ಕಥೆಗಾರ

Update: 2024-01-06 05:27 GMT

ಫಾತಿಮಾ ರಲಿಯಾ ಹೊಸ ತಲೆಮಾರಿನ ಮಹತ್ವದ ಲೇಖಕಿ. ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಸಮುದಾಯದಿಂದ ಬಂದಿರುವ ಫಾತಿಮಾ ಬರಹದಲ್ಲಿ ಬ್ಯಾರಿ ಸಾಂಸ್ಕೃತಿಕ ಸೊಗಡನ್ನು ಕಾಣಬಹುದು. ಅಹರ್ನಿಶಿ ಪ್ರಕಾಶನ ಹೊರ ತಂದ ಅವರ ‘ಕಡಲು ನೋಡಲು ಹೊರಟವಳು’ ಪ್ರಬಂಧ ಸಂಕಲನ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಾತಿಮಾರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದಲ್ಲದೆ ಅವರ ಕವನ ಸಂಕಲನದ ಹಸ್ತಪ್ರತಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ.ರಾ. ಬೇಂದ್ರೆ ಸಾಹಿತ್ಯಪ್ರಶಸ್ತಿಯನ್ನು ಪಡೆದಿದೆ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಕಥಾ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಉದಾಸವಾಗಿ ಬಿದ್ದುಕೊಂಡಿರುವ ಸಂಜೆಯ ಬೆನ್ನಿಗೊಂದು ಗುದ್ದು ಹಾಕಿ ಎಬ್ಬಿಸಿ, ಅದರ ಜೊತೆ ಜೊತೆಗೆ ತಾನೂ ಚೂರು ಆಕ್ಟಿವ್ ಆಗಬೇಕು ಅಂದುಕೊಳ್ಳುತ್ತಾ ಬಲಗೈಯನ್ನು ಹಾಸಿಗೆಗೆ ಊರಿ ಪೂರ್ತಿ ದೇಹದ ಬಲವನ್ನು ಆ ಕೈಗೆ ವರ್ಗಾಯಿಸಿ ಅಮ್ಮೀ.... ಎಂದು ಕರೆಯುತ್ತಿದ್ದಂತೆ ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ..... ಎಂದು ಮೊಬೈಲ್ ರಿಂಗಾಯಿತು. ಓಡಿ ಬಂದ ಅಮ್ಮ ಕೈ ಚಾಚಿ ಮೊಬೈಲ್ ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದ ಮಗನತ್ತ ನೋಡಿ ಒಂದು ನಿಡಿದಾದ ಉಸಿರು ಚೆಲ್ಲಿ ಮೊಬೈಲ್ ಎತ್ತಿ ಅವನ ಕೈಗಿತ್ತರು. ಅಷ್ಟರಲ್ಲಿ ಫೋನ್ ಕಟ್ ಆಗಿತ್ತು, ಅವನ ಮೊಬೈಲ್ ಪರದೆಯ ಮೇಲಿದ್ದ ಪುನೀತ್ ರಾಜ್ ಕುಮಾರ್ ನಿರಮ್ಮಳವಾಗಿ ನಗುತ್ತಿದ್ದರು.

ಮತ್ತೊಮ್ಮೆ ಮಗನತ್ತ ನೋಡಿದ ಅಮ್ಮ ಅವನ ಬೆನ್ನಿಗೆ ಕೈಕೊಟ್ಟು ಅವನನ್ನು ಎಬ್ಬಿಸಿ ಕೂರಿಸಿದರು. ಸ್ಕ್ರೀನ್ ಸ್ವೈಪ್ ಮಾಡಿದ ರಫಿ ಮಿಸ್ ಕಾಲ್ ಯಾರದೆಂದು ನೋಡಿದರೆ ಹೊಸ ನಂಬರ್. ಮತ್ತೆ ಅದೇ ನಂಬರಿಗೆ ಕರೆ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿರುವಾಗಲೇ ಮತ್ತೊಮ್ಮೆ ಕರೆ ಬಂದಿತ್ತು. 

ಸರ್ ನಾನು ಅರುಣ್ ಅಂತ ನಿಮ್ಮ ಅಭಿಮಾನಿ. ಹೊಸದಾಗಿ ಪ್ರಕಾಶನ ಸಂಸ್ಥೆ ಆರಂಭಿಸುತ್ತಿದ್ದೇನೆ, ಮೊದಲ ಪುಸ್ತಕವಾಗಿ ನನ್ನದೇ ಪುಸ್ತಕವನ್ನು ಪ್ರಕಟಿಸುತ್ತಿದ್ದೇನೆ. ನೀವದನ್ನು ಬಿಡುಗಡೆ ಮಾಡಿ ಮಾತನಾಡಬೇಕು. ನಿಮಗೆ ಪುಸ್ತಕವನ್ನೂ ಕಳಿಸಿದ್ದೇನೆ, ನಾಳೆ ನಾಡಿದ್ದರಲ್ಲಿ ತಲುಪಬಹುದು. ಕಾರ್ಯಕ್ರಮದ ದಿನ ಕಾರೂ ಕಳುಹಿಸುತ್ತೇನೆ, ಬರುವುದಿಲ್ಲ ಎನ್ನಬಾರದು ಎಂದಿತ್ತು ಆ ಕಡೆಯಿಂದ ಒಂದು ಯಾಚನೆಯ ಧ್ವನಿ.

ಆದ್ರೆ ನಾನು ಯಾವ ಸಾರ್ವಜನಿಕ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ ಅರುಣ್ ಅವರೇ

ಸರ್ ನನಗದು ಗೊತ್ತು ಆದರೂ ನೀವೇ ಬರಬೇಕೆಂಬುವುದು ನನ್ನ ಆಸೆ, ಬರ್ಲೇಬೇಕು, ಈಗಾಗ್ಲೇ ಇನ್ವಿಟೇಷನ್ ಕಾರ್ಡ್ ಎಲ್ಲಾ ಕಡೆ ತಲುಪಿಯೂ ಆಗಿದೆ ಎಂದು ಒಂದು ಅಧಿಕಾರಯುತ ಪ್ರೀತಿಯ ಧ್ವನಿಯಲ್ಲಿ ಹೇಳಿದ ಅರುಣ್ ರಫಿಗೆ ಮಾತಾಡಲೇ ಅವಕಾಶವಿಲ್ಲವೆಂಬಂತೆ ಕರೆ ಕಟ್ ಮಾಡಿದ.

