ಸಮಸ್ತ ಮದ್ರಸ ಪಠ್ಯಪುಸ್ತಕಗಳ ಸಮಗ್ರ ಪರಿಷ್ಕರಣೆ; ಅಧ್ಯಾಪಕರಿಗೆ ಚೈತನ್ಯ ತರಬೇತಿ

Update: 2025-04-04 19:03 IST
  • whatsapp icon

ಮಂಗಳೂರು, ಎ.4: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಸಕ್ತ ಶೈಕ್ಷಣಿಕ ವರ್ಷ ದಿಂದ ಜನರಲ್ ಮತ್ತು ಸ್ಕೂಲ್ ವರ್ಷದ ಎಲ್ಲಾ ಮದ್ರಸಗಳಿಗೆ ಅನ್ವಯವಾಗುವಂತೆ ಮದ್ರಸ ಪಠ್ಯ ಪುಸ್ತಕಗಳಲ್ಲಿ ಸಮಗ್ರ ಪರಿಷ್ಕರಣೆ ತಂದಿದೆ.

ಒಂದರಿಂದ ನಾಲ್ಕರ ತನಕದ ತರಗತಿಗಳ ಎಲ್ಲಾ ಪಠ್ಯಪುಸ್ತಕಗಳು ಸಂಪೂರ್ಣವಾಗಿ ಬದಲಾವಣೆ ಗೊಂಡಿದೆ. ಒಂದನೇ ತರಗತಿಯ ದುರೂಸ್ ಪುಸ್ತಕದಲ್ಲಿ ಕನ್ನಡ ಅಕ್ಷರಮಾಲೆಯ ಬಳಕೆ, ಆಶಯ ವಿನಿಮಯಕ್ಕೆ ಚಿತ್ರಗಳ ಬಳಕೆ, ವಾಚನ ಕೇಂದ್ರೀಕೃತ ಕಲಿಕೆಗಿಂತ ಪ್ರಾಯೋಗಿಕ ಕಲಿಕೆಗೆ ಪ್ರಾಶಸ್ತ್ಯ, ಅಧ್ಯಾಪಕರಿಗೆ ಕನ್ನಡ ಭಾಷೆಯಲ್ಲಿ ಪ್ರತ್ಯೇಕ ಹ್ಯಾಂಡ್ ಬುಕ್ಕಿನ ಸಹಾಯ  ಮುಖಾಂತರ ಪೋಷಕರಿಗೆ ಪ್ರಜ್ಞೆ ಮೂಡಿಸುವ ಯೋಜನೆ, ಪುಸ್ತಕದ ಗಾತ್ರದ ಹೆಚ್ಚಳ, ಐಟಿ ಸಾಧ್ಯತೆಗಳ ಬಳಕೆ, ಎಲ್ಲಾ ಪುಟಗಳ ಬಹುವರ್ಣ ವಿನ್ಯಾಸ, ಪಾಠಗಳ ಜೊತೆಗೆ ಪದ್ಯಗಳ ಸೇರ್ಪಡೆ, ಆರಾಧನೆಗಳ ಅನುಷ್ಠಾನಕ್ಕೆ ವೀಡಿಯೋ ಕ್ಯೂಆರ್ ಸ್ಕ್ಯಾನರ್, ಪವಿತ್ರ ಕುರ್‌ಆನ್ ಪಾರಾಯಣ ಮತ್ತು ಕಂಠಪಾಠಕ್ಕೆ ಆಡಿಯೋ ಕ್ಯೂಆರ್ ಸ್ಕ್ಯಾನರ್‌ಗಳ ಲಭ್ಯತೆ ಮೊದಲಾದವು ನೂತನ ಪರಿಷ್ಕರಣೆಯ ವಿಶೇಷತೆಯಾಗಿದೆ.

ಪವಿತ್ರ ಕುರ್‌ಆನ್ ಪಾರಾಯಣವನ್ನು ಪಾರದರ್ಶಕಗೊಳಿಸುವ ಸಲುವಾಗಿ ತದ್ರೀಬುತ್ತಿಲಾವ ಹೊಸ ಪಠ್ಯಪುಸ್ತಕವನ್ನು ಹೊರತರಲಾಗಿದೆ. ಸಮಸ್ತದ ಕುರ್‌ಆನ್ ಪಂಡಿತರಾದ ಖಾರಿಉಗಳ ಪಾರಾಯಣದ ಆಡಿಯೋಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಪ್ರತಿ ತರಗತಿಗಳ ಕುರ್‌ಆನ್ ಪಾಠ ಭಾಗಗಳನ್ನು ಕಡಿತಗೊಳಿಸಿ ಐದನೇ ತರಗತಿಯಲ್ಲಿ ಸಂಪೂರ್ಣಗೊಳಿಸಬೇಕಾಗಿದ್ದ ಕುರ್‌ಆನ್ ಏಳನೇ ತರಗತಿ ತನಕ ವಿಸ್ತರಿಸಲಾಗಿದೆ.

