ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟಲು ಕ್ರಮ ವಹಿಸಬೇಕು: ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ

ಬೆಂಗಳೂರು : ‘ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕಾಣಿಸಿಕೊಳ್ಳುವ ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಇನ್ನಿತರರ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓಗಳು, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನ ತಡೆಯಲು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮಳೆಗಾಲದಲ್ಲಿ ರೋಗಗಳು ಹರಡುವ ಸಾಧ್ಯತೆಗಳಿದ್ದು, ಇಲಾಖೆ ಅಧಿಕಾರಿಗಳು ಈಗಿನಿಂದಲೇ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಜತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು, ಪ್ರತಿ ಹದಿನಾರು ವರ್ಷಗಳಿಗೆ ಒಮ್ಮೆ ಚಿಕನ್ ಗುನ್ಯಾ ಹಾವಳಿ ಹೆಚ್ಚಾಗಿರುತ್ತದೆ. ಹೀಗಾಗಿ ಇದನ್ನು ಎದುರಿಸಲು ಇಲಾಖೆ ಸನ್ನದ್ಧವಾಗಬೇಕು ಎಂದು ಸಲಹೆ ನೀಡಿದರು.
ಮಳೆಗಾದಲ್ಲಿ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಧಿಕಾರಿಗಳು ಆಂದೋಲನದ ರೀತಿಯಲ್ಲಿ ಕೆಲಸ ಮಾಡಬೇಕು. ಯಾವುದೇ ರೀತಿಯ ರೋಗಗಳು ಜನರಿಗೆ ಹರಡದಂತೆ ಸೂಕ್ತ ಮುನ್ನಚ್ಚರಿಕೆ ಹಾಗೂ ಜಾಗೃತಿ ಮೂಡಿಸಬೇಕು ಎಂದು ಅವರು ಇದೇ ವೇಳೆ ಸೂಚನೆ ನೀಡಿದರು.
ಈ ವೇಳೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಇಲಾಖೆ ಆಯುಕ್ತ ಶಿವಕುಮಾರ್, ಎನ್.ಎಚ್.ಎಮ್ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಸೇರಿದಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು, ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.