗಳ ಶೈಕ್ಷಣಿಕ ಪಯಣ!

Update: 2024-01-06 05:44 GMT

ಹೆಗ್ಗಡದೇವನ ಕೋಟೆಯ ಡಿ ಬಿ ಕುಪ್ಪೆ ಗ್ರಾಮ ಪಂಚಾಯತಿಯ ಸೇಬಿನಕೊಲ್ಲಿ ಹಾಡಿಯ ನಿವಾಸಿಗಳಾದ ರಾಜು ಮತ್ತು ಲಕ್ಷ್ಮಿಯವರ ಪುತ್ರಿ ದಿವ್ಯಾ ಎಸ್.ಆರ್. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಚ್ಚೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿ.ಬಿ ಕುಪ್ಪೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ತಮ್ಮ ಶೈಕ್ಷಣಿಕ ಪಯಣದ ಕಠಿಣ ಯಾತ್ರೆಯನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಸೇಬಿನಕೊಲ್ಲಿ ಎಂಬ ಚಿಕ್ಕ ಕುಗ್ರಾಮ. ಇದು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಅಂತರಸಂತೆ ಹೋಬಳಿಯ ದೊಡ್ಡಬೈರನ ಕುಪ್ಪೆ ಗ್ರಾಮದ ಸಮೀಪದಲ್ಲಿದೆ. ಈ ಗ್ರಾಮದ ರಾಜು ಮತ್ತು ಲಕ್ಷ್ಮೀ ಎಂಬ ದಂಪತಿಗಳಿಗೆ ನಾನು ಹುಟ್ಟಿದೆ. ನನ್ನ ಹೆಸರು ದಿವ್ಯ. ದೀಬು, ದೀಬ ಉಳಿದ ಸೋದರರು. ಕಡು ಬಡತನದಲ್ಲಿ ಜೀವನ ನಿರ್ವಹಿಸುತ್ತಾ, ಕಾಕನಕೋಟೆ ಕಾಡಿನ ಕಿರು ಉತ್ಪನ್ನವನ್ನು ಅವಲಂಬಿಸಿಕೊಂಡು ಕುಮರಿ ಬೇಸಾಯ ಮಾಡಿ, ಕೂಲಿಯನ್ನು ಅವಲಂಬಿಸಿ ಜೀವನ ನಿರ್ವಹಿಸಿದವರು. ವಾಸಿಸಲು ಯೋಗ್ಯವಾದ ಮನೆ, ಕರೆಂಟು ಮೊದಲಾದ ಯಾವುದೇ ಸೌಲಭ್ಯ ಇಲ್ಲದೆ ಅರಣ್ಯದ ಗಡಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಂತಹ ಚಿಕ್ಕ ಕುಟುಂಬ. ನನ್ನ ಬಾಲ್ಯದ ಅನುಭವಗಳು ಹೇಳುವುದಾರೆ ಸಂತೋಷದ ಒಂದು ನಿಮಿಷಗಳು ನನ್ನ ಜೀವನದಲ್ಲಿ ಇಲ್ಲವೇನೋ ಎನಿಸುತ್ತದೆ. ಕಾರಣ ನನ್ನ ತಂದೆ ಮದ್ಯಪಾನಿಯಾಗಿದ್ದರು.

ನಾನು ಅಮ್ಮನ ಗರ್ಭದಲ್ಲಿ ಇರುವಾಗ ತಾಯಿಯೊಟ್ಟಿಗೆ ಜಗಳ ಮಾಡಿಕೊಂಡು ಅಮ್ಮನನ್ನು ಬಿಟ್ಟು ಅವರ ಊರಿಗೆ ಹೋದರು. ನಾನು ಹುಟ್ಟಿದ ನಂತರ ‘ನಿನಗೆ ಮಗಳು ಹುಟ್ಟಿದ್ದಾಳೆ’ ಎಂದು ಸಂಬಂಧಿಕರು ತಿಳಿಸಿದ ಮೇಲೆ ನಮ್ಮ ತಂದೆ ಊರಿಗೆ ಬರುತ್ತಾರೆ. ಕುಡಿತದಿಂದ ಅದೆಷ್ಟೋ ಬಾರಿ ನಮ್ಮನ್ನು ಬಿಟ್ಟು ಹೋಗಿ ಮತ್ತೆ ವಾಪಸ್ ಬಂದಿದ್ದಾರೆ. ಹೊಟ್ಟೆಗೆ ಊಟ, ಮೈಗೆ ಬಟ್ಟೆ ಇಲ್ಲದೇ ಎಷ್ಟೋ ದಿನಗಳನ್ನು ಕಳೆದಿದ್ದೇವೆ. ಮಕ್ಕಳು ಬೆಳೆಯುತ್ತಿದ್ದಂತೆ ತಂದೆ ತಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬದುಕಲು ನಿರ್ಧರಿಸಿದರು. ನಾನು ಇನ್ನೂ ಚಿಕ್ಕವಳು. ನನ್ನ ಜೊತೆ ನನ್ನ ತಮ್ಮನು ಇದ್ದ. ನನ್ನ ತಂದೆ ತಾಯಿ ಇಬ್ಬರು ಕುಮರಿ ಬೇಸಾಯದ ಜೊತೆಗೆ ಭೂಮಾಲಕರ ತೋಟಗಳಿಗೆ ಕೂಲಿ ಕೆಲಸಕ್ಕೆ ಕೇರಳಕ್ಕೆ ಹೋಗುತ್ತಿದ್ದರು. ನಂಜಮ್ಮ ನಮ್ಮ ಅಜ್ಜಿ. ನಮ್ಮನ್ನು ನೋಡಿಕೊಂಡು ತಮ್ಮ ಮನೆ ಮತ್ತು ಹೊಲದಲ್ಲಿ ಕೆಲಸದಲ್ಲಿ ತೊಡಗುತ್ತಿದ್ದರು. ಒಂದು ವರ್ಷದ ನಂತರ ನಮಗೆ ತಂಗಿ ಹುಟ್ಟಿದಳು. ನಮ್ಮನ್ನು ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆಳೆಸಿದರು. ಏನೇ ತಂದರು ಹಂಚಿ ತಿನ್ನಲು ಹೇಳುವರು. ಮತ್ತೊಬ್ಬರ ಮನೆಗೆ ಹೋಗುವುದಾಗಲಿ, ಬೇರೆ ಮಕ್ಕಳ ಜೊತೆ ಆಟ ಆಡುವುದಕ್ಕಾಗಲಿ ಕಳುಹಿಸುತ್ತಿರಲಿಲ್ಲ.

