ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

Update: 2025-04-08 18:07 IST
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ
  • whatsapp icon

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಂಗಳವಾರವೂ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಎಡಬಿಡದೇ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಧರಾಶಾಹಿಯಾದ ಪರಿಣಾಮ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಕಳಸ ತಾಲೂಕು ವ್ಯಾಪ್ತಿಯಲ್ಲಿ ಮರಗಳು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ. ಮೂಡಿಗೆರೆ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಕೆಲ ಹೊತ್ತು ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

 

 ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸಾಧಾರಣ ಮಳೆಯಾಗುತ್ತಿದ್ದು, ಸೋಮವಾರ ಮಲೆನಾಡು ಭಾಗದಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಮಂಗಳವಾರ ಭಾರೀ ಪ್ರಮಾಣದಲ್ಲಿ ಆರ್ಭಟಿಸಿದೆ. ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಮಳೆ, ಗಾಳಿಯ ಆರ್ಭಟಕ್ಕೆ ಕಳಸ ತಾಲೂಕಿನಾದ್ಯಂತ ಅಲ್ಲಲ್ಲಿ ಮರಗಳು ನೆಲಕ್ಕುರುಳಿದ್ದರೆ, ತಾಲೂಕಿನ ಕುದುರೆಮುಖ ಸಮೀಪದ ನೆಲ್ಲಿಬೀಡು, ಅಜ್ಜಿಗದ್ದೆ ಎಂಬಲ್ಲಿ ಮನೆಗಳ ಮರಬಿದ್ದು, ಮನೆಯ ಗೋಡೆ, ಮೇಲ್ಛಾವಣಿಗಳಿಗೆ ಹಾನಿ ಸಂಭವಿಸಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ತನೂಡಿ ಹಾಗೂ ಆಳಗೋಡು ಎಂಬಲ್ಲಿ ರಮೇಶ್ ಹಾಗೂ ವಾಸು ಎಂಬವರ ಮನೆಂಗಳ ಮೇಲೆ ಮರ ಬಿದ್ದು ಮನೆಗಳಿಗೆ ಹಾನಿ ಸಂಭವಿಸಿದೆ. ಭಾರೀ ಮಳೆಗೆ ಮರಗಳು ಉರುಳಿಬಿದ್ದ ಪರಿಣಾಮ ವಿದ್ಯುತ್ ತಂತಿ, ಕಂಬಗಳು ತುಂಡಾಗಿ ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಜಾವಳಿ, ಸುಂಕಸಾಲೆ, ಮರಸಣಿಗೆ, ಹಿರೇಬೈಲು, ತರುವೆ, ಬಣಕಲ್, ಕೊಟ್ಟಿಗೆಹಾರ ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದಿದೆ. ಆಲಿಕಲ್ಲು ಮಳೆಯಿಂದಾಗಿ ಕಾಫಿ ಬೆಳೆ ಮೇಲೆ ಪ್ರತೀಕೂಲ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಪ್ಪ ತಾಲೂಕಿನ ಜಯಪುರ, ಹೇರೂರು, ಬಸರೀಕಟ್ಟೆ, ಕೊಗ್ರೆ, ಹರಿಹರಪುರ ಮತ್ತಿತರ ಕಡೆಗಳಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಧರಾಶಾಹಿಯಾಗಿವೆ. ಇನ್ನು ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲೂ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಹಲವು ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದರೆ, ಉಳಿದೆಡೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು.  ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ರೈತರ ಮುಖದಲ್ಲಿ ಭಾರೀ ಮಳೆಯಾಗುವ ಆಶಾಭಾವ ವ್ಯಕ್ತವಾಗಿದೆ.

ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈ ಮಳೆ ಕಾಫಿ, ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಲ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆ ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಬಿಸಿಲಿನ ಧಗೆ ಕಡಿಮೆಯಾಗಿದ್ದು, ಬಿಸಿಲಝಳದಿಂದ ತತ್ತರಿಸಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News