ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ’ಯಕ್ಷೋತ್ಸವ - 2025’

ಮಂಗಳೂರು,ಮಾ.23: ತ್ರೇತಾ ಯುಗದ ರಾಮನ ನಡೆಯನ್ನು, ದ್ವಾಪರ ಯುಗದ ಕೃಷ್ಣನ ನುಡಿಯನ್ನು ಕಲಿಯುಗದ ಜನಮಾನಸಕ್ಕೆ ಪ್ರಸ್ತುತ ಪಡಿಸುವ ಶಕ್ತಿಯಿರುವುದು ಯಕ್ಷಗಾನಕ್ಕೆ ಮಾತ್ರ. ಈ ಕಾರಣ ದಿಂದ ಅದು ವಿಶ್ವದ ಏಕೈಕ ಸಮೃದ್ದ ಕಲೆ’ ಎಂದು ಹಿರಿಯ ವಕೀಲ ಎಂ.ಸುಧಾಕರ ಪೈ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 33ನೇ ವರ್ಷದ ಅಂತರ್‌ಕಾಲೇಜು ಯಕ್ಷಗಾನ ಸ್ಪರ್ಧೆ ’ಯಕ್ಷೋತ್ಸವ-2025’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
’ಕೇರಳದ ಕಥಕ್ಕಳಿ, ಆಂದ್ರಪ್ರದೇಶದ ಭಾಮಾ ವಿಲಾಸ ಮೊದಲಾದ ಸಮಕಾಲೀನ ಕಲೆಗಳಂತೆ ಕರಾವಳಿ ಯಲ್ಲಿ ಯಕ್ಷಗಾನ ಮೆರೆಯುತ್ತಾ ಬಂದಿದೆ. ಮೇಳಗಳು ದೇವಾಲಯಗಳ ಹೆಸರಿನಲ್ಲಿ ಹೊರಡುವ ಕಾರಣದಿಂದಾಗಿ ಯಕ್ಷಗಾನಕ್ಕೆ ದೈವಿಕ ನೆಲೆ ಇದೆ. ಶುದ್ಧ ಕನ್ನಡ ಭಾಷೆಯನ್ನು ಕಲಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಲು ಅದು ಪೂರಕವಾಗಿದೆ’ ಎಂದು ಸುಧಾಕರ ಪೈ ಹೇಳಿದರು.
ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಳೆದ ಒಂದು ವರ್ಷ ಅವಧಿ ಯಲ್ಲಿ ಅಗಲಿದ ಯಕ್ಷಗಾನ ಕಲಾವಿದರಾದ ಬಡಗು ತಿಟ್ಟಿನ ಸುಬ್ರಹ್ಮಣ್ಯ ಧಾರೇಶ್ವರ, ಬಾಳೆಗದ್ದೆ ಕೃಷ್ಣ ಹೆಗಡೆ, ತೆಂಕಿನ ಲೀಲಾವತಿ ಬೈಪಡಿತ್ತಾಯ, ಗಂಗಾಧರ ಜೋಗಿ ಪುತ್ತೂರು, ಕುಂಬ್ಳೆ ಶ್ರೀಧರ ರಾವ್, ಬಂಟ್ವಾಳ ಜಯರಾಮ ಆಚಾರ್ಯ, ಕೆ.ವಿ. ಗಣಪಯ್ಯ, ಬರೆ ಕೇಶವ ಭಟ್, ರಘುನಾಥ ರೈ ನುಳಿಯಾಲು, ಪಕಳಕುಂಜ ಶ್ಯಾಮ ಭಟ್, ರಾಮಣ್ಣ ಕಲ್ಮಡ್ಕ, ಪ್ರದೀಪ ರೈ ಬೆಟ್ಟಂಪಾಡಿ, ಗೋಪಾಲಕೃಷ್ಣ ಕುರುಪ್, ಕಲಾಪೋಷಕಿ ಕೀಲಾರು ವಿಜಯಲಕ್ಷ್ಮಿ ಅಮ್ಮ ಸಹಿತ 14ಕ್ಕೂ ಅಧಿಕ ಮಂದಿಯನ್ನು ಸ್ಮರಿಸಿದರು.
ಹಿರಿಯ ವಕೀಲರಾದ ಪಿ. ಸಂತೋಷ ಐತಾಳ ಹಾಗೂ ದಯಾನಂದ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾನೂನು ಕಾಲೇಜು ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷೋತ್ಸವ ವಿದ್ಯಾರ್ಥಿ ಸಂಚಾಲಕ ಶಿವತೇಜ ಐತಾಳ್ ಉಪಸ್ಥಿತರಿದ್ದರು. ಯಕ್ಷೋತ್ಸವ ಸಂಚಾಲಕ ಪ್ರೊ.ಪುಷ್ಪರಾಜ್ ಕೆ. ಸ್ವಾಗತಿಸಿದರು. ಸಂಚಾಲಕಿ ಡಾ.ಶುಭಲಕ್ಷ್ಮಿ ಪಿ. ವಂದಿಸಿದರು. ಶ್ರೀಲಕ್ಷ್ಮೀ ಮಠದಮೂಲೆ ಕಾರ್ಯಕ್ರಮ ನಿರೂಪಿಸಿದರು.