ಖನಿಜಯುಕ್ತ ಬಾಟಲಿ ನೀರು ಆರೋಗ್ಯಕ್ಕೆ ಮಾರಕ : ಸಚಿವ ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು: ಖನಿಜಯುಕ್ತ ಬಾಟಲಿಯಲ್ಲಿರುವ ಕುಡಿಯುವ ನೀರು ಆರೋಗ್ಯಕ್ಕೆ ಮಾರಕ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಹಾರ ಇಲಾಖೆಯು ಬಾಟಲಿಗಳಲ್ಲಿನ ಕುಡಿಯುವ ನೀರಿನ್ನು ಪರೀಕ್ಷೆಗೆ ಒಳಪಡಿಸಿದಾಗ ಬಾಟಲ್‍ನಲ್ಲಿ ಖನಿಜಯುಕ್ತ ಕುಡಿಯುವ ನೀರು ಸುರಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ವಿವರಣೆ ನೀಡಿದರು.
ರಾಷ್ಟ್ರ ಮತ್ತು ರಾಜ್ಯದ 296 ಕಂಪೆನಿಗಳ ಬಾಟಲಿ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೇವಲ 72 ಬಾಟಲ್‍ಗಳ ನೀರು ಸುರಕ್ಷಿತ ಮತ್ತು ಉಳಿದವು ಅಸುರಕ್ಷಿತ ಎಂಬ ಫಲಿತಾಂಶ ಬಂದಿದೆ. ಸುರಕ್ಷಿತವಲ್ಲದ ಬಾಟಲ್ ನೀರಿನಲ್ಲಿ ಕೆಮಿಕಲ್ ಹಾಗೂ ಬ್ಯಾಕ್ಟೀರಿಯಾ ಕಂಡುಬಂದಿದೆ, ಇಂತಹ ಕಂಪೆನಿಗಳಿಗೆ ಬೀಗಮುದ್ರೆ ಹಾಕಲಾಗುವುದು ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಸ್ಥಳೀಯ ಕಂಪೆನಿಗಳ ನೀರು ಕುಡಿಯಲು ಅನರ್ಹವಾಗಿದ್ದು, ರಾಷ್ಟ್ರ ಮಟ್ಟದ ಕೆಲವು ಕಂಪೆನಿಗಳ ನೀರೂ ಸುರಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ಕಂಪೆನಿಗಳು ಯಾವುವು ಎಂಬುದನ್ನು ಬಹಿರಂಗ ಪಡಿಸಲಾಗುವುದು. ಬಾಟಲ್ ನೀರಿನಲ್ಲಿ ಮಿನರಲ್ ಇರುವುದಿಲ್ಲ, ಇನ್ನು ಮುಂದೆ ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪೆನಿಗಳ ವಿರುದ್ಧ ಇಲಾಖೆ ಕ್ರಮ ಜರುಗಿಸಲಿದೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದರು.
ಕ್ಯಾನ್ಸರ್‍ಗೆ ಕಾರಣ: ಕೇಸರಿ ಮಿಶ್ರಿತ ತೊಗರಿಬೇಳೆ ಬಳಕೆ ಮಾಡಿದರೆ ಪಾರ್ಶ್ವವಾಯು, ಅಂಗವೈಕಲ್ಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ, ಹಸಿರು ಬಟಾಣಿ ಸೇವನೆಗೂ ಮುನ್ನ ಎಚ್ಚರ ವಹಿಸಬೇಕು. ಕೃತಕ ಬಣ್ಣ ಮಿಶ್ರಣದ ಬಟಾಣಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ನಿಷೇಧಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ತೊಗರಿಬೇಳೆಯಲ್ಲಿ ಕೇಸರಿ ಬಣ್ಣ ಮಿಶ್ರಣ ಪತ್ತೆಯಾಗಿದೆ. ಇದು ವಿಷಕಾರಿ, ಇದರ ಸೇವನೆಯಿಂದ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಇಂತಹ ಬೇಳೆ ಬೆಳೆಯಲಾಗುತ್ತಿದ್ದು, ನಿರಂತರ ಸೇವನೆಯಿಂದ ಶಾಶ್ವತ ಅಂಗವೈಕಲ್ಯ ಉಂಟಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿನ ಕೆಲವು ಕಂಪೆನಿಗಳ ಜೇನುತುಪ್ಪದಲ್ಲೂ ರಾಸಾಯನಿಕ ಬಳಕೆಯಾಗುತ್ತಿದೆ, ಕಾಗದದ(ಪೇಪರ್) ಲೋಟ ಬಳಕೆಯಿಂದಲೂ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ. ಈ ಲೋಟಗಳಲ್ಲಿ ಬಿಸಿಯಾದ ಕಾಫಿ, ನೀರು ಕುಡಿದರೆ ಪ್ಲ್ಯಾಸ್ಟಿಕ್ ಕರಗಿ ಮನುಷ್ಯನ ದೇಹದಲ್ಲಿ ಸೇರಿ ಕ್ಯಾನ್ಸರ್‍ಗೆ ಕಾರಣವಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದರು.