ನಮ್ಮನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡು ತಾವು ಮಾಡುವ ಕೆಲಸವನ್ನು ಹೇಳಿ ಕೊಡುತ್ತಾ, ಕೆಲಸ ಮಾಡಿನೋಡು ಎಂದು ಪ್ರೊತ್ಸಾಹಿಸುತ್ತಾ, ನಮಗೆ ಮನೆಯಲ್ಲಿ ಚಿಕ್ಕ-ಚಿಕ್ಕ ಕೆಲಸವನ್ನು ಹೇಳಿಕೊಡುವುದರೊಂದಿಗೆ ನಮ್ಮ ತಂದೆ ಆಟ ಆಡಿಸುತ್ತಿದ್ದರು. ಅಮ್ಮ ಮನೆಗೆಲಸದಲ್ಲಿ ತೊಡಗುತ್ತಿದ್ದರು. ಅಷ್ಟೊತ್ತಿಗಾಗಲೇ ನಮ್ಮ ತಂದೆ ಮದ್ಯವನ್ನು ಸಂಪೂರ್ಣ ಬಿಟ್ಟಿದ್ದರು. ಮತ್ತೆ ನಮ್ಮ ತಂದೆ ತಾಯಿಗೆ ಮಕ್ಕಳ ಭವಿಷ್ಯ ಮುಖ್ಯವಾಯಿತು. ಕಾಡು ಪ್ರಾಣಿಗಳ ಹಾವಳಿಯಿಂದ ಕುಮರಿ ಬೆಳೆ ಸಿಗುವುದು ಕಡಿಮೆಯಾಗತೊಡಗಿತ್ತು. ಇದನ್ನರಿತ ತಂದೆ ತಾಯಿ ಇಬ್ಬರು ಕೂಲಿ ಕೆಲಸಕ್ಕೆ ಕೇರಳಕ್ಕೆ ಹೋಗುತ್ತಿದ್ದರು. ನನ್ನ ತಂಗಿ ಇನ್ನೂ ಚಿಕ್ಕವಳು. ಸಂಜೆ ಹೊತ್ತು ಮನೆ ಮತ್ತು ಹಟ್ಟಿ ಕಸ ಉಡುಗಲು ತಿಳಿಸಿ ತಮ್ಮ ಮತ್ತು ತಂಗಿಯನ್ನು ನೋಡಿಕೊಳ್ಳಲು ಹೇಳಿ, ನಮಗಿರುವ ಊಟವನ್ನು ಅಜ್ಜಿ ಕೈಗೆ ಕೊಟ್ಟು ಹೋಗುತ್ತಿದ್ದರು. ಅಜ್ಜಿ ಸಮಯಕ್ಕೆ ಊಟ ಕೊಟ್ಟು ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಸಂಜೆ ಆಗುತ್ತಿದ್ದಂತೆಯೇ ಅಜ್ಜಿ ನನಗೆ ‘ನೀನು ಹೋಗಿ ಮನೆ ಮತ್ತು ಅಂಗಳದ ಕಸ ಉಡುಗು. ಅಪ್ಪ ಅಮ್ಮ ಬರಲು ಹೊತ್ತಾಯಿತು ’ ಎಂದು ಕಳುಹಿಸುವರು. ನಾನು ಅವರು ಹೇಳಿದ ಕೆಲಸವನ್ನು ಮಾಡಿ ಮುಗಿಸುತ್ತಿದ್ದೆ. ಹೀಗೆ ಸ್ವಲ್ಪ ದಿನಗಳ ನಂತರ ನನ್ನ ತಂಗಿ ಓಡಾಡಲು ಸುರು ಮಾಡಿದಳು. ಮನೆ ಕೆಲಸದ ಜೊತೆಗೆ ಅವಳು ಮಾಡುವ ಪ್ರತಿಯೊಂದು ಚೇಷ್ಟೆಗೂ ನನಗೆ ಥಳಿತ, ಬೈಗುಳ ತಪ್ಪಿದಲ್ಲ. ನನ್ನ ತಮ್ಮ ನನಗೆ ಕೆಲಸದಲ್ಲಿ ನೆರವಾಗುತ್ತಿದ್ದ, ತಂಗಿ ಮಾಡುವ ಚೇಷ್ಟೆಯನ್ನು ಕಂಡು ‘ಅಕ್ಕ ನೀನು ಅವಳನ್ನು ಕರೆದುಕೊ ನಾನು ಕಸ ಉಡುಗುತ್ತೀನಿ’ ಎಂದು ಎಷ್ಟೋ ಬಾರಿ ಸಹಕರಿಸಿದ್ದಾನೆ.