ಏನು ಮಾಡಬೇಕೆಂದು ತೋಚದ ರಫಿ ಮೊಬೈಲತ್ತ ಕಣ್ಣಾಡಿಸಿದರೆ ಆಗಲೇ ಇನ್ವಿಟೇಷನ್ ಕಾರ್ಡ್ ಇನ್ಬಾಕ್ಸ್ ಒಳಗೆ ಬಂದು ಕೂತಿತ್ತು. ಅದರ ಹಿಂದೆಯೇ ಅರುಣ್ ಹಾಕಿದ್ದ ಫೇಸ್ಬುಕ್ ಪೋಸ್ಟ್ಗೆ ಬಂದಿದ್ದ ನೂರಾರು ಕಮೆಂಟ್ಗಳ ನೋಟಿಫಿಕೇಶನೂ ಬರತೊಡಗಿತು. ಒಂದು ಬಗೆಯ ವಿಷಾದ ಭಾವದಿಂದಲೂ, ವಿಷಣ್ಣತೆಯಿಂದಲೂ ಬಲ ಕಳೆದುಕೊಂಡ ತನ್ನ ಎಡಕೈ ಮತ್ತು ಕಾಲಿನತ್ತ ನೋಡಿದ ಅವನಿಂದ ನಿಟ್ಟುಸಿರೊಂದು ಹೊರಬಂತು.

‘ಇಷ್ಟೂ ವರ್ಷಗಳ ಕಾಲ ಪ್ರಪಂಚದ ಕಣ್ಣಿಂದ ನನ್ನ ಈ ಸ್ಥಿತಿಯನ್ನು ಮುಚ್ಚಿಟ್ಟಿದ್ದೆ. ಈಗ ಕಾರ್ಯಕ್ರಮದ ನೆಪದಿಂದ ಇದು ಜಗಜ್ಜಾಹೀರಾದರೆ? ಜನ ನನ್ನ ನೋಡಿ ಪಾಪ ಅವನು ಒಂದು ಭಾಗ ಸರಿಯಾಗಿ ಕೆಲಸ ಮಾಡ್ದೇ ಇದ್ರೂ ಹೇಗ್ ಬರೀತಾನೆ ನೋಡಿ ಅಂತ ಮಾತಾಡ್ಕೊಂಡ್ರೆ? ಅದನ್ನೂ ಮೀರಿ ಡಿಸೇಬಿಲಿಟಿಯ ಕಾರಣವನ್ನು ಮುಂದಿಟ್ಟುಕೊಂಡೇ ಇವನು ದೊಡ್ಡ ವ್ಯಕ್ತಿಯಾದ ಅಂತ ಅಂದ್ಕೊಂಡ್ರೆ? ನನ್ನನ್ನು ಒಂದು ಕರುಣೆಯ ದೃಷ್ಟಿಯಿಂದ ನೋಡಿದ್ರೆ? ಬೇಡವೇ ಬೇಡ, ಕಾರ್ಯಕ್ರಮದ ಸಹವಾಸವೇ ಬೇಡ, ಕೊನೆ ಕ್ಷಣದಲ್ಲಿ ಏನಾದರೊಂದು ಕಾರಣ ನೀಡಿ ತಪ್ಪಿಸಿಕೊಂಡರಾಯಿತು’ ಅಂದುಕೊಂಡ. 

ರಫಿ ಹುಟ್ಟಿದಾಗ ಮುಂದೊಂದು ದಿನ ಅವನ ಕೈಕಾಲುಗಳು ಬಲ ಕಳೆದುಕೊಳ್ಳುತ್ತದೆ ಎಂದು ಅಪ್ಪ ಆಗಲೀ ಅಮ್ಮ ಆಗಲೀ ಒಂದು ಕ್ಷಣಕ್ಕೂ ಅಂದುಕೊಂಡವರೇ ಅಲ್ಲ. ಎಲ್ಲರಂತಿದ್ದ ಅವನು ಹತ್ತು ವರ್ಷವಾಗಿದ್ದಾಗ ಒಂದು ದಿನ ಅಮ್ಮೀ ನನ್ನ ಕೈ ಯಾಕೋ ಸೆಟೆದುಕೊಂಡ ಹಾಗೆ ಆಗ್ತಿದೆ ಅಂದಿದ್ದ. ಅಡುಗೆ ಮನೆಯ ಕಟ್ಟೆಯ ಮೇಲಿದ್ದ ಬೇವಿನೆಣ್ಣೆ ಹಚ್ಚಿ, ನೀವಿ ಅಮ್ಮ ಸುಮ್ಮನಾಗಿದ್ದರು. ಎರಡು ಮೂರು ದಿನಗಳು ಕಳೆದು ಕಾಲಿನ ಗಂಟಿನ ಹತ್ರ ನೋವು ಅಂದಿದ್ದ. ಆಗಲೂ ಅವನಮ್ಮ ಎಲ್ಲೆಲ್ಲಿ ಹೋಗಿ ಆಟ ಆಡ್ಕೊಂಡು ಬಿದ್ದು ಬಂದ್ರೆ ನೋವಾಗ್ದೇ ಇನ್ನೇನಾಗ್ಬೇಕು ಎಂದು ತಲೆಗೊಂದು ಮೊಟಕಿ ಬೇವಿನ ಎಣ್ಣೆಯನ್ನೇ ಹಚ್ಚಿದ್ದರು. ಮರುದಿನ ಅವನು ನಡೆಯುವಾಗ ಒಂಚೂರು ಕುಂಟುತ್ತಿದ್ದರೆ ಎರಡು ದಿನಗಳಲ್ಲಿ ಸರಿಹೋಗುತ್ತದೆ ಅಂತಲೇ ಅಂದುಕೊಂಡಿದ್ದರು.

