‘ಫ್ಯಾಶಿಸಂ’ ಎದುರಿಸಲು ವಿಶಾಲವಾದ ಜನಾಂದೋಲನ ಬೇಕು : ಚಿಂತಕ ಶಿವಸುಂದರ್

ಬೆಂಗಳೂರು : ಕಳೆದ ಒಂದು ದಶಕದಿಂದ ದೇಶದಲ್ಲಿ ಗ್ರಹಣದಂತೆ ಆವರಿಸಿರುವ ರಾಜಕೀಯದ ಮೋದೀಕರಣ, ನ್ಯಾಯಾಂಗದ ಚಂದ್ರಚೂಡೀಕರಣ ಹಾಗೂ ಮಾಧ್ಯಮದ ಅರ್ನಬೀಕರಣದ ವಿರುದ್ಧ ಸಂಘಟಿತ ಹೋರಾಟ ನಿರಂತರ ಚಳವಳಿಯ ರೂಪದಲ್ಲಿ ತಳಮಟ್ಟದಲ್ಲಿ ನಡೆಯಬೇಕಾಗಿದೆ ಎಂದು ಚಿಂತಕ, ʼವಾರ್ತಾಭಾರತಿʼ ಅಂಕಣಕಾರ ಶಿವಸುಂದರ್ ಅವರು ಹೇಳಿದ್ದಾರೆ.
ಮಂಗಳವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನ ದೇವರಾಜು ಅರಸು ಸಭಾಂಗಣದಲ್ಲಿ ʼವಾರ್ತಾಭಾರತಿʼ ಚಾನಲ್ ಹಮ್ಮಿಕೊಂಡಿದ್ದ ವೀಕ್ಷಕರ ಉಪಸ್ಥಿತಿಯಲ್ಲಿ ಶಿವಸುಂದರ್ ಅವರ ಸಮಕಾಲೀನ ವಿಶ್ಲೇಷಣಾ ಕಾರ್ಯಕ್ರಮದ 500ನೇ ಸಂಚಿಕೆಯ ನೇರ ಪ್ರಸಾರ ಹಾಗೂ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರಧಾನವಾಗಿ ರಾಜಕೀಯದ ಮೋದೀಕರಣ, ಆರ್ಥಿಕತೆಯ ಅದಾನೀಕರಣ, ಮಾಧ್ಯಮದ ಅರ್ನಬೀಕರಣ, ನ್ಯಾಯಾಂಗದ ಚಂದ್ರಚೂಡೀಕರಣ, ಕಾರ್ಯಾಂಗದ ಸಂಘೀಕರಣ, ರಾಷ್ಟ್ರದ ರಾಮಕರಣ ಹಾಗೂ ಪ್ರತಿರೋಧದ ಕಾಂಗ್ರೆಸೀಕರಣ ಬಹಳ ದೊಡ್ಡ ಸವಾಲುಗಳಾಗಿವೆ. ಇದನ್ನು ನಾವು ಜನರಲ್ಲಿ ಅರಿವು ಮೂಡಿಸುವ ಕಾರ್ಯಕರ್ತರ ಪಡೆಯ ಮೂಲಕ ಚಳವಳಿ ಕಟ್ಟಿ ಎದುರಿಸಬೇಕಾಗಿದೆ. ಇಲ್ಲದಿದ್ದರೆ, ‘ಫ್ಯಾಶಿಸಂ’ ವ್ಯಾಪ್ತಿ ಸಂಪೂರ್ಣವಾಗಿ ಸಮಾಜದಲ್ಲಿ ಹರಡಿಕೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ವಾರ್ತಾಭಾರತಿʼ ಚಾನಲ್ ಹಮ್ಮಿಕೊಂಡಿದ್ದ ಶಿವಸುಂದರ್ ಅವರ ಸಮಕಾಲೀನ ವೀಕ್ಷಕರ ಉಪಸ್ಥಿತಿಯಲ್ಲಿ 500ನೇ ಸಂಚಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಪ್ರಗತಿಪರ ಚಿಂತಕರು, ಹೋರಾಟಗಾರರು, ಲೇಖಕರು, ಪತ್ರಕರ್ತರು, ವಿದ್ವಾಂಸರು, ವಿದ್ಯಾರ್ಥಿಗಳು ಭಾಗವಹಿಸಿದರು.
