ವಿಧಾನಸೌಧ ಪ್ರವೇಶಕ್ಕೆ ಪ್ರವಾಸಿಗರಿಗೆ ಟಿಕೆಟ್ ವ್ಯವಸ್ಥೆ: ಸರಕಾರ ಆದೇಶ
ಬೆಂಗಳೂರು : ವಿಧಾನಸೌಧ ಕಟ್ಟಡಕ್ಕೆ ದೇಶಿಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಗೈಡೆಡ್ ಟೂರ್’ ವ್ಯವಸ್ಥೆಯನ್ನು ಜಾರಿಗೆ ತಂದು, ಪ್ರವಾಸಿಗರು ಆನ್‌ಲೈನ್ ಮುಖಾಂತರ ಟಿಕೆಟ್ ಪಡೆಯಲು ತಂತ್ರಾಂಶ ಅಭಿವೃದ್ಧಿಪಡಿಸಲು ಸರಕಾರ ಆದೇಶ ಹೊರಡಿಸಿದೆ.
ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ‘ಗೈಡೆಡ್ ಟೂರ್’ ವ್ಯವಸ್ಥೆ ಕಲ್ಪಿಸಲಾಗುವುದು. ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ತಲಾ 30ರಂತೆ ತಂಡಗಳನ್ನಾಗಿ ವಿಭಜಿಸಿ, ವೀಕ್ಷಣೆಗೆ ಅವಕಾಶ ಕಲ್ಪಿಸುವುದು ಹಾಗೂ ಈ ಪ್ರತಿ ತಂಡಗಳ ಮೇಲ್ವಿಚಾರಣೆ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಬೇಕು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರನ್ನು ಇದಕ್ಕೆ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದು ತಿಳಿಸಲಾಗಿದೆ.
ಪ್ರತಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹಾಗೂ ವಿವರಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಕಾರ್ಯಕಾರಿ) ಹಾಗೂ ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾ ದಿನವೇ ಸಲ್ಲಿಸಬೇಕು. ಗೈಡೆಡ್ ಟೂರ್‌ಗೆ ಅನುವಾಗುಂತೆ ಪ್ರವಾಸಿಗರು ಆನ್‌ಲೈನ್ ಮುಖಾಂತರ ಟಿಕೆಟ್ ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ಒಂದು ತಂತ್ರಾಂಶ ಅಭಿವೃದ್ಧಿಪಡಿಸುವಂತೆ ಸೂಚನೆ ನೀಡಲಾಗಿದೆ.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರವು ಜನಸ್ನೇಹಿಯಾಗಿರಬೇಕು ಹಾಗೂ ವಸೂಲಿ ಮಾಡುವ ಶುಲ್ಕದಲ್ಲಿ ನಿರ್ದಿಷ್ಟ ಶುಲ್ಕವನ್ನು ಪ್ರವಾಸೋದ್ಯಮ ಇಲಾಖೆಯು ಜಮೆ ಮಾಡಬೇಕು. ವಿಧಾನಸೌಧದ ಉಪ ಪೊಲೀಸ್ ಆಯುಕ್ತರು ಭದ್ರತೆಗೆ ಸಂಬಂಧಿಸಿದಂತೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಪ್ರವಾಸಿಗರು ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಲಾಗಿದೆ.
ವಿಧಾನಸೌಧ ಕಟ್ಟಡ, ಉದ್ಯಾನವನ, ಪ್ರತಿಮೆಗಳಿಗೆ ಯಾವುದೇ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಕ್ರಮ ವಹಿಸಬೇಕು. ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಪರಿವೀಕ್ಷಣೆಯ ಕುರಿತು ರೂಟ್ ಮ್ಯಾಪ್ ಅನ್ನು ಲೋಕೋಪಯೋಗಿ ಇಲಾಖೆ, ವಿಧಾನಸೌಧ ಭದ್ರತಾ ವಿಭಾಗದೊಂದಿಗೆ ಸಮಾಲೋಚಿಸಿ ತಯಾರಿಸಿ ಕಡ್ಡಾಯವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅನುಮೋದನೆ ಪಡೆಯಬೇಕು.
ಪರಿವೀಕ್ಷಣೆಯ ಸಂದರ್ಭದಲ್ಲಿ ಪ್ರವಾಸಿಗಳ ಅನುಕೂಲಕ್ಕಾಗಿ ಸುಸಜ್ಜಿತ ವೈದ್ಯಕೀಯ ತಂಡದೊಂದಿಗೆ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಲು ಆರೋಗ್ಯ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು. ಅಗ್ನಿ ಅವಘಡ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕ ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸಿದ್ಧರಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರವಾಸಿಗರು ಪಾಲಿಸಬೇಕಾದ ಕಡ್ಡಾಯ ಸೂಚನೆಗಳು: ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ವಿಧಾನಸೌಧದ ಆವರಣದ ಸ್ವಚ್ಛತೆಯನ್ನು ಕಾಪಾಡಲು ಬದ್ಧರಾಗಿರಬೇಕು. ಡ್ರೋನ್ ಕ್ಯಾಮರಾವನ್ನು ಬಳಸುವಂತಿಲ್ಲ. ಕುಡಿಯುವ ನೀರನ್ನು ಹೊರತುಪಡಿಸಿ, ಇನ್ನುಳಿದ ಯಾವುದೆ ಆಹಾರ, ತಿಂಡಿ, ತಿನಿಸುಗಳನ್ನು ತರುವಂತಿಲ್ಲ. ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅಲ್ಲದೇ, ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.