 



ಬೆಳೆದಂತೆ ಮನೆಕೆಲಸದ ಹೊರೆಯೂ ಹೆಚ್ಚಾಗ ತೊಡಗಿತ್ತು. ಆಗಲೂ ನನ್ನ ತಂಗಿ ತುಂಬಾ ಚೇಷ್ಟೆ ಮಾಡುತ್ತಿದ್ದಳು. ಪಾತ್ರೆಯಲ್ಲಿನ ಅನ್ನ ಬಡಿಸುವುದು, ಒಲೆಗೆ ಸೀಮೆ ಎಣ್ಣೆ ಹಾಕುವುದು, ನೀರಿಗೆ ಮಣ್ಣು ಹಾಕುವುದು, ಬೆಂಕಿಯಲ್ಲಿ ಆಟ ಆಡುವುದು ಹೀಗೆ ಮೊದಲಾದ ಕೆಲಸವನ್ನು ಮಾಡಿ ಅಪ್ಪ ಅಮ್ಮನಿಂದ ಥಳಿತ ಮತ್ತು ಬೈಗುಳ, ಡೋಲಿಗೆ ಕೋಲಿನ ಚಡಿಯಿದ್ದಂತೆ ಇರುತ್ತಿತ್ತು. ಹೊಡೆಯುವುದೆಂದರೆ ಮರುದಿನ ಎದ್ದೇಳ ಬಾರದು ಹಾಗೇ ಹೊಡೆಯುತ್ತಿದ್ದರು ಅಮ್ಮ. ನನ್ನ ಅಜ್ಜಿ -ತಾತ ಅಮ್ಮನಿಗೆ ಬೈಯುತ್ತಿದ್ದರು. ಬೆಳಗ್ಗೆಯಿಂದ ಹಗಲಲ್ಲಿ ಇವರ ಜೊತೆ ಕಳೆದರೂ ರಾತ್ರಿಯಲ್ಲಿ ನನ್ನ ಅಜ್ಜಿ ತಾತನ ಒಟ್ಟಿಗೆ ಇರುತ್ತಿದ್ದೆ. ಆದರೆ ತಂಗಿಯನ್ನು ನೋಡುವ ಮತ್ತು ಮನೆಗೆಲಸ ಹಾಗೂ ಹೊಡೆತ ಕಡಿಮೆ ಆಗಲಿಲ್ಲ. ನಾನು ಬೆಳೆದಂತೆಲ್ಲ ಜವಾಬ್ದಾರಿ ಹೆಚ್ಚಾಗುತ್ತಿತ್ತು. ನನ್ನ ತಮ್ಮನಿಗೆ ಹೊಡೆಯುತ್ತಿರಲಿಲ್ಲ , ಬೈಯುತ್ತಿರಲಿಲ್ಲ. ಹೀಗೆ ನಾನು ಪ್ರತಿದಿನ ಮನೆಯಲ್ಲಿಯೇ ಕಳೆಯುತ್ತಿದ್ದೆ. ಒಂದು ದಿನವಾದರೂ ಆಟ ಆಡಿದ ಸಂತೋಷದ ದಿನಗಳು ನನ್ನ ನೆನಪಿನಲ್ಲಿಲ್ಲ. ವರ್ಷಕೊಮ್ಮೆ ನಮ್ಮ ಸೋದರ ಮಾಮನ ಮಕ್ಕಳು ಕೇರಳದಿಂದ ನಮ್ಮ ಅಜ್ಜಿಯ ಮನೆಗೆ ಬರುತ್ತಿದ್ದರು. ಅವರ ಜೊತೆ ಆಟ ಆಡಲು ಹೋಗೋಣ ಎಂದರೆ ಅಮ್ಮ ತಂಗಿಯನ್ನು ಕರೆದುಕೊಂಡು ಹೋಗು ಎನ್ನುತ್ತಿದ್ದರು. ಅವರ ಜೊತೆ ಹೋದರು ಆಟ ಆಡಲು ಆಗುತ್ತಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸಂತೋಷವಾಗಿ ಓಡಾಡಿದರೆ ನನಗೆ ಮಾತ್ರ ಮನೆ ಮತ್ತು ತಂಗಿಯನ್ನು ಬಿಟ್ಟು ಹೋಗಲು ಆಗುತ್ತಿರಲಿಲ್ಲ. ನನ್ನ ತಮ್ಮ ಪಕ್ಕದ ಮನೆಯ ಮಕ್ಕಳ ಜೊತೆಗೆ ಗೋಲಿ, ಗಿಲ್ಲಿದಾಂಡು, ಕ್ರಿಕೆಟ್ ಮೊದಲಾದ ಆಟ ಆಡಿ ಬರುತ್ತಿದ್ದ. ಸುಮಾರು ನಾಲ್ಕೈದು ವರ್ಷಕ್ಕಾಗಲೇ ನನ್ನನ್ನು ಶಾಲೆಗೆ ಸೇರಿಸಲು ಕೇರಳಕ್ಕೆ ಕರೆದುಕೊಂಡು ಹೋಗುತ್ತಾರೆ. ಶಾಲೆಯ ಶಿಕ್ಷಕರು ನನ್ನನ್ನು ನೋಡಿ ಈ ಮಗುವಿಗೆ ಶಾಲೆಗೆ ಸೇರಿಸುವ ವಯಸ್ಸಾಗಿಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ಮತ್ತೆ ಎಷ್ಟೋ ತಿಂಗಳುಗಟ್ಟಲೆ ಮನೆಗೆಲಸ ಮಾಡಿಕೊಂಡು ತಂಗಿಯನ್ನು ನೋಡುತ್ತ ಮನೆಯಲ್ಲಿ ಇದ್ದೆ. ಅಷ್ಟಕ್ಕಾಗಲೇ ನಮ್ಮ ಊರಿಗೆ ‘ಜೀವಜಲ’ ಎಂಬ ಒಂದು ಕ್ರೈಸ್ತ ಸಂಸ್ಥೆಯೊಂದನ್ನು ಆರಂಭಿಸಿದರು. ಅಲ್ಲಿಗೆ ನಾನು ಮತ್ತು ನನ್ನ ತಮ್ಮ ಹೋಗಿ ಬರುತ್ತಿದ್ದೆವು.