ಅಂಬೇಡ್ಕರ್ ಬಯಸಿದ ಸಂವಿಧಾನ ಪಡೆಯಬೇಕಿದೆ
ಈಗ ನಮಗೆ ಸಿಕ್ಕಿರುವುದು ಅಂಬೇಡ್ಕರ್ ಬರೆದ ಸಂವಿಧಾನವೇ ಹೊರತು, ಅಂಬೇಡ್ಕರ್ ಬಯಸಿದ ಸಂವಿಧಾನ ಅಲ್ಲ. ನಾವು ಅಂಬೇಡ್ಕರ್ ಬರೆದ ಸಂವಿಧಾನವನ್ನು ಉಳಿಸಿಕೊಂಡು ಅಂಬೇಡ್ಕರ್ ಬಯಸಿದ ಸಂವಿಧಾನವನ್ನು ಪಡೆಯಬೇಕಿದೆ. ಹಾಗೆಯೇ, ಜನಪರ ಚಿಂತನೆ ಹಾಗೂ ಚಳವಳಿ ಪ್ರಯೋಗ ಶಾಲೆಯಲ್ಲಿ ಹುಟ್ಟಲ್ಲ. ಅದು ಹುಟ್ಟುವುದು ಜನರ ನಡುವೆ ತಳಮಟ್ಟದಲ್ಲಿಯೇ. ಹೀಗಾಗಿ, ಅರಿವು ಇರುವ ಕಾರ್ಯಕರ್ತರ ಪಡೆಯನ್ನು ನಾವು ಹುಟ್ಟುಹಾಕಬೇಕು ಎಂದು ಚಿಂತಕ, ʼವಾರ್ತಾಭಾರತಿʼ ಅಂಕಣಕಾರ ಶಿವಸುಂದರ್ ಹೇಳಿದರು.
ಚಳವಳಿಗಳು ಈಗ ಆರಾಮವಾಗಿವೆ. ಆದರೆ, ‘ಫ್ಯಾಶಿಸಂ’ ಎದುರಿಸಲು ವಿಶಾಲವಾದ ಜನಾಂದೋಲನ ಬೇಕು. ನಾವು ಜನರ ಬಳಿ ಹೋಗುವುದನ್ನು ಮತ್ತಷ್ಟು ಹೆಚ್ಚಿಸಬೇಕು. ಸಮಾವೇಶಕ್ಕಿಂತ ಶಿಬಿರ ಮಾಡುವುದು ಮುಖ್ಯವಾಗಿದೆ. ಕಾರ್ಯಕರ್ತರಲ್ಲಿ ಮಾತನಾಡಿ ಅವರನ್ನು ಸಂಘಟಿಸಬೇಕಾಗಿದೆ. ಅದು ಇಂದು-ನಾಳೆಯೇ ಆಗುವುದಿಲ್ಲ. ಅದಕ್ಕಾಗಿ ಇಪ್ಪತ್ತು ಮೂವತ್ತು ವರ್ಷಗಳ ನೀಲನಕ್ಷೆ ಇರಬೇಕು. ಜೊತೆಗೆ ನಿಷ್ಠುರ ವಿಮರ್ಶೆ, ವಿಶ್ಲೇಷಣೆಗೆ ನಾವು ಸಿದ್ಧವಿರಬೇಕು.
-ಶಿವಸುಂದರ್, ಚಿಂತಕ
‘ವಾರ್ತಾಭಾರತಿ’ ದಾಖಲೆ ಬರೆದಿದೆ: ಡಾ.ಎ.ನಾರಾಯಣ
ಕರಾವಳಿ ಭಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಅನೇಕ ಪತ್ರಿಕೆಗಳು ಹೆಚ್ಚು ಕಾಲ ಉಳಿಯಲಿಲ್ಲ. ಆದರೆ, ʼವಾರ್ತಾಭಾರತಿʼ ಎರಡು ದಶಕಗಳಿಗೂ ಹೆಚ್ಚು ಕಾಲ ಪರಿಪೂರ್ಣವಾಗಿ ಹೊರಬರುವ ಮೂಲಕ ವಿಶೇಷ ದಾಖಲೆಯೇ ಬರೆದಿದೆ ಎಂದು ಲೇಖಕ, ಚಿಂತಕ ಡಾ.ಎ.ನಾರಾಯಣ ಬಣ್ಣಿಸಿದ್ದಾರೆ.