ಆದರೆ ಅದು ‘ಮಸ್ಕ್ಯುಲಾರ್ ಡಿಸ್ಟ್ರೋಫಿ’ ಎನ್ನುವ ಹೆಸರೇ ಉಚ್ಚರಿಸಲು ಬಾರದ ಖಾಯಿಲೆ ಎಂದಾಗಲೀ, ಅದಕ್ಕೆ ಚಿಕಿತ್ಸೆ ಮಾಡಿಸಬೇಕು ಎಂದಾಗಲೀ, ಇಲ್ಲದಿದ್ದರೆ ದಿನೇದಿನೇ ಅವನ ಕೈ ಕಾಲುಗಳು ಬಲ ಕಳೆದುಕೊಳ್ಳುತ್ತಾ ಹೋಗುತ್ತದೆ ಎಂದಾಗಲಿ ಅವರಿಗೆ ಅನ್ನಿಸಲೇ ಇಲ್ಲ. ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಅಪ್ಪನಿಗಾಗಲೀ, ಮನೆ ಮನೆಗೆ ಹೋಗಿ ಕೆಲಸ ಮಾಡುತ್ತಿದ್ದ ಅಮ್ಮನಿಗಾಗಲಿ ಅಷ್ಟೆಲ್ಲಾ ಯೋಚಿಸುವಷ್ಟು ವಿದ್ಯೆ, ಆರ್ಥಿಕ ಅನುಕೂಲ ಎರಡೂ ಇರಲಿಲ್ಲ. ಅವನು ಓದುತ್ತಿದ್ದ ಹಳ್ಳಿಯೊಂದರ ಸರಕಾರೀ ಶಾಲೆಯಲ್ಲಿನ ಟೀಚರ್ಗಳಿಗೂ ಇವನ್ನೆಲ್ಲಾ ಗಮನಿಸುವ ವ್ಯವಧಾನ ಇರಲಿಲ್ಲ. ಹಾಗಾಗಿ ಪುಟ್ಟ ಬಾಲಕ ರಫಿಯ ಕೈ ಕಾಲುಗಳು ಬಲ ಕಳೆದುಕೊಳ್ಳುತ್ತಾ ಬಂದುದು ಜಗತ್ತಿನ ಯಾವ ವಿದ್ಯಮಾನಗಳನ್ನೂ ಬದಲಾಯಿಷುವಷ್ಟು ಮಹತ್ತರವಾದುದು ಆಗಲಿಲ್ಲ.

ಆದರೆ ಅವನ ಜಗತ್ತು ನಿಧಾನವಾಗಿ ಬದಲಾಗ ತೊಡಗಿತ್ತು. ಸ್ವಭಾವತಃ ಎಡಚನಾಗಿದ್ದ ರಫಿ ಬರೆಯುತ್ತಿದ್ದಾಗ ಒಮ್ಮೆಲೆ ಪೆನ್ನು ಕೈಯಿಂದ ಜಾರಿ ಬೀಳಲು, ಓಡುತ್ತಿದ್ದಾಗ ಅವನಿಗೇ ಗೊತ್ತಾಗದಂತೆ ಕಾಲು ಕುಂಟಲು ಆರಂಭವಾಗಿತ್ತು. ಅವನ್ನು ನಿರ್ಲಕ್ಷಿಸಿ ಬರೆಯಲು, ಓಡಲು ಪ್ರಯತ್ನಿಸಿದರೂ ಮುಂದೆ ಸಾಗದಾಗ ಸಣ್ಣದಾಗಿ ಯೋಚನೆಗೆ ಬೀಳುತ್ತಿದ್ದ, ಆದರೆ ಅದು ಆ ಪುಟ್ಟ ಮೆದುಳಲ್ಲಿ ಶಾಶ್ವತವಾಗಿ ದಾಖಲಾಗುವ ನೋವಾಗುತ್ತದೆ ಎಂದು ಅವನಿಗೆ ಯಾವತ್ತೂ ಅನಿಸಿರಲೇ ಇಲ್ಲ.

ಆದರೆ ಒಂದು ದಿನ ಅವನ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾ ಕೂಟಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾಗ ಇವನು ಕಬಡ್ಡಿ ಟೀಮಿನ ಸೆಲೆಕ್ಷನ್ ಆಗುತ್ತಿದ್ದಲ್ಲಿ ಹೋಗಿ ನಿಂತಿದ್ದ. ಎಲ್ಲರಿಗಿಂತ ಮುಂದೆ ನಿಂತಿದ್ದ ಅವನನ್ನು ಕುರಿತು ಶಾಲೆಯ ಪಿ.ಟಿ ಮಾಸ್ತರರು ಏ ಕುಂಟ ನೀನು ಇಲ್ಲೇನು ಮಾಡ್ತಿದ್ದೀಯಾ? ಕಬಡ್ಡಿ ಎಲ್ಲಾ ಸರಿ ಇರುವವರ ಆಟ. ಬೇಕಿದ್ರೆ ನಿನ್ನಂತಹ ಕುಂಟನಿಗೆ ಅಂತ್ಲೇ ಬರುವ ವರ್ಷ ಒಂದು ಆಟ ಸೃಷ್ಟಿ ಮಾಡೋಣ ಎಂದು ಉಡಾಫೆಯಿಂದಲೂ ವ್ಯಂಗ್ಯವಾಗಿಯೂ ಅವನನ್ನು ಕಿಚಾಯಿಸಿದರು. ಹಿಂದೆ ನಿಂತಿದ್ದ ಅಷ್ಟೂ ಹುಡುಗರು ಗೊಳ್ಳನೆ ನಕ್ಕಿದ್ದರು. ಸತ್ತು ಹೋಗುವಷ್ಟು ಅವಮಾನವಾದ ರಫಿ ಕುಂಟುತ್ತಲೇ ಓಡುತ್ತಾ ಮನೆಗೆ ಬಂದು ಬೆನ್ನ ಹಿಂದಿದ್ದ ಬ್ಯಾಗನ್ನು ರೊಯ್ಯನೆ ಬೀಸಿ ಒಗೆದು ನಾನಿನ್ನು ಇಸ್ಕೂಲಿಗೆ ಹೋಗಲ್ಲ ಎಂದು ರಚ್ಚೆ ಹಿಡಿದಿದ್ದ.

ಪಿ.ಟಿ.ಮಾಸ್ತರರನ್ನು ಕೊಚ್ಚಿ ಕೊಲ್ಲುವಷ್ಟು ಸಿಟ್ಟು ಬಂದರೂ ತಮ್ಮ ಅಸಹಾಯಕತೆಗೆ ಮರುಗುತ್ತಾ ಮರುದಿನ ಅವನನ್ನು ವೈದ್ಯರ ಬಳಿ ಕರೆದೊಯ್ದಿದ್ದರು ಅಪ್ಪ ಅಮ್ಮ. ಅಲ್ಲಿ ಅವನನ್ನು ಕೂಲಕುಂಷವಾಗಿ ಪರೀಕ್ಷಿಸಿದ ಡಾಕ್ಟರ್ ಅವನಿಗೆ ‘ಮಸ್ಕ್ಯುಲಾರ್ ಡಿಸ್ಟ್ರೋಫಿ ’ ಖಾಯಿಲೆ ಇದೆ ಅಂತಲೂ, ಅದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಅಂತಲೂ ಹೇಳಿದರು. ಒಮ್ಮೆಗೆ ಅವರ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ತೀರದ ಅಸಹಾಯಕತೆಯೊಂದು ನರನಾಡಿಗಳೆಲ್ಲಾ ಹರಿದು ಕಣ್ಣು ಮಂಜಾಯಿತು. ಹೊರಗೆ ಕೂತಿದ್ದ ಮಗನ ಬಳಿ ತಡವರಿಸುತ್ತಾ ಬಂದ ಅವರಿಬ್ಬರು ನಿಧಾನಕ್ಕೆ ಸರಿ ಹೋಗ್ತದಂತೆ, ಈಗ ಮನೆಗೆ ನಡಿ ಎಂದು ಎಬ್ಬಿಸಿ ಮನೆಗೆ ಕರೆ ತಂದಿದ್ದರು.