ಇನ್ನು ಮುಂದೆ ಎಂಟು, ಒಂಬತ್ತು, ಹತ್ತನೇ ತರಗತಿಗಳಿಗೂ ಪುನರಾವರ್ತನೆಯಾಗಿ ಕುರ್‌ಆನಿನ ತಲಾ ಹತ್ತು ಭಾಗಗಳು ಸಿಲಬಸ್‌ನಲ್ಲಿ ಇರಲಿದೆ. ಹಾಗಾಗಿ ಎರಡರಿಂದ ಹತ್ತನೇ ತರಗತಿ ತನಕದ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಕುರ್‌ಆನ್ ಹಾಗೂ ನೋಟ್‌ಪುಸ್ತಕಗಳು ಕಡ್ಡಾಯವಾಗಿ ಇರಬೇಕಾಗಿದೆ.

ಈತನಕ ಮದ್ರಸ ಮತ್ತು ಅಧ್ಯಾಪಕರುಗಳಿಗೆ ನೀಡಲಾಗುತ್ತಿದ್ದ ಪ್ರತಿ ತಿಂಗಳು ನಡೆಯಬೇಕಾದ ಪಾಠ ಭಾಗಗಳ ಸಿಲಬಸ್ ಪ್ರತಿ ಪಠ್ಯಪುಸ್ತಕದಲ್ಲೂ ಸೇರಿಸಲಾಗಿದೆ. ವಿದ್ಯಾರ್ಥಿಗಳಿಗೂ ಪೋಷಕರಿಗೂ ಪಾಠ ಭಾಗಗಳನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಜೊತೆಗೆ ಎಲ್ಲಾ ಪಠ್ಯಪುಸ್ತಕದ ಕೊನೆಯ ಲ್ಲಿಯೂ ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸುಗಮವಾಗಿ ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ. ಸಮಸ್ತ ನೂರನೇ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ಎರಡು ವರ್ಷಗಳಿಂದ ನಡೆಸಲಾದ ಮದ್ರಸಗಳಲ್ಲಿ ಸ್ಮಾರ್ಟ್‌ಕ್ಲಾಸ್ ರೂಮ್ ಸಜ್ಜುಗೊಳಿ ಸುವ ಅಭಿಯಾನದ ಮುಂದುವರಿದ ಭಾಗವಾಗಿ ಪಠ್ಯಪುಸ್ತಕಗಳನ್ನು ಸಂಪೂರ್ಣ ಡಿಜಿಟಲ್‌ಗೊಳಿಸಲಾ ಗಿದೆ. ಅದಕ್ಕೆ ಬೇಕಾದ ಡಿಜಿಟಲ್ ಕಿಟ್‌ಗಳನ್ನು ಕೂಡ ಸಮಸ್ತ ನೇರವಾಗಿ ವಿತರಣೆ ಮಾಡಲಿದೆ.

*ಅಧ್ಯಾಪಕರಿಗೆ ಚೈತನ್ಯ ತರಬೇತಿ : ನೂತನ ಪಠ್ಯ ಪುಸ್ತಕಗಳ ಪರಿಚಯ, ಉದ್ದೇಶ ಮತ್ತು ಬೋಧನಾ ಶೈಲಿಯ ಕುರಿತು ಅಧ್ಯಾಪಕರಲ್ಲಿ ಚೈತನ್ಯ ಮೂಡಿಸುವುದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ರೇಂಜ್ ಮಟ್ಟದಲ್ಲಿ ವಿಶೇಷ ಕಾರ್ಯಗಾರವನ್ನು ಆಯಾ ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಸಮಿತಿಯ ಸಹಭಾಗಿತ್ವದಲ್ಲಿ ಸಮಸ್ತ ನಡೆಸುತ್ತಿದೆ. ಕರ್ನಾಟಕದಲ್ಲಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಮುಹಮ್ಮದ್ ನವವಿ ಮುಂಡೋಳೆ, ರಿಯಾಝ್ ರಹ್ಮಾನಿ ಕಿನ್ಯ, ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ ತರಗತಿಗೆ ನೇತೃತ್ವ ನೀಡಲಿದ್ದಾರೆ.

ದ.ಕ. ಜಿಲ್ಲಾ ಮಟ್ಟದ ಕಾರ್ಯಗಾರ ಎ.14ರಂದು ಹಾಗೂ ರೇಂಜ್ ಮಟ್ಟದ ಕಾರ್ಯಗಾರ 16 ಮತ್ತು 17 ದಿನಾಂಕಗಳಲ್ಲಿ ನಡೆಯಲಿದೆ ಎಂದು ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News