ಅಲ್ಲಿ ನಮಗೆ ಆಟ, ಓಟ, ಕಲಿಕೆಯ ಜೊತೆಗೆ ಊಟವನ್ನೂ ಕೊಟ್ಟು ಕಳುಹಿಸುತ್ತಿದ್ದರು. ಹೀಗೆ ಪ್ರತಿದಿನ ಆ ಸಂಸ್ಥೆಗೆ ಹೋಗಿ ಬರುತ್ತಿದ್ದೆವು. ಅಮ್ಮ ಹೊಲ ಮನೆ ಕೆಲಸ ಮಾಡಿಕೊಂಡು ಮನೆಯಲ್ಲಿರುತ್ತಿದ್ದರು. ಅಪ್ಪ ಒಬ್ಬರೇ ಕೂಲಿಗೆ ಹೋಗುತ್ತಿದ್ದರು. ನಾವು ಪ್ರತಿದಿನ ಜೀವಜಲ ಸಂಸ್ಥೆಗೆ ಹೋಗುವುದನ್ನು ಗಮನಿಸಿದ ಅಲ್ಲಿನ ಕಾರ್ಯನಿರ್ವಾಹಕರು ನಮ್ಮ ತಂದೆ ತಾಯಿಗೆ ‘‘ಇವರನ್ನು ಸರಕಾರಿ ಶಾಲೆಗೆ ಸೇರಿಸಿ. ಚೆನ್ನಾಗಿ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ’’ ಎಂದರಂತೆ. ಅದನ್ನು ಕೇಳಿದ ಅಪ್ಪ ಮಚ್ಚೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಾತಿಗೆಂದು ಕರೆದುಕೊಂಡು ಹೋಗುತ್ತಾರೆ. ಆದರೆ ಶಾಲೆಗೆ ಸೇರಿಸುವ ವರ್ಷ ನನಗೆ ಆಗಿರಲಿಲ್ಲ. ಆದರೂ ಅದೇನೋ ಮಾಡಿ ನನ್ನನ್ನು ಶಾಲೆಗೆ ಸೇರಿಸುತ್ತಾರೆ. ನಾನು ಹೋಗುವುದನ್ನು ಗಮನಿಸುತ್ತಿದ್ದ ನನ್ನ ತಮ್ಮನೂ ಜೊತೆಗೆ ಬರುತ್ತಿದ್ದ. ಪ್ರತಿದಿನ ನನ್ನ ಜೊತೆಗೆ ಇರುವುದನ್ನು ನೋಡಿ ಅವನನ್ನು ಶಿಶುವಾರಕ್ಕೆ ಕರೆದುಕೊಂಡು ಬಿಡುತ್ತಿದ್ದರು ಮಾಸ್ಟರ್ ಗಳು. ಆದರೆ ಅವನು ನನ್ನ ಒಟ್ಟಿಗೆ ಬಂದು ಕೂಡುತ್ತಿದ್ದನು.

ಇದನ್ನು ನೋಡಿದ ಮಾಸ್ಟರ್ ಗಳು ಅವನನ್ನು ಕೂಡ ನನ್ನ ತರಗತಿಗೆ ಸೇರಿಸಿಕೊಂಡರು. ಅಲ್ಲಿಂದ ನಾವಿಬ್ಬರೂ ಒಟ್ಟಾಗಿ ಶಾಲೆ ಹೋಗುತ್ತಿದ್ದೆವು. ಅಲ್ಲಿಯೂ ನನಗೆ ಆಟ ಆಡಲು ಆಗುತ್ತಿರಲಿಲ್ಲ. ನನ್ನ ತಮ್ಮನನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇತ್ತು. ಇಬ್ಬರೂ ಚಿಕ್ಕ ಪುಟ್ಟ ಆಟವನ್ನು ಆಡುತ್ತಾ, ಶಾಲೆಯಲ್ಲಿ ಅಕ್ಷರ ಕಲಿಯುತ್ತಾ, ಮನೆಗೆ ಬರುತ್ತಿದ್ದೆವು. ಶಾಲೆಯಲ್ಲಿ ಎಲ್ಲ ಕಲಿಕೆಯಲ್ಲಿ ಮುಂದೆ ಇದ್ದೆವು. ಮನೆಗೆ ಬಂದರೆ ಅಮ್ಮ ನಮಗೆ ಕೆಲಸ ಹಂಚಿಕೆ ಮಾಡಿ ಹೋಗುತ್ತಿದ್ದರು. ನಾವಿಬ್ಬರೂ ಒಟ್ಟಾಗಿ ಬೇಗ ಮನೆ ಕೆಲಸ ಮಾಡಿ ಮುಗಿಸುತ್ತಿದ್ದೆವು. ಅಮ್ಮ ತಂಗಿಯನ್ನು ಅಜ್ಜಿಯ ಹತ್ತಿರ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು.

ವರ್ಷಗಳು ಕಳೆದವು. ನನ್ನ ತಂಗಿಯನ್ನು ಕೇರಳ ಶಾಲೆಗೆ ಸೇರಿಸಲು ಅಪ್ಪ ಸೋದರ ಮಾಮನ ಮನೆ ಕರೆದುಕೊಂಡು ಹೋಗುತ್ತಾರೆ. ಕೇರಳದಲ್ಲಿ ದಾಖಲೆಯೂ ದೊರೆಯುತ್ತದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ತಂಗಿಯ ಭಾರ ಕಡಿಮೆಯಾದರು ಮನೆಗೆಲಸ ಕಡಿಮೆ ಆಗಿರಲಿಲ್ಲ. ಬಿಡುವಿನ ದಿನಗಳಲ್ಲಿ ಅಪ್ಪ ಅಮ್ಮ ಹೊಲಗೆಲಸದಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದರು. ನನ್ನ ಬಾಲ್ಯ ಜೀವನದಲ್ಲಿ ಖುಷಿ ಕಂಡ ಕ್ಷಣಗಳೇ ಇಲ್ಲ ಎನ್ನುವುದೇ ಸರಿ. ಶಾಲೆಗೆ ಸೇರಿದ ಮೇಲೆ ಸ್ಪರ್ಧೆಗೆ ಆಡಿಸುವ ಆಟವೇ ನನ್ನ ಆಟವಾಗಿತ್ತು.