ಆ ರಾತ್ರಿ ಅವರಿಬ್ಬರ ಕಣ್ಣೆವೆಗಳು ಒಂದು ಕ್ಷಣಕ್ಕೂ ಮುಚ್ಚಲಿಲ್ಲ. ಯಾವುದೋ ಅರಿಯದ ಭೀತಿಯೊಂದು ಅವರ ಮೂಳೆಗಳನ್ನೆಲ್ಲಾ ಹಿಂಡಿ ಹಿಪ್ಪಿ ಮಾಡಿದಂತೆ, ಉಸಿರು ಗಟ್ಟಿಸಿದಂತೆ, ಹೃದಯಕ್ಕೆ ಹರಿಯಬೇಕಾಗಿರುವ ರಕ್ತವೆಲ್ಲಾ ಒಮ್ಮಿಂದೊಮ್ಮೆಲೇ ಘನೀಭವಿಸಿದಂತೆ ಅನ್ನಿಸಿ ಇಡೀ ಮೈ ಬೆವರುತ್ತಿತ್ತು. ಇಬ್ಬರೂ ಒಬ್ಬರಿಗೊಬ್ಬರು ಆಸರೆ ಎಂಬಂತೆ ತಬ್ಬಿ ಮಲಗಿದ್ದರೂ ಇನ್ನಾವುದೋ ಆಸರೆಯೊಂದು ತಮ್ಮನ್ನು ಆಧರಿಸಲು ಬೇಕೇ ಬೇಕು ಅನ್ನಿಸುತ್ತಿತ್ತು. ಆದರೆ ಆ ಆಸರೆಗಾಗಿ ಅವರು ಯಾರತ್ತ ಕೈ ಚಾಚಬೇಕು? ಉತ್ತರ ಇಬ್ಬರಿಗೂ ಗೊತ್ತಿರಲಿಲ್ಲ.

ಮರುದಿನ ಬೆಳಗ್ಗೆಯಿಂದಲೇ ಇಬ್ಬರೂ ರಫಿಯನ್ನು ಇನ್ನಷ್ಟು ಮುಚ್ಚಟೆ ಮಾಡತೊಡಗಿದ್ದರು. ಅವನಿಗೆ ‘ಬೇಕು’ ಅನ್ನಿಸಿದ್ದು ಅವನ ಬಾಯಿಂದ ಹೊರ ಬೀಳುವ ಮೊದಲೇ ಅವನ ಮುಂದೆ ಬಂದಿರುತ್ತಿತ್ತು. ‘ತಾನು ಎಲ್ಲರಂತಿಲ್ಲ’ ಎನ್ನುವ ಭಾವ ಅವನನ್ನು ಒಂದು ಕ್ಷಣಕ್ಕೂ ಕಾಡಬಾರದು ಎಂದು ಅವರಿಬ್ಬರೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು. ಅದರಲ್ಲೂ ಅಪ್ಪ ಒಂದು ಕೈ ಹೆಚ್ಚೇ ಎನ್ನುವಷ್ಟು ಅವನನ್ನು ನೋಡಿಕೊಳ್ಳುತ್ತಿದ್ದರು.

ನಿಧಾನಕ್ಕೆ ರಫಿಗೂ ಅವನ ಪರಿಸ್ಥಿತಿ ಅರ್ಥವಾಗತೊಡಗಿತ್ತು. ಹೈಸ್ಕೂಲೂ ದಾಟಿ ಪಿಯುಸಿಗೆ ಬರುವಷ್ಟರಲ್ಲಿ ಎಡಗೈಯಲ್ಲಿ ಬರೆಯುತ್ತಿದ್ದ ರಫಿ ಸರಾಗವಾಗಿ ಬಲಗೈಯಲ್ಲಿ ಬರೆಯಲು ಕಲಿತಿದ್ದ. ಒಂದು ಕಾಲಿನಲ್ಲೇ ಸೈಕಲ್ ಬ್ಯಾಲೆನ್ಸ್ ಮಾಡಿಕೊಳ್ಳುವಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದ. ಮೇಲಾಗಿ ಅಪ್ಪ ಅಮ್ಮ ಅವನ ಮೇಲಿಟ್ಟಿರುವ ಪ್ರೀತಿ, ಕಾಳಜಿಗೆ ಗುಲಗಂಜಿಯಷ್ಟೂ ಅಪಚಾರವಾಗಬಾರದು ಎನ್ನುವ ಎಚ್ಚರವೂ ಅವನನ್ನು ಸದಾ ಕಾಡುತ್ತಿತ್ತು. ಮೊದಲೆಲ್ಲಾ ತನ್ನ ಗೆಳೆಯರ ಬದುಕಿನೊಂದಿಗೆ ತನ್ನದನ್ನು ಹೋಲಿಸಿ ನೋಡಿ ಸಂಕಟಪಡುತ್ತಿದ್ದ ಅವನು ಈಗೀಗ ಅವನ್ನೆಲ್ಲಾ ಪೂರ್ತಿ ನಿಲ್ಲಿಸಿದ್ದ. ಹಾಗೆ ಹೋಲಿಸಿಕೊಂಡರೂ ತನ್ನ ಬದುಕೇ ಸುಂದರವಾಗಿದೆ ಅಂತ ಅನ್ನಿಸುತ್ತಿತ್ತು ಅವನಿಗೆ. ಹಾಗಾಗಿಯೇ ತನ್ನ ಹೆಸರಿನ ಮುಂದೆ ‘ರಾಜಕುಮಾರ’ ಅಂತ ಸೇರಿಸಿಕೊಂಡು ಇಡೀ ಬದುಕನ್ನು ಸಂಭ್ರಮಿಸಲು ಸಾಧ್ಯವಾದದ್ದು ಅವನಿಗೆ.

