ವಿದ್ಯಾರ್ಥಿಗಳು ತುಳು ರಾಯಭಾರಿಯಾಗಬೇಕಾಗಿದೆ: ಯು.ಟಿ. ಖಾದರ್

Update: 2025-03-26 18:12 IST
ವಿದ್ಯಾರ್ಥಿಗಳು ತುಳು ರಾಯಭಾರಿಯಾಗಬೇಕಾಗಿದೆ: ಯು.ಟಿ. ಖಾದರ್
  • whatsapp icon

ಮಂಗಳೂರು: ವಿದ್ಯಾರ್ಥಿ ಗಳು ತುಳು ರಾಯಭಾರಿಗಳಾಬೇಕು. ಪಾಶ್ಚಾತ್ಯ , ಹೊರಗಿನ ಸಂಸ್ಕೃತಿಯ ದಾಳಿಯಿಂದ ತುಳು ಭಾಷೆ, ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿ, ತುಳುಪರಿಷತ್ ಶ್ರಮಿಸುತ್ತಿದೆ. ಈ ಉದ್ದೇಶಕ್ಕಾಗಿ ತುಳು ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಕುಡ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆದ ಎರಡನೇ ವಿದ್ಯಾರ್ಥಿ ಸಮ್ಮೇಳದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ತುಳು ಭಾಷೆ, ಸಂಸ್ಕೃತಿಗೆ ಹಿರಿಯರ ಕೊಡುಗೆ ದೊಡ್ಡದು. ಒಂದೊಮ್ಮೆ ತುಳುವಿಗೆ ಗಂಡಾಂತರ ಎದುರಾದಾಗ ತುಳುವಿಗೆ ಶಕ್ತಿ ನೀಡಿದ್ದು ತುಳು ನಾಟಕ, ಯಕ್ಷಗಾನ, ಸಿನಿಮಾ ಎಂದರು.

ತುಳುನಾಡಿನ ಸಂಸ್ಕೃತಿ ಭದ್ರವಾಗಿದೆ. ಹೊರಗಿನ ಯಾವುದೇ ದಾಳಿಯನ್ನು ಸಮರ್ಥ ಎದುರಿಸಲು ಈಗ ಶಕ್ತವಾಗಿದೆ. ತುಳು ಪ್ರದೇಶದಲ್ಲಿ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ತುಳುವಿಗೆ ಸಂಬಂಧಿಸಿ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯತ್‌ಗಳು ಅನುದಾನ ಒದಗಿಸಬೇಕಾಗಿದೆ ಎಂದು ಹೆಳಿದರು.

ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ತುಳುವನ್ನು ಎರಡನೇ ಭಾಷೆಯಾಗಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

"ಭಾರತ ದೇಶಕ್ಕೆ ತುಳುನಾಡು ದೇವರ ಕೋಣೆಯಂತಿದೆ"

ಮಂಗಳೂರು, ತುಳುನಾಡಿನ ಸಂಸ್ಕೃತಿ ,ಸೌಹಾರ್ದತೆ, ಆಚಾರ ವಿಚಾರ ದೊಡ್ಡದು. ಧಾರ್ಮಿಕ ಕೇಂದ್ರಗಳಿಗೆ ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ತುಂಬಿಕೊಂಡು ಹೋದರೆ ಏನು ಪ್ರಯೋಜನವಾಗದು. ನಾವೆಲ್ಲರೂ ನಾವೆಲ್ಲರೂ ಒಂದೇ ತಾಯಿಯ, ತುಳು ತಾಯಿಯ ಮಕ್ಕಳು ಎಂಬ ಭಾವನೆ ನಮ್ಮ ಮನದೊಳಗೆ ಉದಯಿಸಿದರೆ ಸೌಹಾರ್ದತೆ ಉಳಿಯಲು ಸಾಧ್ಯ ಎಂದು ಐಕಳ ಪೊಂಪೈ ಕಾಲೇಜ್‌ನ ವಿದ್ಯಾರ್ಥಿನಿ ಸನ್ನಿಧಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಕುಡ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನಲ್ಲಿ ಆನೇಕ, ಸಂಸ್ಕೃತಿ ಸಂಸ್ಕಾರ ಇದೆ. ತುಳುನಾಡಿನ, ಸೌಹಾರ್ದತೆಯನ್ನು ಉಳಿಸಬೇಕು, ಬಪ್ಪಬ್ಯಾರಿಗೆ ಒಲಿದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಕಾಣಬಹುದು,ಅತ್ತೂರಿನಲ್ಲಿ ಕ್ರೈಸ್ತ, ಹಿಂದೂ, ಮುಸ್ಲಿಂ ಸಾಮರಸ್ಯ ಇದೆ. ಶ್ರೀ ಕ್ಷೇತ್ರದಲ್ಲಿ ಹಿಂದೂ ಜೈನ ಸಾಮರಸ್ಯವನ್ನು ನೋಡಬಹುದು.