ಔಷಧಾಲಯ ಪರೀಕ್ಷಾ ಪ್ರಯೋಗ: ಔಷಧ ಆಡಳಿತ ವಿಭಾಗದ ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ದೃಷ್ಠಿಯಿಂದ ಮಾರ್ಚ್ ತಿಂಗಳಲ್ಲಿ ಒಟ್ಟು 1,891 ಔಷಧ ಮಾದರಿಗಳನ್ನು ವಿಶ್ಲೇಷಣೆ ನಡೆಸಲಾಗಿದೆ. ಇವುಗಳಲ್ಲಿ 1,298 ಉತ್ತಮ ಗುಣಮಟ್ಟದ ಔಷಧಗಳೆಂದು ಘೋಷಿತವಾಗಿವೆ. ಮತ್ತು 41 ಗುಣಮಟ್ಟವಲ್ಲದ ಔಷಧಿಗಳೆಂದು ಘೋಷಿತವಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಸುಧಾರಣಾ ಕ್ರಮ: ಗುಣಮಟ್ಟವಲ್ಲದ ಘೋಷಿತವಾದ ಔಷಧಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯುವ ನಿಟ್ಟಿನಲ್ಲಿ ಸದರಿ ದಾಸ್ತಾನುಗಳನ್ನು ಹಿಂಪಡೆಯಲು, ಚಿಲ್ಲರೆ ಔಷಧ ಮಳಿಗೆಗಳು, ಸಗಟು ಮಾರಾಟಗಾರರು ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಈ ತಂತ್ರಾಂಶವನ್ನು ಜಾರಿಗೆ ತರಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಪನ್ನೀರ್‌ಗಳ 231 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 32 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಆಗಿದೆ. ಸಿಹಿ ತಿಂಡಿಗಳ 198 ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ 83 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಎಂದು, 81 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. ಖಾರ ಮಿಕ್ಚರ್‌ಗಳ 119 ಮಾದರಿಗಳಲ್ಲಿ 27 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 4 ಮಾದರಿಗಳು ಅಸುರಕ್ಷಿತ ಎಂದು, 23 ಮಾದರಿಗಳು ಸುರಕ್ಷಿತವಾಗಿವೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
11 ಹೋಟೆಲ್‍ಗಳಿಗೆ 1.15 ಲಕ್ಷ ರೂ. ದಂಡ: ಆಹಾರ ಪದಾರ್ಥಗಳ ತಯಾರಿಕಾ, ಮಾರಾಟ ಘಟಕಗಳಿಗೆ ಪರಿಶೀಲನಾ ಭೇಟಿ ನೀಡಿ ಲೋಪಗಳು ಕಂಡು ಬಂದ 92 ಘಟಕಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿದ್ದು, 6 ಘಟಕಗಳಿಗೆ 38 ಸಾವಿರ ರೂ. ದಂಡ ವಿಧಿಸಲಾಗಿದೆ. ಜಿರಲೆ, ಇಲಿಗಳು ನಿಯಂತ್ರಣಕ್ಕೆ ವಹಿಸಲಾಗಿರುವ ಕ್ರಮಗಳ ಕುರಿತಂತೆ 590 ಹೋಟೆಲ್‍ಗಳು, ರೆಸ್ಟೋರೆಂಟ್‍ಗಳಿಗೆ ಪರಿಶೀಲನಾ ಭೇಟಿ ನೀಡಿದ್ದು, ನಿಯಂತ್ರಣಾ ಕ್ರಮಗಳನ್ನು ವಹಿಸದ 214 ಹೋಟೆಲ್‍ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, 11 ಹೋಟೆಲ್‍ಗಳು 1.15 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.