ಉಪ್ಪಿನಂಗಡಿ| ಪಕ್ಷ ವಿರೋಧಿ ಚಟುವಟಿಕೆ ಆರೋಪ: ಕೆ ವಿ ಪ್ರಸಾದ್ ಬಿಜೆಪಿಯಿಂದ ವಜಾ

ಕೆ ವಿ ಪ್ರಸಾದ್
ಉಪ್ಪಿನಂಗಡಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ನಿಕಟಪೂರ್ವ ಅಧ್ಯಕ್ಷ, ಸಹಕಾರಿ ಕ್ಷೇತ್ರದ ಧುರೀಣ ಕೆ ವಿ ಪ್ರಸಾದ್ ರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಾರಣಕ್ಕೆ ಮುಂದಿನ ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ವಜಾಗೊಳಿಸಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಎಂ ಪ್ರಶಾಂತ್ ಪಾರೆಂಕಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಇತರ ಎಲ್ಲಾ ಸ್ತರದ ಜವಾಬ್ದಾರಿಗಳಿಂದ ವಜಾಗೊಳಿಸಿದ ತಿಳುವಳಿಕೆ ಪತ್ರವನ್ನು ರವಾನಿಸಿದ್ದು, ಈ ಬಾರಿಯ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿರುವುದನ್ನು ಉಲ್ಲೇಖಿಸಿ ವಜಾಗೊಳಿಸಿರುವುದಾಗಿ ತಿಳಿಸಲಾಗಿದೆ.
ಕಳೆದ ಸಹಕಾರಿ ಸಂಘದ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆ ನೀಡಿದ್ದ ಕೆ ವಿ ಪ್ರಸಾದ್ ರವರು ಗೆಲುವಿನ ಸನಿಹಕ್ಕೆ ಬಂದಿದ್ದರೂ ಕೊನೆಗಳಿಗೆಯ ಪರಿವಾರ ಸಂಘಟನೆಯ ಕಾರ್ಯಕರ್ತರ ಪ್ರಯತ್ನದಿಂದಾಗಿ ಸೋಲು ಕಂಡಿದ್ದರು. ಈ ಸೋಲಿಗೆ ಪ್ರತಿಯಾಗಿ ಪೂರ್ಣ ಬಹುಮತದಲ್ಲಿದ್ದ ಇಳಂತಿಲ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಆಡಳಿತದ ಅಧ್ಯಕ್ಷ ತಿಮ್ಮಪ್ಪ ಗೌಡ ರವರ ವಿರುದ್ಧ ಕಾಂಗ್ರೇಸ್ ಮತ್ತು ಎಸ್‍ಡಿಪಿಐ ಸದಸ್ಯರ ಸಹಯೋಗದಲ್ಲಿ ಬಿಜೆಪಿ ಬೆಂಬಲಿತರು ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಸಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾದ ನಡೆಯ ಹಿಂದೆ ಕೆ ಪಿ ಪ್ರಸಾದ್ ರವರ ಪಾತ್ರವಿದೆ ಎಂಬ ಆರೋಪ ಪರಿವಾರ ಸಂಘಟನೆಯ ಕಾರ್ಯಕರ್ತರನ್ನು ಆಕ್ರೋಶಕ್ಕೆ ಒಳಪಡಿಸಿತ್ತು. ಈ ಆಕ್ರೋಶದ ಕಾನರ ಕೆ ವಿ ಪ್ರಸಾದ್ ರನ್ನು ಪಕ್ಷದಿಂದಲೇ ಉಚ್ಚಾಟಿಸಿರುವುದಾಗಿದೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ವಿಚಾರವಾಗಿದೆ.