ಗ್ರೇಟರ್ ಬೆಂಗಳೂರು ಆಡಳಿತ ಸೇರಿದಂತೆ 6 ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲ

Update: 2025-04-09 00:17 IST
ಗ್ರೇಟರ್ ಬೆಂಗಳೂರು ಆಡಳಿತ ಸೇರಿದಂತೆ 6 ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲ

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್

  • whatsapp icon

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ, ಬೆಂಗಳೂರು ನಗರ ವಿಸ್ತೀರ್ಣವನ್ನು ಹೆಚ್ಚಿಸುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಸೇರಿದಂತೆ 6 ವಿಧೇಯಕಗಳ ಬಗ್ಗೆ ಹೆಚ್ಚಿನ ವಿವರಣೆ ಕೋರಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಅರಮನೆ(ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ, ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ(ತಿದ್ದುಪಡಿ), ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯ ವಿಧೇಯಕ, ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕ, ಕರ್ನಾಟಕ ವೃತ್ತಿ, ಕಸುಬು, ಉದ್ಯೋಗಗಳ ಮೇಲಿನ ತೆರಿಗೆ ತಿದ್ದುಪಡಿ ವಿಧೇಯಕವನ್ನು ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆ ಪಡೆದುಕೊಂಡು, ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು.

ರಾಜ್ಯಪಾಲರು ಕೋರಿರುವ ಸ್ಪಷ್ಟನೆ ಏನು?: ಪ್ರಮುಖವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಅಂಕಿತ ಹಾಕದಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಅಲ್ಲದೇ, ಅನೇಕ ಸಂಘಟನೆಗಳು ಈ ಸಂಬಂಧ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮಗೆ ಬಂದಿರುವ ದೂರುಗಳಲ್ಲಿರುವ ಆಕ್ಷೇಪಣೆಗಳಿಗೆ ಸ್ಪಷ್ಟಣೆ ನೀಡುವಂತೆ ಸರಕಾರಕ್ಕೆ ತಿಳಿಸಿದ್ದಾರೆ.

ಅಲ್ಲದೇ, ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರವು, ಚುನಾಯಿತ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಮರುಪರಿಶೀಲಿಸುವಂತೆ ರಾಜ್ಯಪಾಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News