ಸೈಕಲ್ಗೆ ಬೇಡಿಕೆ ಇಟ್ಟಾಗ ಅಪ್ಪ ಮೊದಲು ಒಪ್ಪಿರಲೇ ಇಲ್ಲ. ಒಂದು ಕಾಲಲ್ಲಿ ಬ್ಯಾಲೆನ್ಸ್ ಮಾಡಲು ಹೋಗಿ ಇನ್ನೊಂದು ಕಾಲೂ ಬಲ ಕಳೆದುಕೊಂಡರೆ...? ಎಂದೆಲ್ಲಾ ಅನ್ನಿಸಿ ಏನೇನೋ ಹಾರಿಕೆಯ ಉತ್ತರ ನೀಡಿ ಮಗನ ಬೇಡಿಕೆಯನ್ನು ತಳ್ಳಿ ಹಾಕುತ್ತಿದ್ದರು. ಕೊನೆಗೆ ಅವನಿಗಿರುವ ಆತ್ಮವಿಶ್ವಾಸದ ಮುಂದೆ ಸೋತ ಅವರು ಸೈಕಲ್ ತೆಗೆಸಿಕೊಟ್ಟಿದ್ದರು- ಜಾಗರೂಕತೆಯ ಸಾವಿರ ಮಾತುಗಳನ್ನು ಆಡಿ. ಅಷ್ಟಾಗಿಯೂ ಅವರ ಆತಂಕವೇನೂ ಕಮ್ಮಿ ಆಗಿರಲಿಲ್ಲ. ಮಗ ಸೈಕಲ್ ಹತ್ತುತ್ತಿದ್ದಂತೆ ಅವರ ಎದೆ ಡವಡವ ಹೊಡೆದುಕೊಳ್ಳಲು ಶುರುವಾಗುತ್ತಿತ್ತು. 

ಅದಕ್ಕೆ ಸರಿಯಾಗಿ, ಸೈಕಲ್ ತೆಗೆಸಿಕೊಟ್ಟ ಹತ್ತೇ ದಿನ ದಿನಗಳಲ್ಲಿ ಕಾಲೇಜಿನ ಏರು ರಸ್ತೆಯಲ್ಲಿ ಅವನು ಸೈಕಲ್ ತುಳಿದುಕೊಂಡು ಹೋಗಬೇಕಾದರೆ ಬಿದ್ದುಬಿಟ್ಟಿದ್ದ. ಅಷ್ಟಾರಲ್ಲಾಗಲೇ ಮೊಣಕಾಲಿನವರೆಗೆ ಬಲ ಕಳೆದುಕೊಂಡ ಅವನು ಅಲ್ಲಿದ್ದ ಕಲ್ಲಿನ ಮೇಲೋ, ಪಕ್ಕ ನಿಲ್ಲಿಸಿರುತ್ತಿದ್ದ ಬೈಕ್ನ ಮೇಲೋ ಬಿದ್ದಿರುತ್ತಿದ್ದರೆ ಸೊಂಟವೂ ಮುರಿದುಕೊಳ್ಳುತ್ತಿದ್ದ. ಆದರೆ ಹಾಗಾಗದಂತೆ ಅವನನ್ನು ಕಾಪಾಡಿದ್ದು ಪ್ರೈಮರಿ ಸ್ಕೂಲಿನಿಂದಲೂ ಅವನ ಜೊತೆಗಿರುವ ಜೀವದ ಗೆಳೆಯ ಪ್ರದೀಪ್. 

ಮರುದಿನದಿಂದಲೇ ಸೈಕಲ್ ಆ ಏರುದಾರಿ ತಲುಪುತ್ತಿದ್ದಂತೆ ಅವನನ್ನು ಕೂರಿಸಿಯೇ ತಳ್ಳಿಕೊಂಡು ಹೋಗುತ್ತಿದ್ದ ಪ್ರದೀಪ್. ಆದರೆ ತಾನು ಬಿದ್ದದ್ದು, ಪ್ರದೀಪ್ ತನ್ನನ್ನು ಕಾಪಾಡಿದ್ದು, ಈಗ ಸೈಕಲನ್ನು ತಳ್ಳಿಕೊಂಡು ಹೋಗುತ್ತಿರುವುದು.... ಇವು ಯಾವುದರ ಸಣ್ಣದೊಂದು ಸುಳಿವೂ ಮನೆ ತಲುಪದಂತೆ, ಅದರಲ್ಲೂ ಅಪ್ಪನಿಗೆ ತಲುಪದಂತೆ ಕಾಪಾಡಿದ್ದ ರಫಿ. ವಿದ್ಯೆ ಇಲ್ಲದ ಆದರೆ ಮಗನ ಬದುಕಿನೆಡೆಗಿನ ಕಾಳಜಿಯನ್ನೇ ತನ್ನ ಬದುಕಾಗಿಸಿದ್ದ ಅಪ್ಪನಿಗೆ ಆ ಕ್ಷಣಕ್ಕೆ ಅವನ ಕಾಲೇಜು, ಓದು ಯಾವುದೂ ಮುಖ್ಯವಾಗದೇ ಅವನು ಮಾತ್ರ ಮುಖ್ಯವಾಗಿ ಕಾಲೇಜು ಹೋದದ್ದು ಸಾಕು, ಮನೆಯಲ್ಲಿರು ಎನ್ನುತ್ತಾನೆ ಅನ್ನುವುದು ಚೆನ್ನಾಗಿ ತಿಳಿದಿತ್ತು.

ಈಗ ಸಣ್ಣಪುಟ್ಟ ಅಡೆತಡೆಗಳಿದ್ದರೂ ಅವನ ಬದುಕು ಸರಾಗವಾಗಿಯೇ ಸಾಗುತ್ತಿತ್ತು. ಮಧ್ಯದಲ್ಲಿ ಧುತ್ತೆಂದು ಎದುರಾಗುವ ಸುತ್ತಲಿರುವವರ ಕಿರಿಕ್ಕು, ಕುಹುಕಗಳನ್ನು ಮೀರುವುದನ್ನು ಅವನು ಕಲಿತುಕೊಂಡಿದ್ದ. ಹಾಗಾಗಿಯೇ ಬದುಕು ಅವನಿಗೆ ಸಹಜವಾಗಿ ಒಲಿದಿತ್ತು.

