ನಿವೃತ್ತ ಸರಕಾರಿ ನೌಕರರ ಆರ್ಥಿಕ ನಷ್ಟ ಪರಿಹಾರಕ್ಕೆ ಪೂರ್ಣ ಸಹಕಾರ: ದ.ಕ.ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಐವನ್ ಡಿಸೋಜ

Update: 2025-03-29 21:18 IST
ನಿವೃತ್ತ ಸರಕಾರಿ ನೌಕರರ ಆರ್ಥಿಕ ನಷ್ಟ ಪರಿಹಾರಕ್ಕೆ ಪೂರ್ಣ ಸಹಕಾರ: ದ.ಕ.ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಐವನ್ ಡಿಸೋಜ
  • whatsapp icon

ಮಂಗಳೂರು: ನಿವೃತ್ತ ಸರಕಾರಿ ನೌಕರರು ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ತಾವು ದುಡಿದ ಹಕ್ಕಿನ ಮೌಲ್ಯವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುವ ಮೂಲಕ ನಿವೃತ್ತ ಸರಕಾರಿ ನೌಕರರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ದ.ಕ.ಜಿಲ್ಲೆ ಮತ್ತು ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಶನಿವಾರ ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 26 ಸಾವಿರ ಮಂದಿ ನಿವೃತ್ತ ಸರಕಾರಿ ನೌಕರರಿಗೆ ಸಮಸ್ಯೆಯಗಿದೆ. ದ.ಕ.ದಲ್ಲಿ 600ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಮಾಜ ಹಾಗೂ ಸರಕಾರಕ್ಕೆ ಈ ನಿವೃತ್ತ ನೌಕರರ ಸೇವೆ ಅಪಾರವಿದೆ. ಅವರಿಗೆ ಎಂದಿಗೂ ಅನ್ಯಾಯವಾಗಬಾರದು. ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ.ಷಣ್ಮುಖಯ್ಯ ಮಾತನಾಡಿ, ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರ ವರ್ಗದ ನಿವೃತ್ತರಿಗೆ 7ನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ರಾಜ್ಯ ಸರಕಾರ ಮಾಡಿದೆ. ಇದರಿಂದ ನಿವೃತ್ತ ಸರಕಾರಿ ನೌಕರರ ಜತೆಗೂಡಿಕೊಂಡು ಮೂರನೇ ಬಾರಿಗೆ ಬೆಂಗಳೂರು ಚಲೋ ಮಾಡುತ್ತಿದ್ದೇವೆ. ಎ.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತು ಎ.4ರಂದು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ಬೇಡಿಕೆಯನ್ನು ಸಿಎಂ ಮುಂದೆ ಮಂಡಿಸಲಿದ್ದೇವೆ. ಅಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮುಂದೆ ಅನಿರ್ದಿಷ್ಟಾವಧಿಯ ಹೋರಾಟ, ನ್ಯಾಯಾಲಯಕ್ಕೆ ಮೊರೆ ಹೋಗಲು ನಿರ್ಧಾರ ಮಾಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆಯ ಉಳ್ಳಾಲ ಸಂಚಾಲಕಿ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸೀತಾರಾಮ್, ಮೋಹನ ಬಂಗೇರಾ, ಡೇಸಿ ಡಿಸೋಜ ಉಪಸ್ಥಿತರಿದ್ದರು.

ಮಂಗಳೂರು ತಾಲೂಕು ಸಂಚಾಲಕ ಸ್ಟ್ಯಾನಿ ತಾವ್ರೋ ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು. ಬಿ. ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News