ಓದಲು ಯಾವುದೇ ಅನುಕೂಲ ಇರದ ಒಂದು ಹಳ್ಳಿಯಲ್ಲಿ 6 ಕಿ.ಮೀ. ನಡೆದು ಹೋಗಿ ಒಂದರಿಂದ ಐದನೇ ತರಗತಿ ವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಚ್ಚೂರಿನಲ್ಲಿ ಓದಿದೆವು. ನಮಗೆ ಓದಲು ಕಷ್ಟ ಇರಲಿಲ್ಲ. ನನ್ನ ತಂಗಿಗೆ ಸ್ವಲ್ಪ ಕಷ್ಟ ಆಗುತ್ತಿತ್ತು. ನಾವು ಕನ್ನಡ ಶಾಲೆಯಲ್ಲಿ ಓದಿದ್ದರಿಂದ ನಮಗೆ ಹೆಚ್ಚು ಖರ್ಚು ಇರಲಿಲ್ಲ. ನಮಗೆ ಕಲ್ಲು ಸ್ಲೇಟು ಕೊಡಿಸುತ್ತಿದ್ದರು. ಶಾಲೆಯಲ್ಲಿ ಮನೆಗೆಲಸ ಕೊಟ್ಟರೆ, ಸಂಜೆ ಪಾಟಿಯಲ್ಲಿ ಬರೆದು ತುಂಬಿಸುತ್ತಿದ್ದೆವು. ಶಾಲೆಗೆ ಹೋಗುವಷ್ಟರಲ್ಲಿ ಬಟ್ಟೆಗೆ ತಿಕ್ಕಿ ಅಳಿಸಿ ಹೋಗುತ್ತಿತ್ತು. ಆದರೂ ಶಾಲೆಯಲ್ಲಿ ಕುಳಿತು ಬೇಗ ಬರೆಯುತ್ತಿದ್ದೆವು. 6ರಿಂದ 8ನೆಯ ತರಗತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿ ಬಿ ಕುಪ್ಪೆ ಇಲ್ಲಿಗೆ ಸೇರಿಸಿದರು. ನಮಗೆ ಮೂವರಿಗೂ ಬ್ಯಾಗು, ಛತ್ರಿ, ಚಪ್ಪಲು, ಪೆನ್ನು ಮೊದಲಾದವುಗಳನ್ನು ಕೊಡಿಸಲು ಕಷ್ಟವಾಗುತ್ತಿತ್ತು.

ನಾನು ಎಂಟನೇ ತರಗತಿಯಲ್ಲಿ ಇಡೀ ಶಾಲೆಗೆ ಪ್ರಥಮಳಾಗಿ ಪಾಸಾದೆ. ಒಂಭತ್ತು ಮತ್ತು ಹತ್ತನೆಯ ತರಗತಿಯನ್ನು ಹೆಗ್ಗಡದೇವನ ಕೋಟೆ ಇಲ್ಲಿ ಪೂರೈಸಿದೆ. ನಾನು ಹತ್ತನೇ ತರಗತಿಯಲ್ಲಿ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾದೆ. ತಮ್ಮ ಹತ್ತನೇ ತರಗತಿ ಮಧ್ಯದಲ್ಲಿಯೇ ತರಗತಿ ಮೊಟಕುಗೊಳಿಸಿದ.

ಅಪ್ಪ ಅಮ್ಮ ಶಿಕ್ಷಣ ಬಲ್ಲವರಲ್ಲ. ಆದರೂ ಸುಮಾರು 15ರಿಂದ 75 ರೂಪಾಯಿಗೆ ಕೂಲಿ ಮಾಡಿಕೊಂಡು, ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕೊಡಿಸಲು ಮುಂದಾಗುತ್ತಾರೆ. ಮಕ್ಕಳು ಬೆಳೆಯುತ್ತಾ ಹೋದಂತೆ ತೀವ್ರ ಹಣದ ಕೊರತೆ ಎದುರಾಯಿತು. ‘‘ಓದಿದ್ದು ಸಾಕು, ಮನೆಯಲ್ಲಿ ಏನಾದ್ರೂ ತಿನ್ನುತ್ತಾ, ಹೊಲದಲ್ಲಿ ಏನಾದ್ರೂ ಮಾಡಿಕೊಂಡು ಬದುಕಿ. ಮುಂದೆ ಓದಿಸಲು ನಮ್ಮ ಕೈಯಲ್ಲಿ ಏನೇ ಇಲ್ಲ. ಕೂಲಿ ಸಿಗುತ್ತಿಲ್ಲ, ಈಗ ಸಿಗುತ್ತಿರುವ ಕೂಲಿಗೆ ಹೊಟ್ಟೆಗೆ ಊಟ, ಮೈ ಬಟ್ಟೆ, ನಿಮ್ಮ ಓದು ಕಷ್ಟವಾಗುತ್ತದೆ’’ ಅಪ್ಪ ಎನ್ನುತ್ತಿದ್ದರು. ಆದರೆ ಆ ವೇಳೆಗಾಗಲೇ ಅಪ್ಪನಿಗೆ ಶಾಲಾ ಶಿಕ್ಷಕರು, ‘‘ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ, ಶಾಲೆ ಬಿಡಿಸಬೇಡಿ, ಓದಿಸಿ’’ ಎಂದು ಪ್ರೋತ್ಸಾಹಿಸುತ್ತಿದ್ದರು. ಏನಾದರೂ ಮಾಡಿ ಮಕ್ಕಳನ್ನು ಓದಿಸಬೇಕೆಂದು, ಸಿಗುವ ಕೂಲಿಯ ಜೊತೆಗೆ ಆರ್ಥಿಕ ಸಮಸ್ಯೆ ಸರಿದೂಗಿಸಲು ಮೇಕೆ ಸಾಕಿಕೊಂಡು ಕುಮರಿ ಬೇಸಾಯದಿಂದ ಬರುತ್ತಿದ್ದ ಭತ್ತ, ರಾಗಿಯನ್ನು ಮಾರಿ ನನಗೂ ಮತ್ತು ತಮ್ಮನಿಗೂ 10ನೇ ತರಗತಿ ಹಾಗೂ ದೀಬಾಳನ್ನು 7ನೇ ತರಗತಿಯ ತನಕ ಓದಿಸಿದರು. ಆದರೆ ಸರಿಯಾದ ಪ್ರಮಾಣದಲ್ಲಿ ಮೂವರಿಗೂ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ.