ಆದರೆ ಬದುಕು ತಿರುವು ಮುರುವಾಗಲು, ಇದ್ದುದೆಲ್ಲಾ ಇಲ್ಲವಾಗಲು, ನಿಂತ ನೆಲ ಕುಸಿದು ಬೀಳಲು ಎಷ್ಟು ಹೊತ್ತು? ಎಂದಿನಂತೆ ಅವತ್ತೂ ಕೆಲಸಕ್ಕೆ ಹೊರಟಿದ್ದ ಅಪ್ಪ ಮಗನಿಗೆ ‘ಹುಶಾರು’ ಎಂದು ನೂರು ಬಾರಿ ಹೇಳಿ ತಾನು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಪಾರ್ಟ್ಮೆಂಟ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕಲ್ಲೊಂದು ಅವರ ತಲೆಗೆ ಉರುಳಿ ಬಿದ್ದಿತ್ತು. ಕಣ್ಣು ಮಿಟುಕಿಸುವಷ್ಟರಲ್ಲಿ ರಕ್ತ ಕೋಡಿ ಹರಿದಿತ್ತು. ಸುತ್ತ ಜನ ಸೇರಿದರು. ಒಬ್ಬರಿಗೂ ಅವರ ಪರಿಚಯವಿಲ್ಲ. ಅಷ್ಟಕ್ಕೂ ಒಬ್ಬ ಯಕಶ್ಚಿತ್ ಕಾವಲುಗಾರನ ಪರಿಚಯ ಮಾಡಿಟ್ಟುಕೊಂಡು ದಿನಾ ಕ್ಷೇಮ ವಿಚಾರಿಸಲು ಮಹಾನಗರದ ಜನತೆಯ ಬಳಿಯೇನು ಸಮಯ ದಂಡಿಯಾಗಿ ಬಿದ್ದಿದೆಯೇ? ಹರಿವ ರಕ್ತವನ್ನೂ, ಕಟ್ಟಡದ ಎತ್ತರವನ್ನೂ, ಬಿದ್ದಿರುವ ಕಲ್ಲಿನ ತೂಕವನ್ನೂ ಕಣ್ಣಿಂದ ಅಳತೆ ಮಾಡುತ್ತಾ, ಮೊಬೈಲಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಾ ಇದ್ದವರಿಗೆ ಇದೊಂದು ಜೀವದ ಹಿಂದೆ ಕಮರಿ ಹೋಗಬಹುದಾದ ಬದುಕುಗಳ ಲೆಕ್ಕಾಚಾರಗಳು ಅರ್ಥವಾಗಲಾದರೂ ಹೇಗೆ ಸಾಧ್ಯ? 

ಕೊನೆಗೆ ಅವರನ್ನು ಗುರುತಿಸಲು ಅದೇ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ಮತ್ತೊಬ್ಬ ವಾಚ್ಮ್ಯಾನ್ ಬರಬೇಕಾಯಿತು. ಅಷ್ಟು ಹೊತ್ತಿಗಾಗುವಾಗ ಅವರ ಪ್ರಾಣ ಹಾರಿಹೋಗಿತ್ತು. ಇನ್ನೂ ಪೂರ್ತಿ ಬೆಳಗಾಗುವ ಮುನ್ನವೇ ಒಂದು ಅಮಾಯಕ ಜೀವ ಮಹಾನಗರವನ್ನು ತೊರೆದು ಹೊರಟಿತ್ತು. ಅದರ ಬೆನ್ನಹಿಂದೆಯೇ ಚೆಲ್ಲಿಹೋಗಲಿರುವ ಇನ್ನೆರಡು ಉಸಿರುಗಳನ್ನು ನೆನೆದುಕೊಂಡು ನಗರದ ಎದೆಯ ನರಗಳು ಸೆಟೆದುಕೊಂಡವು, ಒಮ್ಮೆಲೆ ಜೋರು ಮಳೆ ಸುರಿಯಿತು.

ಅಪ್ಪನ ಸಾವಿನ ಸುದ್ದಿ ರಫಿಯ ಕಿವಿಗೆ ಬಿದ್ದಾಗ ಅವನು ಸೈಕಲ್ ಸ್ಟಾಂಡ್ ಹಾಕಿ ಅಚಾನಕ್ಕಾಗಿ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ನಿಂತಿದ್ದ. ಪಕ್ಕದ ಮನೆಯ ಆಂಟಿ ಓಡಿ ಬಂದು ಅಪ್ಪನ ಸಾವಿನ ಸುದ್ದಿ ಹೇಳಿದ್ದರು, ನಂಬಲೇ ತಯಾರಿಲ್ಲದ ಅವನ ಮುಂದೆ ಸಂಜೆಯ ಹೊತ್ತಿಗೆ ಪೋಸ್ಟ್ ಮಾರ್ಟಂ ಮಾಡಿದ ದೇಹ ಹೊತ್ತುಕೊಂಡು ಬಂದ ಆಸ್ಪತ್ರೆಯ ಆ್ಯಂಬುಲೆನ್ಸ್ ನಿಂತಿತ್ತು. ಅದರೊಳಗಿಂದ ಇಳಿದ ಕಟ್ಟಡ ಮಾಲಿಕ ಅಮ್ಮನ ಕೈಗೆ ಒಂದಿಷ್ಟು ನೋಟಿನ ಕಂತೆ ಇರಿಸಿ ತಿರುಗಿಯೂ ನೋಡದೆ ಹೊರಟು ಹೋಗಿದ್ದ.

ಅಪರಕರ್ಮಗಳೆಲ್ಲಾ ಮುಗಿದ ಮೇಲೆ ಮನೆಯ ಹೊರಗೂ ಒಳಗೂ ಒಂದು ದೊಡ್ಡ ಶೂನ್ಯ ತುಂಬಿಕೊಂಡಿತ್ತು. ಒಮ್ಮೆ ಅದು ಗಾಳಿ ತುಂಬಿದ ಬಲೂನಿನಂತೆಯೂ ಮತ್ತೊಮ್ಮೆ ಮಕ್ಕಳು ಆಟ ಆಡುವ ಸಾಬೂನಿನ ನೊರೆಯ ಗುಳ್ಳೆಯಲ್ಲಿರುವ ಕಾಮನಬಿಲ್ಲಿನಂತೆಯೂ ಕಾಣಿಸುತ್ತಿತ್ತು. ಕೈಯಲ್ಲಿ ತೆಗೆದುಕೊಳ್ಳಲು ಹೋದರೆ ಅಣಕಿಸಿ ಮಾಯವಾಗಿಬಿಡುತ್ತಿತ್ತು. ಅಪ್ಪನ ಸಾವು ರಫಿಯನ್ನು ದಿಗ್ಭ್ರಮೆಯ ತುತ್ತತುದಿಗೆ ತಂದು ನಿಲ್ಲಿಸಿತ್ತು. ಅಲ್ಲಿಂದ ಬದುಕಿನ ಕಂದಕದೊಳಕ್ಕೆ ಬೀಳಲು ಎಷ್ಟು ಹೊತ್ತು?