ಕೇವಲ ನಾವು ದೇವಸ್ಥಾನ, ಮಸೀದಿ, ಚರ್ಚ್ ಹೋಗುವುದರಿಂದ ಸೌಹಾರ್ದತೆ ಉಳಿಯದು. ದೈವರಾಧನೆ, ನಾಗ ಆರಾಧನೆ, ,ಆಯನ , ಅಂಕ, ಕಂಬಳ, ಆಚಾರ ,ವಿಚಾರಗಳನ್ನು ತುಳುನಾಡಿನ್ನು ಹೊರತುಪಡಿಸಿದರೆ ಎಲ್ಲೂ ಕಾಣಲು ಸಾಧ್ಯವಿಲ್ಲ .ಈ ಎಲ್ಲ ವಿಚಾರಗಳಿಂದ ಭಾರತ ದೇಶಕ್ಕೆ ತುಳುನಾಡು ದೇವರ ಕೋಣೆಯಂತಿದೆ.

ಎಲ್ಲವೂ ನಂಬಿಕೆಯ ಮೇಲೆ ನಡೆಯುತ್ತಿದೆ:

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿ ವಿಜೇತ್ ಎಂ.ಶೆಟ್ಟಿ ಮಾತನಾಡಿ ತುಳು ನಾಡಿನಲ್ಲಿ ಎಲ್ಲವೂ ನಂಬಿಕೆಯ ಮೇಲೆ ನಡೆಯುತ್ತದೆ. ಇಡೀ ಸಂಸ್ಕೃತಿ ಆಚಾರಕ್ಕೆ ಬೇರು ನಂಬಿಕೆಯಾಗಿದೆ. ನಂಬಿಕೆ ಇದ್ದರೆ ಎಲ್ಲವೂ ಸತ್ಯ, ನಂಬಿಕೆ ಇಲ್ಲದವನಿಗೆ ಎಲ್ಲವೂ ಅಸತ್ಯವಾಗಿ ಕಾಣುತ್ತದೆ ಅಸತ್ಯ ಎನ್ನುವ ಅಗ್ನಿಯ ಹೊಳೆಗೆ ಹಾಕಿರುವ ನಂಬಿಕೆಯ ಮಯಣದ ಸೇತುವೆಯಿಂದಾಗಿ ತುಳುನಾಡಿನ ಸಂಸ್ಕೃತಿ ಉಳಿದಿದೆ. ಇದೀಗ ನಂಬಿಕೆಯ ಸೇತುವೆ ಕರಗುತ್ತಾ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತುಳು ಸಂಸ್ಕೃತಿಯ ರಕ್ಷಣೆ ಕೇವಲ ನಮ್ಮ ಮಾತಿನಿಂದ ಮಾತ್ರ ಸಾಧ್ಯವಿಲ್ಲ. ವಿದ್ಯಾರ್ಥಿ ಗಳು ಬದುಕು, ನೆಲ, ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿದುಕೊಳ್ಳದಿದ್ದರೆ ಮುಂದೆ ಯಾವುದು ಉಳಿಯದು ಎಂದು ಆತಂಕ ವ್ಯಕ್ತಪಡಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, "ತುಳು ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ದೊಡ್ಡ ಶಕ್ತಿ ಯುವಜನರಲ್ಲಿದೆ. ಈ ಉದ್ದೇಶಕ್ಕಾಗಿ ವಿದ್ಯಾರ್ಥಿ ತುಳು ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಗಿದೆ" ಎಂದರು.

ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಸದಸ್ಯರಾದ ಪಾಂಗಾಳ ಬಾಬು ಕೊರಗ, ಮೋಹನದಾಸ್ ಕೊಟ್ಟಾರಿ, ತುಳು ಪರಿಷತ್ ಅಧ್ಯಕ್ಷ ಕೆ.ಶುಭೋದಯ ಆಳ್ವ, ಗೌರವಾಧ್ಯಕ್ಷ ಪ್ರಭಾಕರ ನೀರು ಮಾರ್ಗ, ಚಂದ್ರಕಲಾ ರಾವ್, ಧರಣೇಂದ್ರ ರಾವ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ತುಳು ವಿದ್ವಾಂಸ ಡಾ.ಇಂದಿರಾ ಹೆಗ್ಡೆ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಇದೇ ಸಂದರ್ಭದಲ್ಲಿ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News