ಕಾರಣ ಬಡತನ, ನಿರುದ್ಯೋಗ ಮೊದಲಾದ ಸಾಮಾಜಿಕ ಸಮಸ್ಯೆಗಳು ಒಂದರಮೇಲೊಂದರಂತೆ ಎದುರಾಗ ತೊಡಗಿತು. ಅಪ್ಪ ಅಮ್ಮನ ಕಷ್ಟವನ್ನು ನೋಡಿದ ತಮ್ಮ ದೀಬು ತಂದೆತಾಯಿಗೆ ಕೆಲಸದಲ್ಲಿ ನೆರವಾದ. ತಂದೆ ತಾಯಿ ಕೂಲಿ ಕೆಲಸಕ್ಕೆ ಕೇರಳಕ್ಕೆ ಹೋಗುತಿದ್ದುದರಿಂದ ದೀಬಾಳನ್ನು ಕೇರಳಕ್ಕೆ ಪ್ರತಿ ದಿನ ಕರೆದುಕೊಂಡು ಹೋಗುತ್ತಿದ್ದರು. ತಂದೆ ತಾಯಿಗೆ ಕೂಲಿ ಇಲ್ಲದಿದ್ದಾಗ ದೀಬಾಳು ಮನೆಯಲ್ಲಿಯೇ ಉಳಿಯುತ್ತಿದ್ದಳು, ದಾರಿ ಸರಿಯಿಲ್ಲದೆ ಒಬ್ಬಳಿಗೆ ಹೋಗಲು ಕಷ್ಟವಾಗುತ್ತಿದ್ದ ಕಾರಣ ದೀಬಾಳು ಶಾಲೆ ಬಿಟ್ಟು ಮನೆಯಲ್ಲಿ ಅಮ್ಮನಿಗೆ ನೆರವಾಗುತ್ತಾ, ಮನೆ ಕೆಲಸದಲ್ಲಿ ಸಹಕರಿಸುತ್ತಿದ್ದಳು. ನನ್ನನ್ನು ಬಾಲಕೀಯರ ಪದವಿ ಪೂರ್ವ ಕಾಲೇಜು ಹೆಗ್ಗಡದೇವನ ಕೋಟೆ ಇಲ್ಲಿ ಸೇರಿಸಿದರು. ನನ್ನ ಜೊತೆಗೆ ನನ್ನ ಊರಿನ ಪೋಸ್ಟ್ ಮಾಸ್ಟರ್ ಮಗಳು, ಪಕ್ಕದ ಊರಿನ ಒಂದು ಹುಡುಗಿ ಹೀಗೆ ಮೂವರು ಆ ಕಾಲೇಜಿನಲ್ಲಿ ಓದಿದೆವು.

ಓದು ನನಗೆ ಹೆಚ್ಚು ಪ್ರೇರಣೆ ಕೊಡುತ್ತಿತ್ತು. ಊರಿನ ವಾತಾವರಣ ನನಗೆ ಅಪರೂಪ ಎನಿಸಿತು. ನನ್ನ ತಂದೆ, ತಾಯಿ ಮತ್ತು ತಾಯಿಯ ಅಮ್ಮ ನಂಜಮ್ಮ ಅಜ್ಜಿ ನನಗೆ ಸಹಕರಿಸುವುದರ ಜೊತೆಗೆ ಪ್ರೋತ್ಸಾಹ ನೀಡುತ್ತಿದ್ದರು. ಹಾಗೇಯೆ ಸಂಘ ಸಂಸ್ಥೆಯ ಕಾರ್ಯನಿರ್ವಾಹಕರು ನಮ್ಮ ತಂದೆ ತಾಯಿಯನ್ನು ಪ್ರೊತ್ಸಾಹಿಸುತ್ತಿದ್ದರು. ಇದು ನನ್ನ ತಂದೆ ತಾಯಿಗೆ ಸ್ಫೂರ್ತಿಯಾಗುತ್ತಿತ್ತು. ಪಿಯುಸಿನಲ್ಲಿ ತೇರ್ಗಡೆಯೊಂದಿಗೆ ಮೈಸೂರಿನ ಡೈಟ್ ಕಾಲೇಜಿನಲ್ಲಿ ಡಿಇಡಿ ವೃತ್ತಿ ತರಬೇತಿ ಶಿಕ್ಷಣಕ್ಕೆ ಸೇರಿಕೊಂಡೆ. ಸೀಟು ಸಿಕ್ಕಿತ್ತು. ಆದರೆ ನನ್ನ ಜೊತೆಗೆ ಸೇರಿದ ಪೋಸ್ಟ್ ಮಾಸ್ಟರ್ ಮಗಳಿಗೆ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ಆಕೆ ಒಲ್ಲೆ ಎಂದಳು. ಇದರಿಂದ ನನ್ನನ್ನು ಸಹ ಕಳುಹಿಸಲಿಲ್ಲ. ನಂತರ ಬಿಎ ಓದಲು ಪ್ರಥಮ ದರ್ಜೆ ಕಾಲೇಜು ಹೆಗ್ಗಡದೇವನ ಕೋಟೆ ಇಲ್ಲಿ ಸೇರಿಸಿದರು. ಒಂದಿಷ್ಟು ಅನಾನುಕೂಲತೆಗಳಿಂದಾಗಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣ ಆದರೂ ಆಯಾ ಅವಧಿಯಲ್ಲಿ ಕ್ಲಿಯರ್ ಮಾಡಿಕೊಂಡು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾದೆ. ನಂತರ ಮುಂದೆ ಏನು ಮಾಡಲೂ ತೋಚದೆ ಮನೆಯಲ್ಲಿಯೇ ಇದ್ದೆ. ನನ್ನ ಗೆಳೆಯರು ಬಿಇಡಿ ವೃತ್ತಿ ಶಿಕ್ಷಣ ಮಾಡೋಣ ಎಂದು ಪೋನ್ ಮಾಡಿದರು. ಆದರೆ ಬಿಇಡಿ ಓದಲು ಹಣ ಇದ್ದಿರಲಿಲ್ಲ. ಹಣವನ್ನು ಹೊಂದಿಸಲು ಪ್ರಯತ್ನ ಮಾಡಿದ್ರೂ ಸರಿ ಹೊಂದಲಿಲ್ಲ, ಕೊನೆಗೆ ಡೀಡ್ ಸಂಸ್ಥೆ, ಹುಣಸೂರು, ನಿರ್ದೇಶಕರಿಗೆ ಒಂದು ಪತ್ರ ಬರೆದೆ. ಅವರ ನೆರವಿನಿಂದ ಬಿಇಡಿಗೆ ದಾಖಲಾದೆ. ಆದರೆ ಸರಕಾರಿ ಸೀಟು ಬೆಂಗಳೂರಿನಲ್ಲಿ ಸಿಕ್ಕಿತು. ಅಷ್ಟು ದೂರ ಕಳುಹಿಸಲು ಮನೆಯಲ್ಲಿ ಒಪ್ಪಲಿಲ್ಲ.