ಒಂದೆಡೆ ಅಪ್ಪನ ಸಾವು, ಮತ್ತೊಂದೆಡೆ ಜೀವಚ್ಛಯವಾಗಿ ಬದುಕುತ್ತಿರುವ ಅಮ್ಮ, ರಫಿ ಇನ್ನಿಲ್ಲದ ಖಿನ್ನತೆಗೆ ಬಿದ್ದ. ಪರಿಣಾಮ ತನ್ನನ್ನೂ, ತನ್ನ ದೇಹವನ್ನೂ ದ್ವೇಷಿಸತೊಡಗಿದ. ‘ನನ್ನ ದೇಹವಾದರೂ ಸರಿ ಇರುತ್ತಿದ್ದರೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ’ ಅಂತ ಪದೇ ಪದೇ ಅಂದುಕೊಳ್ಳುತ್ತಿದ್ದ. ಕಾಲೇಜು, ಓದು ಪೂರ್ತಿ ಮರೆತೇಹೋದ. ಗಂಡನ ಸಾವಿಂದ ಇನ್ನೂ ಚೇತರಿಸಿಕೊಂಡಿರದ ಅಮ್ಮ ಮಗನ ಹೊಸ ಅವತಾರ ನೋಡಿ ಮತ್ತಷ್ಟು ಧರೆಗಿಳಿದಿದ್ದರು. 

ಆಗ ಅವರಿಗೆ ನೆನಪಾದದ್ದು ಮಗನ ಗೆಳೆಯ ಪ್ರದೀಪ್. ಒಂದಿನ ಬೆಳ್ಳಂಬೆಳಗ್ಗೆ ಅವನ ಮನೆಯ ಮುಂದೆ ಹೋಗಿ ಹೇಗಾದರೂ ಮಾಡಿ ನನ್ನ ಮಗನನ್ನು ಮತ್ತೆ ಸರಿ ಮಾಡು ಎಂದು ಕೈ ಮುಗಿದರು. ಜೀವದ ಗೆಳೆಯನ ಬದುಕಿಗೆ ಅವನೊಬ್ಬ ಮಾತ್ರ ಮರುಗಲು ಸಾಧ್ಯ ಅಂತ ಅವರಿಗೂ ಅನ್ನಿಸಿತ್ತೇನೋ! ಯೋಚನೆಗೆ ಬಿದ್ದ ಪ್ರದೀಪ್ ಕೊನೆಗೂ ಆರಿಸಿಕೊಂಡದ್ದು ಕೌನ್ಸಿಲಿಂಗ್ ಎನ್ನುವ ದಾರಿಯನ್ನು.

ಆದರೆ ಕೌನ್ಸಿಲಿಂಗ್ ಮಾಡಿಸಿಕೊಳ್ಳಲು ಬಡಪೆಟ್ಟಿಗೆ ಒಪ್ಪದ ರಫಿಯನ್ನು ಒಪ್ಪಿಸಲು ಪಟ್ಟಪಾಡು ಪ್ರದೀಪ್ ಒಬ್ಬನಿಗೇ ಗೊತ್ತು. ಮತ್ತೆ ರಫಿ ನಿಧಾನಕ್ಕೆ ಬದುಕಿನೊಡಲಿಗೆ ಮರಳತೊಡಗಿದ್ದೆ, ತನ್ನೆಲ್ಲಾ ನಿರಾಸೆಗಳನ್ನು ಮೀರಿಯೂ ಬದುಕಬೇಕು ಅನ್ನಿಸತೊಡಗಿತ್ತು ಅವನಿಗೆ. ಆದರೆ ಅರ್ಧಕ್ಕೆ ಬಿಟ್ಟಿರುವ ಕಾಲೇಜನ್ನು ಪೂರ್ತಿಗೊಳಿಸುವಂತೆ ಮಾಡಲು ಕೌನ್ಸಿಲರಿಗೂ ಸಾಧ್ಯವಾಗಲಿಲ್ಲ, ಪ್ರದೀಪ್ಗೂ ಸಾಧ್ಯ ಆಗಲಿಲ್ಲ. ಅಮ್ಮ ಮಾತ್ರ ಅವನು ಓದದಿದ್ದರೂ ಬೇಡ ಬದುಕಿಗೆ ಹೊಂದಿಕೊಂಡನಲ್ಲಾ ಎಂದು ನೆಮ್ಮದಿಯಾಗಿದ್ದರು.

ಈ ಮಧ್ಯೆ ಕೌನ್ಸಿಲಿಂಗ್ ನಡೆಯುವ ಹೊತ್ತಿಗೆ ಅವನ ಜೊತೆ ಮಾತಾಡುತ್ತಾ ಆಡುತ್ತಾ ವೈದ್ಯರು ಅವನೊಳಗಿರುವ ಬರೆಯುವ ಶಕ್ತಿಯನ್ನು ಹೊರಗೆಳೆದಿದ್ದರು. ಮೊದ ಮೊದಲು ಖಿನ್ನತೆಯಿಂದ ಹೊರಬರಲು, ತನ್ನೆಲ್ಲಾ ನೋವುಗಳನ್ನು ಬರಿದುಗೊಳಿಸಲು ಏನಾದ್ರೂ ಬರಿ ಎಂದವರು ಅವನ ಬರವಣಿಗೆಗೆ ಇರುವ ಅಗಾಧ ಸಾಧ್ಯತೆಯನ್ನು ಕಂಡು ಮೆಲ್ಲಗೆ ಅಕ್ಷರ ಪ್ರಪಂಚದೊಳಕ್ಕೆ ಹೊರಳಿಸಿದ್ದರು.

ಈಗವನಿಗೆ ಹತ್ತಿರ ಹತ್ತಿರ ಇಪ್ಪತ್ತೈದು ವರ್ಷ. ಈ ನಡುವೆ ಅವನ ಕೈ ಕಾಲುಗಳು ಮತ್ತಷ್ಟು ಬಲ ಕಳೆದುಕೊಂಡಿದ್ದವು. ಹಾಸಿಗೆಯಿಂದ ಮೇಲೇಳಬೇಕಾದರೂ ಅಮ್ಮನ ಸಹಾಯ ಬೇಕೇ ಬೇಕು. ಅದೇ ಹೊತ್ತಿಗೆ ಕಳೆದ ಏಳೆಂಟು ವರ್ಷಗಳಿಂದ ಆರ್.ರಾಜಕುಮಾರ ಎಂಬ ಹೆಸರಿನಿಂದ ಬರೆಯುತ್ತಿರುವ ಅವನ ಕಥೆಗಳು ಪ್ರಕಟ ಆಗದ ಕನ್ನಡ ಪತ್ರಿಕೆಗಳೇ ಇಲ್ಲ ಅನ್ನಬಹುದು. ಅವನೀಗ ಕನ್ನಡದ ಬಹುಮುಖ್ಯ ಕಥೆಗಾರ. ಆದರೆ ಸಾರ್ವಜನಿಕ ಸಭೆ, ಸಮಾರಂಭಗಳಿಂದ ದೂರವೇ ಇದ್ದು, ಹೊರ ಪ್ರಪಂಚಕ್ಕೆ ಅಪರಿಚಿತನಾಗಿಯೇ ಉಳಿದಿದ್ದ. ಬದುಕಿನಲ್ಲಿ ಸಾಕುಬೇಕಾದಷ್ಟು ಏಳು ಬೀಳುಗಳನ್ನು ಕಂಡಿರುವ ರಫಿಗೆ ಬೇರೆಯವರ ಕುಹಕಗಳನ್ನೂ ವ್ಯಂಗ್ಯಗಳನ್ನೂ ಈಗ ಎದುರಿಸಲಾಗುವುದಿಲ್ಲ ಎಂದಲ್ಲ, ಆದರೆ ಇನ್ನೊಬ್ಬರ ಕರುಣೆಗೆ ಪಾತ್ರವಾಗುವುದು ಅವನಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಒಂದು ಅನಾಮಿಕತೆಯನ್ನು ಆವಾಹಿಸಿಕೊಂಡಂತೆ ನಿರಮ್ಮಳವಾಗಿ ಬದುಕುತ್ತಿದ್ದ. 

