ಮಂಗಳೂರು ಜೈಲು: ತಂತ್ರಜ್ಞರ ತಂಡದಿಂದ ಪರಿಶೀಲನೆ

ಮಂಗಳೂರು: ನಗರದ ಕೋಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಜಾಮರ್ ಅಳವಡಿಸಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಸಾರ್ವಜನಿಕರ ಆಕ್ರೋಶದ ಬಳಿಕ ಹೊಸದಿಲ್ಲಿಯ ಟೆಲಿ ಕಮ್ಯುನಿಕೇಶನ್ ಕನ್ಸಲ್ಟೆಂಟ್ ಇಂಡಿಯಾ-ಟಿಸಿಐ ಲಿಮಿಟೆಡ್‌ನ ತಂತ್ರಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ತಂಡವು ಎ.೨ರಂದು ವರದಿ ನೀಡಿ ಜೈಲು ಅಧೀಕ್ಷಕರ ಮೂಲಕ ಬಂಧಿಖಾನೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೊಸದಿಲ್ಲಿಯಿಂದ ಅಮಿತ್ ಕುಮಾರ್ ಎಂಬವರು ಆಗಮಿಸಿದ್ದಾರೆ. ಅವರಿಗೆ ಕರ್ನಾಟಕದ ಸುರೇಂದ್ರ ಎಂಬವರು ಸಾಥ್ ನೀಡಿದ್ದಾರೆ. ಇಬ್ಬರು ತಂತ್ರಜ್ಞರ ತಂಡ ಮಂಗಳವಾರ ಪರಿಶೀಲನೆ ನಡೆಸಿದೆ. ಜೈಲು ವ್ಯಾಪ್ತಿಗೆ ಸೀಮಿತವಾಗಿ ಜಾಮರ್ ಕಾರ್ಯನಿರ್ವಹಣೆಗೆ ಈ ತಂಡ ಶ್ರಮಿಸಿದ್ದು, ಶೇ.75ರಷ್ಟು ಸಮಸ್ಯೆ ಬಗೆಹರಿದಿದೆ. ಮಂಗಳವಾರ ಜೈಲಿನ ಹೊರಗಡೆ ಸರ್ವೇ ನಡೆಸಿ ಅಧಿಕೃತ ವರದಿಯನ್ನು ಸಲ್ಲಿಸಲಿದ್ದಾರೆ. ಬಳಿಕ ಅದನ್ನು ರಾಜ್ಯ ಬಂಧಿಖಾನೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ. ಸುರೇಶ್ ಮಾಹಿತಿ ನೀಡಿದ್ದಾರೆ.