 


ಮೈಸೂರಿನ ಛಾಯಾದೇವಿ ಬಿಇಡಿ ಕಾಲೇಜು ಇಲ್ಲಿಗೆ 15 ಸಾವಿರ ರೂ ಕಟ್ಟಿ ಬಿಇಡಿಗೆ ಸೇರಿಕೊಂಡೆ. ಬಿಇಡಿಯಲ್ಲಿ ಅತ್ಯುತ್ತಮ ಅಂಕಗಳಿಸಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣಳಾದೆ. ಅದು ಎಲ್ಲರಿಗೂ ಸಂತೋಷ ಕೊಟ್ಟಿತಾದರೂ, ಉದ್ಯೋಗ ಸಿಕ್ಕಿರಲಿಲ್ಲ. ಬಿಇಡಿ ಮುಗಿಸಿ ಟಿಇಟಿ ಪರೀಕ್ಷೆಗೆ ಅರ್ಜಿ ಹಾಕಿ ತಯಾರಿ ನಡೆಸಿದೆ. ಅಷ್ಟರಲ್ಲಿ ನನ್ನ ತಂದೆ ಹೃದಯಘಾತಕ್ಕೆ ಒಳಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದರು. ನನ್ನ ಓದು ಅಲ್ಲೇ ನಿಂತಿತು. ಟಿಇಟಿ ಪರೀಕ್ಷೆ ಫಲಿತಾಂಶದಿಂದ ಯಾವ ಪ್ರಯೋಜನ ಆಗಲಿಲ್ಲ. ನನ್ನ ಗೆಳೆಯರು ಮೂವರು ಪರೀಕ್ಷೆಯಲ್ಲಿ ಗೆದ್ದು, ಕೆಲಸಕ್ಕೆ ಸೇರಿಕೊಂಡರು. ನಾನು ತಂದೆಯ ಶುಶ್ರೂಷೆಯಲ್ಲಿ ತೊಡಗಿಕೊಂಡು ನಾಲ್ಕು ತಿಂಗಳು ಗ್ರಾಮೋತ್ಥಾನ್ ಫೌಂಡೇಷನ್, ಆಯುಷ್ ಇಲಾಖೆ, ಹೊಸೂರು ಇಲ್ಲಿ ಕಾರ್ಯಕ್ರಮ ಸಂಯೋಜಕಳಾಗಿ ಸೇರಿಕೊಂಡೆ. ಅಷ್ಟಕ್ಕಾಗಲೇ ಸಮಾಜ ಕಲ್ಯಾಣ ಇಲಾಖೆ, ಹೆಗ್ಗಡದೇವನ ಕೋಟೆಯ ಅಧಿಕಾರಿ ರಮೇಶ್ರವರು ನಮ್ಮ ಊರಿನ ಹತ್ತಿರ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ತಿಳಿಸಿದರು. ನಾನು ಒಂದು ವರ್ಷಗಳ ಕಾಲ ಆ ಶಾಲೆಯಲ್ಲಿ ಕೆಲಸ ಮಾಡಿದೆ. ನನ್ನ ಶ್ರಮ, ಒಡನಾಟ, ಬೋಧನೆ ಇವು ಆ ಶಾಲೆಯ ವಿದ್ಯಾರ್ಥಿಗಳಲ್ಲಿ ಕಲಿಕೆ ಹಾಗೂ ಪ್ರೋತ್ಸಾಹಕ್ಕೆ ಉತ್ತೇಜನ ನೀಡಿತು. ಈ ಚಟುವಟಿಕೆಯನ್ನು ಅರಿತ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ರವರು ಗಿರಿಜನ ಆಶ್ರಮ ಶಾಲೆ ಡಿ ಬಿ ಕುಪ್ಪೆ ಇಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರು. ಅಲ್ಲಿಯೂ ಒಂದು ವರ್ಷಗಳ ಕಾಲ ಭೋದನೆ ಮಾಡಿದೆ. ವಿದ್ಯಾರ್ಥಿಗಳೊಂದಿಗಿನ ಒಡನಾಟ, ನನ್ನ ಪಾಠ ಬೋಧನೆ, ಅವರ ಕಲಿಕೆ ಇತ್ಯಾದಿಗಳ ಯಶಸ್ಸಿನಿಂದ ಹಾಡಿಗಳಿಂದ ಶಾಲೆ ಬಿಟ್ಟಂತಹ ಮಕ್ಕಳೆಲ್ಲಾ ಶಾಲೆ ಬರಲು ಪ್ರಾರಂಭಿಸಿದವು. ಇದನ್ನು ಗಮನಿಸಿದ ಶಾಲೆಯ ಮುಖ್ಯಸ್ಥರು ಹಾಗೂ ಸಹ ಶಿಕ್ಷಕರು ಅಭಿನಂದಿಸಿದರು. ನನಗೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿದರು.

ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಒಂದು ಪೋನ್ ಕಾಲ್ ಬರುತ್ತದೆ. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ, ಪಿಎಚ್ಡಿ ಹೊಸ ಕೋರ್ಸ್ ಆರಂಭಿಸುತ್ತಿದ್ದಾರೆ, ಆಸಕ್ತಿ ಇರುವವರು ಅವಕಾಶವನ್ನು ಪಡೆದುಕೊಳ್ಳಬಹುದೆಂದು ಸಂಘ ಸಂಸ್ಥೆಯ ಕಾರ್ಯಕರ್ತರು ಅಭಿಪ್ರಾಯವನ್ನು ತಿಳಿಸಿದರು. ಇದನ್ನು ಅರಿತ ಅಪ್ಪ ಇದು ಒಂದು ಒಳ್ಳೆಯ ಅವಕಾಶ ಎಂದಿದ್ದರು. ಆದರೂ ನನಗೆ ಹಣದ ಚಿಂತೆ ಕಾಡತೊಡಗಿತು. ಮುಖ್ಯಸ್ಥರಿಗೆ ತಿಳಿಸಿದೆ. ಮುಖ್ಯಸ್ಥರು ಎಂಟು ತಿಂಗಳ ಸಂಬಳವನ್ನು ಮಾಡಿಕೊಟ್ಟರು. ಹುಣಸೂರಿನ ಶೈಲೇಂದ್ರ, ಅವರ ಪತ್ನಿ ಕಲಾವತಿ ಮೊದಲಾದವರ ನೆರವಿನಿಂದ, ವಿಶ್ವವಿದ್ಯಾನಿಲಯದಲ್ಲಿ ಕಲಿಕೆ ಆರಂಭವಾಯಿತು. ಹಾಸ್ಟೆಲ್ ಇಲ್ಲದೆ ಸಮಸ್ಯೆಗಳು ಎದುರಾಯಿತು. ಈ ಸಮಸ್ಯೆಯನ್ನು ಸರಿಪಡಿಸಲು ನನ್ನ ಮಾರ್ಗದರ್ಶಕರು ಮತ್ತು ಹಿರಿಯ ವಿದ್ಯಾರ್ಥಿ ಡಾ. ಕೃಷ್ಣಮೂರ್ತಿ ಹಾಗೂ ಅವರ ಗೆಳೆಯರು, ಓಬಿಸಿ ಸೆಲ್ ನಿಂದ ಮಾರುತಿ ಸರ್ ಶ್ರಮಪಟ್ಟರು. ಹೀಗೆ ಹಲವು ಸಮಸ್ಯೆಗಳ ನಡುವೆ ಎಂಎ ಸಮಾಜಶಾಸ್ತ್ರದಲ್ಲಿ 5ನೇ ರ್ಯಾಂಕ್ ಪಡೆದು ಉತ್ತೀರ್ಣಳಾದೆ. ನಂತರ 2018-19ರಲ್ಲಿ ದೂರಶಿಕ್ಷಣ ನಿರ್ದೇಶನಾಲಯದ ಮೂಲಕ ಎಂಎ ಕನ್ನಡವನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ, ಸಮಾಜಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಪಕರಾದ, ಪ್ರೊ. ಕೆ.ಎಂ. ಮೇತ್ರಿ ಇವರ ಮಾರ್ಗದರ್ಶನದಲ್ಲಿ ‘‘ಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನ’’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಶೋಧನೆ ಕೈಗೊಂಡು ಪ್ರಬಂಧ ಸಿದ್ದಪಡಿಸಿ, ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದೆ. ಈ ಮಹಾ ಪ್ರಬಂಧಕ್ಕೆ ಪಿಎಚ್ಡಿ ಪದವಿಯನ್ನು ನೀಡಿದ್ದಾರೆ.

ಪಣಿಯನ್ ಬುಡಕಟ್ಟಿನ ಸಂಕ್ಷಿಪ್ತ ಪರಿಚಯ

ದಕ್ಷಿಣ ಭಾರತದ ಪ್ರಾಚೀನ ದ್ರಾವಿಡ ಬುಡಕಟ್ಟುಗಳಲ್ಲಿ ಪಣಿಯನ್ ಬುಡಕಟ್ಟು ಒಂದಾಗಿದೆ. ಇವು ಉತ್ತರ ಕೇರಳದ ವಯನಾಡ್ ಜಿಲ್ಲೆಯ ಅತಿದೊಡ್ಡ ಸಂಖ್ಯೆಯಲ್ಲಿ ಕಂಡುಬರುವ ಬುಡಕಟ್ಟುಗಳು. ಕರ್ನಾಟಕ, ಕೇರಳ, ತಮಿಳುನಾಡಿನ ಅರಣ್ಯ ಗಡಿಪ್ರದೇಶಗಳಲ್ಲಿ ಇವರು ಹರಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಇವರನ್ನು ಭಾರತ ಸರಕಾರ ಆದಿಮ ಬುಡಕಟ್ಟು ಎಂದು ಗುರುತಿಸಿದೆ. ಪಣಿಯನ್ನರು ಮೂಲತಃ ಕೇರಳದವರು. ಇವರ ಮೂಲ ಇಪ್ಪಿಮಲೈ. ಇವರನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಪಣಿಯನ್ ಎಂದು ಕರ್ನಾಟಕದಲ್ಲಿ ಪಣಿಯೆರವ ಎಂದು ಕರೆಯಲಾಗಿದೆ. ಕೊಡಗು ಭಾಗದಲ್ಲಿ ಪಣಿಯನ್ನರಿಗೆ ಯೆರವ ಎಂಬ ಪದವನ್ನು ಅಂಟಿಸಲಾಗಿದೆ. ಆದರೆ ಪಣಿಯೆರವ ಅನ್ನುವ ಪದ ಬಳಕೆ ಇತ್ತೀಚಿನದು. ಪಣಿಯನ್ ಮತ್ತು ಯೆರವ ಪ್ರತ್ಯೇಕ ಎರಡು ಬುಡಕಟ್ಟುಗಳಾಗಿವೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ದಿವ್ಯಾ ಎಸ್.ಆರ್.

contributor

Similar News

ಭಾವ - ವಿಕಲ್ಪ
ಕಥೆಗಾರ