ಈಗ ಸಮಾರಂಭದ ನೆಪದಲ್ಲಿ ಅವನ ಇಡೀ ಬದುಕು ಬಯಲಾಗುವುದರಲ್ಲಿತ್ತು. ಯಾವ ಸಹಾನುಭೂತಿ ಬೇಡವೆಂದು ದೂರ ತಳ್ಳಿದ್ದನೋ ಅದೇ ಅವನನ್ನು ಹುಡುಕಿಕೊಂಡು ಬರುವುದರಲ್ಲಿತ್ತು. ಅರುಣ್ ಧ್ವನಿಯಲ್ಲಿದ್ದ ಪ್ರೀತಿ, ಕಕ್ಕುಲಾತಿಗೆ ಬೇಡ ಅನ್ನಲು ಮನಸ್ಸು ಒಪ್ಪುತ್ತಿರಲಿಲ್ಲವಾದರೂ ಕಾರ್ಯಕ್ರಮವನ್ನು ಒಪ್ಪಿಕೊಳ್ಳಲೂ ಹಿಂಜರಿಯುತ್ತಿದ್ದ.

ಆ ರಾತ್ರಿ ಕಳೆದು ಬೆಳಗಾಯ್ತು. ಇನ್ನೂ ಒಂದು ನಿರ್ಧಾರಕ್ಕೆ ಬರಲಾಗದೆ ಒದ್ದಾಡುತ್ತಿದ್ದ. ಗೆಳೆಯ ಪ್ರದೀಪ್ಗೆ ಫೋನ್ ಹಚ್ಚಿದ. ನಡೆದ ವಿಚಾರಗಳನ್ನೆಲ್ಲಾ ಹೇಳಿದ ಹೋಗೋ ರಫಿ, ನೀನೀಗ ಎಲ್ಲರ ಕರುಣೆಗಳನ್ನು ಮೀರಿ ಬೆಳೆದಿದ್ದಿ. ಹಾಗಾಗಿ ನನ್ನ ಮೇಲೆ ಕರುಣೆ ತೋರಿಯಾರು ಎಂದು ಹೆದರಬೇಡ. ಬೇಕಿದ್ದರೆ ನಿನ್ನ ಜೊತೆ ನಾನೂ ಬರುತ್ತೇನೆ. ಕಾರ್ಯಕ್ರಮಕ್ಕೆ ಇನ್ನೂ ಮೂರು ದಿನಗಳಿವೆಯಲ್ಲಾ, ಅಷ್ಟರಲ್ಲಿ ನನ್ನ ಕೆಲಸಗಳನ್ನೆಲ್ಲಾ ಮುಗಿಸಿಕೊಳ್ಳುತ್ತೇನೆ ಎಂದ. ಆಗಲೇ ಮನೆಯ ಕಾಲಿಂಗ್ ಬೆಲ್ ಸದ್ದಾಯ್ತು, ಬಾಗಿಲು ತೆರೆದ ಅಮ್ಮ ಇವನಿಗಾಗಿ ಬಂದ ಪೋಸ್ಟ್ ತಂದು ಅವನ ಕೈಗಿತ್ತರು.

ಬಿಡಿಸಿ ನೋಡಿದ, ಒಂದು ಪ್ರತಿ ಪುಸ್ತಕ, ಒಳಗೊಂದು ಚಂದದ ಇನ್ವಿಟೇಷನ್ ಕಾರ್ಡ್. ‘ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆಗೊಳಿಸುವವರು: ಆರ್.ರಾಜಕುಮಾರ’ ಎಂದು ದೊಡ್ಡದಾಗಿ ಮುದ್ರಿಸಲಾಗಿತ್ತು. ಕಾರ್ಡನ್ನು ಅಮ್ಮನ ಕೈಗಿತ್ತ. ತಿರುಗಿಸಿ ಮುರುಗಿಸಿ ನೋಡಿದ ಅಮ್ಮನಿಗೆ ಹೆಸರಷ್ಟೇ ಓದಲು ಸಾಧ್ಯ ಆಯಿತು. ರಫಿಯನ್ನು ಹೆತ್ತದ್ದು, ದರ್ಗಾಕ್ಕೆ ಹೋಗಿ ಅವನಿಗೆ ಹೆಸರಿಟ್ಟದ್ದು, ಅವನು ಮೊದಲ ಬಾರಿ ಕೈ ನೋವು ಅಂದದ್ದು, ಡಾಕ್ಟ್ರು ಅವನ ಖಾಯಿಲೆಗೊಂದು ಹೆಸರು ಕೊಟ್ಟದ್ದು, ಸಂಬಂಧಿಕರು ಅವನನ್ನೂ, ಅವನಪ್ಪನನ್ನೂ, ತನ್ನನ್ನೂ ಹಂಗಿಸಿದ್ದು, ಗಂಡ ತೀರಿ ಹೋದಾಗ ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಬೆನ್ನು ತಿರುಗಿಸಿ ಹೋದದ್ದು, ಮಗ ಖಿನ್ನತೆಗೆ ಜಾರಿದ್ದು ಎಲ್ಲಾ ನೆನಪಾಗಿ ಕಣ್ಣಿಂದ ದಳದಳ ನೀರಿಳಿಯಲಾರಂಭಿಸಿತು. ಎಡ ಕೈಯಿಂದ ಅಮ್ಮನ ಕಣ್ಣೀರು ಒರೆಸುತ್ತಲೇ ಇನ್ನೊಂದು ಕೈಯಲ್ಲಿ ರಫಿ ಮೊಬೈಲ್ನಲ್ಲಿ ಅರುಣ್ ನಂಬರ್ ಹುಡುಕತೊಡಗಿದ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಫಾತಿಮಾ ರಲಿಯಾ

contributor

Similar News

ಭಾವ - ವಿಕಲ್ಪ