ಶಿವಸುಂದರ್ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಗಾರು, ಜನವಾಹಿನಿ ಸೇರಿದಂತೆ ಅನೇಕ ಪತ್ರಿಕೆಗಳು ಕರಾವಳಿಯಲ್ಲಿ ಹುಟ್ಟಿಕೊಂಡವು. ಆದರೆ, ದೀರ್ಘವಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ʼವಾರ್ತಾಭಾರತಿʼ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದುಕೊಂಡು ಬರುತ್ತಿದ್ದು, ಪತ್ರಿಕೋದ್ಯಮದಲ್ಲಿ ವಿಶೇಷ ದಾಖಲೆಯೇ ಎನ್ನಬಹುದು ಎಂದು ನುಡಿದರು.
ಸತ್ಯ ಹೇಳುವುದು ಕಷ್ಟ. ಒಬ್ಬಂಟಿಯಾಗಿ ಸತ್ಯ ಹೇಳುವುದು ಇನ್ನೂ ಕಷ್ಟವಾಗಿರುವ ಕಾಲವಿದು. ನಿಷ್ಠುರವಾಗಿ ಒಬ್ಬಂಟಿಯಾಗಿ ಸತ್ಯ ಹೇಳುವುದೂ ಬಹಳ ಕಷ್ಟ. ಆದರೆ, ಅಂತಹ ಕೆಲಸವನ್ನು ಚಿಂತಕ ಶಿವಸುಂದರ್ ಅವರು ಮಾಡುತ್ತಾ ಬಂದಿದ್ದಾರೆ. ಅದಕ್ಕೆ ‘ವಾರ್ತಾಭಾರತಿ’ ವೇದಿಕೆ ಕಲ್ಪಿಸುತ್ತಾ ಬಂದಿದೆ. ಇಬ್ಬರಿಗೂ ಕನ್ನಡ ನಾಡು ಋಣಿಯಾಗಿದೆ. ‘ವಾರ್ತಾಭಾರತಿ’ ನಿರ್ಭೀತವಾಗಿ ನಿಜವನ್ನು ನುಡಿಯಬೇಕೆಂದು ಸಮಕಾಲೀನಕ್ಕೆ ಅವಕಾಶ ಮಾಡಿಕೊಡುವ ಸಾಹಸವನ್ನು ಮಾಡಿತು.
"ಆರು ವರ್ಷಗಳಲ್ಲಿ ‘ಸಮಕಾಲೀನ’ ಎಪಿಸೋಡ್ ಪ್ರಧಾನವಾಗಿ ಫ್ಯಾಶಿಸ್ಟ್, ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ನೀತಿಗಳನ್ನು, ಆಳುವ ವರ್ಗಗಳ ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಹಿಂದುತ್ವವಾದಿ ನೆರೇಟಿವ್‌ಗಳನ್ನೂ ಬಯಲುಗೊಳಿಸುತ್ತಾ ಬಂದಿದೆ. ಸಮಕಾಲೀನದ ಐನೂರು ಎಪಿಸೋಡ್‌ಗಳು ಐನೂರು ಕಣ್ಣೀರ ಹನಿಗಳು. ಪ್ರತೀ ಎಪಿಸೋಡ್ ಹಿಂದೆ ಇದ್ದಿದ್ದು ಅಗಾಧ ನೋವು. ಇದೊಂದು ಅಂಧಕಾರದ ಸಮಯದ ದಾಖಲೀಕರಣ"
-ಡಾ.ಎ.ನಾರಾಯಣ, ಲೇಖಕ, ಚಿಂತಕ