ಕುಮಾರಸ್ವಾಮಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ : ಡಿಕೆಶಿ ವ್ಯಂಗ್ಯ

Update: 2024-11-02 07:40 GMT

ಡಿ.ಕೆ.ಶಿವಕುಮಾರ್

ಮಂಗಳೂರು: "ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು?" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಾಯಕರಿಗೆ ಮನುಷ್ಯತ್ವವಿಲ್ಲ, ನಾವು ಭಾವುಕ ಜೀವಿ, ಹೀಗಾಗಿ ಕಣ್ಣೀರು ಹಾಕುತ್ತೇವೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, "ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆರಿಸಿದರೂ, ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಲು ಏಕೆ ಬರಲಿಲ್ಲ. ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಅಲ್ಲಿನ ಯಾವ ಕೆರೆಗೆ ನೀರು ತುಂಬಿಸಿದ್ದಾರೆ? ಚನ್ನಪಟ್ಟಣ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಿದ್ದು ಯೋಗೇಶ್ವರ್ ಅವರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕ್ಷೇತ್ರಕ್ಕೆ ಸಣ್ಣ ಕೆಲಸವನ್ನೂ ಮಾಡಿಲ್ಲ. ಕೇವಲ ಶಾಸಕರಾಗಿದ್ದಾಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅನುದಾನ ತಂದು ಕೆಲಸ ಮಾಡಬೇಕಿತ್ತಲ್ಲವೇ? ಏಕೆ ಮಾಡಲಿಲ್ಲ" ಎಂದು ಪ್ರಶ್ನಿಸಿದರು.

"ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಹೇಳಬೇಕು. ಯೋಗೇಶ್ವರ್ ಪಕ್ಷಾಂತರಿ ಇರಬಹುದು, ಇಲ್ಲ ಎಂದು ಹೇಳುವುದಿಲ್ಲ. ಕಾಂಗ್ರೆಸ್ ನಲ್ಲಿ ಇದ್ದವರು ಸಮಾಜವಾದಿ ಪಕ್ಷ, ಬಿಜೆಪಿ ಪಕ್ಷಕ್ಕೆ ಹೋಗಿದ್ದರು. ಎನ್ಡಿಎ ಮೈತ್ರಿ ಸರಿಯಿಲ್ಲ, ಕುಮಾರಸ್ವಾಮಿ ಸರಿಯಿಲ್ಲ. ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರದಿಂದ ಒಳ್ಳೆಯದಾಗಲಿದೆ ಎಂದು ಈಗ ಮತ್ತೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ" ಎಂದು ತಿಳಿಸಿದರು.

ಚುನಾವಣೆಗಾಗಿ ʼಗ್ಯಾರಂಟಿʼ ಬಗ್ಗೆ ಟೀಕೆ:

ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಅವರ ಟೀಕೆ ಬಗ್ಗೆ ಕೇಳಿದಾಗ, "ಅವರು ಚುನಾವಣೆಗಾಗಿ ಏನು ಬೇಕಾದರೂ ಹೇಳಲಿ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಹೊಟ್ಟೆ ತುಂಬಿಸಿ, ಬದುಕು ಕಟ್ಟುತ್ತಿವೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಿವೆ. ಆರ್ಥಿಕವಾಗಿ ಸಬಲವಾಗಿರುವವರು ದೊಡ್ಡ ಕಂಪನಿಯ ಉದ್ಯೋಗಸ್ಥ ಮಹಿಳೆಯರು ನಮಗೆ ಸಾರಿಗೆ ಭತ್ಯೆ ಸಿಗುತ್ತಿದೆ. ನಮಗೆ ಶಕ್ತಿ ಯೋಜನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಂತ್ರಿಗಳ ಜತೆ ಚರ್ಚೆ ಮಾಡುತ್ತೇವೆ ಎಂದು ನಾನು ಹೇಳಿದ್ದೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆಯನ್ನು ನಾವು ಮಂಗಳೂರಿನಲ್ಲೇ ಘೋಷಣೆ ಮಾಡಿದ್ದು, ಇದನ್ನು ನಿಲ್ಲಿಸುವುದಿಲ್ಲ. ಮುಂದಿನ ಅವಧಿಯ ಐದು ವರ್ಷವೂ ಈ ಯೋಜನೆ ಮುಂದುವರಿಯಲಿದೆ ಎಂದರು.

ಅಧಿಕಾರಿಗಳ ತಪ್ಪು ಸರಿಮಾಡುತ್ತೇವೆ:

ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಬೇಕು ಎಂಬ ಯತ್ನಾಳ್ ಅವರ ಪತ್ರದ ಬಗ್ಗೆ ಕೇಳಿದಾಗ, "ಮಾನಸಿಕ ಅಸ್ವಸ್ಥರ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರವಾಗಿ ರೈತರಿಗೆ ಮೊದಲು ನೋಟಿಸ್ ನೀಡಿದ್ದು ಬಿಜೆಪಿ ಸರಕಾರ. ನಾವು ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅಧಿಕಾರಿಗಳು ಮಾಡಿರುವ ತಪ್ಪನ್ನು ನಾವು ಸರಿಪಡಿಸುತ್ತೇವೆ" ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News