ನ. 17- 18ರಂದು ಪಿಲಿಕುಳ ಕಂಬಳ | ಕರಾವಳಿ ಉತ್ಸವ ಪಿಲಿಕುಳಕ್ಕೆ ಸ್ಥಳಾಂತರಿಸಲು ನಿರ್ಧಾರ

Update: 2024-11-01 08:50 GMT

ಮಂಗಳೂರು, ನ.1: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಈ ವರ್ಷದಿಂದ ಪುನರಾರಂಭಿಸಲು ನಿರ್ಧರಿಸಲಾಗಿರುವ ಸರಕಾರ ಮಟ್ಟದ ಪಿಲಿಕುಳ ಕಂಬಳವನ್ನು ನ. 17 ಮತ್ತು 18ರಂದು ನಡೆಸಲು ನಿರ್ಧರಿಸಲಾಗಿದೆ. ಈ ನಡುವೆ, ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ಕರಾವಳಿ ಉತ್ಸವದ ಪ್ರಮುಖ ಕಾರ್ಯಕ್ರಮವನ್ನು ಪಿಲಿಕುಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಪಿಲಿಕುಳದಲ್ಲಿ ಕಂಬಳಕ್ಕೆ ಸಂಬಂಧಿಸಿ ಕಂಬಳ ಕರೆ ನಿರ್ಮಾಣದ ಕಾರ್ಯ ಶೇ. 70ರಷ್ಟು ಪೂರ್ಣಗೊಂಡಿದ್ದು, ಕರೆ ನಿರ್ಮಾಣ, ಕಂಬಳ ಆಯೋಜನೆ ಸೇರಿದಂತೆ ಸುಮಾರು 70 ಲಕ್ಷ ರೂ. ಅನುದಾನ ಅಗತ್ಯವಿದೆ. ಶಾಸಕ ಮಂಜುನಾಥ ಭಂಡಾರಿಯವರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 5 ಲಕ್ಷ ರೂ.ಗಳನ್ನು ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ(ಪ್ರಭಾರ) ರಶ್ಮಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಂಬಳದ ಖರ್ಚು ವೆಚ್ಚಗಳನ್ನು ಜಿಲ್ಲಾಡಳಿತದ ಸಮಿತಿ ಮೂಲಕವೇ ನಿರ್ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಂಬಳ ಆಯೋಜನೆಯಾಗುವ ಜಾಗದ ಸ್ಥಳೀಯ ಶಾಸಕರ ಅಧ್ಯಕ್ಷತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಗೌರವಾಧ್ಯಕ್ಷತೆಯ ಸಮಿತಿಯ ಮೂಲಕ ಕಂಬಳಕ್ಕೆ ಸಂಬಂಧಿಸಿ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲೆಯಲ್ಲಿ ಕಂಬಳ ನಡೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಧನವಾಗಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ತಲಾ 5 ಲಕ್ಷ ರೂ.ಗಳನ್ನು ಒದಗಿಸಲಾಗುತ್ತಿತ್ತು. ಕಳೆದ ವರ್ಷ ಆ ಹಣ ಬಿಡುಗಡೆಯಾಗಿಲ್ಲ. ಪ್ರತಿ ಕಂಬಳದವರಿಗೂ ಈ ಪ್ರೋತ್ಸಾಹ ಧನವನ್ನು ಒದಗಿಸಬೇಕು ಎಂದು ದ.ಕ. ಜಿಲ್ಲಾ ಕಂಬಳ ಸಮಿತಿಯ ಪರವಾಗಿ ದೇವಿಪ್ರಸಾದ್ ಶೆಟ್ಟಿಯವರು ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

ಪಿಲಿಕುಳದಲ್ಲಿ ಡಿ.13ರಿಂದ ಜ. 15ರವರೆಗೆ ಕರಾವಳಿ ಉತ್ಸವ ಸಾಧ್ಯತೆ

ನಗರದ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಸಲಾಗುತ್ತಿದ್ದ, ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಕರಾವಳಿ ಉತ್ಸವವನ್ನು ಈ ಬಾರಿ ಪಿಲಿಕುಳದ ಅರ್ಬನ್ ಹಾತ್, ಸಾಂಸ್ಕೃತಿಕ ಗ್ರಾಮ ಸೇರಿದಂತೆ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ಉಪಯೋಗಿಸಿಕೊಂಡು ವಿಶಾಲವಾದ ಪ್ರದೇಶದಲ್ಲಿ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ದ.ಕ. ಜಿಲ್ಲೆಯ ಭಾಷಾ ವೈವಿಧ್ಯತೆ, ಕೊರಗ ಸಮುದಾಯದ ಸಂಸ್ಕೃತಿಯ ಅನಾವರಣ ಸೇರಿದಂತೆ ಹೊಸ ರೀತಿಯಲ್ಲಿ ಗ್ಲೋಬಲ್ ವಿಲೇಜ್ ಮಾದರಿಯಲ್ಲಿ ಕರಾವಳಿ ಉತ್ಸವ ಆಚರಿಸಲು ಚಿಂತಿಸಲಾಗಿದೆ. ಡಿಸೆಂಬರ್ ತಿಂಗಳ ಮೂರನೆ ಶನಿವಾರದಿಂದ ಜನವರಿ ತಿಂಗಳವರೆಗೆ ಒಂದು ತಿಂಗಳ ಅವಧಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಡಿ. 13ರಂದು ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಸಿ ಬಳಿಕ ಒಂದು ತಿಂಗಳ ಕಾಲ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಂಬಳ ಹಾಗೂ ಕರಾವಳಿ ಉತ್ಸವಕ್ಕೆ ಅಗತ್ಯ ಸಮಿತಿಗಳನ್ನು ರಚಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದರು.

ಪಿಲಿಕುಳದಲ್ಲಿ ಕಂಬಳಕ್ಕೆ ಸೈಲೆನ್ಸ್ ರೆನ್ ಅಡ್ಡಿ?

ಪ್ರಾಣಿ ಹಿಂಸೆಯ ನೆಪದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸುವುದಕ್ಕೆ ಈಗಾಗಲೇ ಹೈಕೋರ್ಟ್‌ಗೆ ಕೆಲವರು ಮೊರೆ ಹೋಗಿದ್ದು, ಪಿಲಿಕುಳದಲ್ಲಿರುವ ವನ್ಯ ಜೀವಿಗಳಿಗೂ ಕಂಬಳದಿಂದ ತೊಂದರೆ ಆಗಲಿದೆ ಎಂದು ಹೈಕೋರ್ಟ್‌ನಲ್ಲಿ ಕಳೆದೆರಡು ದಿನಗಳ ಹಿಂದೆ ದೂರು ಸಲ್ಲಿಕೆಯಾಗಿದೆ ಎಂದು ಶಾಸಕ ಅಶೋಕ್ ರೈ ಸಭೆಯಲ್ಲಿ ಗಮನ ಸೆಳೆದರು.

ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಅಶೋಕ್ ರೈ, ಕಿಶೋರ್ ಕುಮಾರ್, ಮೇಯರ್ ಮನೋಜ್ ಕೋಡಿಕಲ್, ಮುಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಎ.ಸಿ. ವಿನಯರಾಜ್, ಅನಿಲ್ ಕುಮಾರ್, ಕಂಬಳ ಸಮಿತಿಯ ಪ್ರಮುಖರಾದ ದೇವಿ ಪ್ರಸಾದಂ ಶೆಟ್ಟಿ, ಗುಣಪಾಲ ಕಡಂಬ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಮೊದಲಾದವರು ಉಪಸ್ಥಿತರಿದ್ದರು.


 

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News