ಬಂಟ್ವಾಳ: ಮಾರಕಾಸ್ತ್ರಗಳಿಂದ ದಾಳಿ ಪ್ರಕರಣ; 8 ಮಂದಿ ಆರೋಪಿಗಳ ಬಂಧನ
ಬಂಟ್ವಾಳ: ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಮಸ್ಸೂರ್ ಯಾನೆ ಮಂಚು ಹಾಗೂ ಈತನ ತಂಡದಲ್ಲಿದ್ದ ಮಿಚ್ಚ ಯಾನೆ ಮಿಸ್ತಕ್, ಸರ್ಫುದ್ದೀನ್, ರಿಝ್ವಾನ್, ಅದ್ನಾನ್ ಯಾನೆ ಅದ್ದು, ಸುಹೈಲ್, ಝಾಹಿದ್, ಸಾದಿಕ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಅ.23 ರಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ತಸ್ಲೀಮ್ ಹಾಗೂ ಶಾಕಿರ್ ಎಂಬವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಂಡದ ಯುವಕರು ಕತ್ತಿ ಝಳಪಿಸುವ ಹಾಗೂ ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವ ಬೆನ್ನಿಗೆ ಪಶ್ಚಿಮ ವಲಯದ ಡಿಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಇದು ಗಂಭೀರ ಪ್ರಕರಣ ಎಂದು ಪರಿಗಣಿಸಿ, ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು.