ಎ.18ರಂದು ಅಡ್ಯಾರ್‌ನಲ್ಲಿ ವಕ್ಫ್ ತಿದ್ದುಪಡಿ ವಿರುದ್ಧ ಪ್ರತಿಭಟನಾ ಸಮಾವೇಶ: ವಾಹನಗಳ ಸಂಚಾರದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ
ಮಂಗಳೂರು, ಎ.15: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಡೀಲ್-ಬಿ.ಸಿ.ರೋಡ್ ರಸ್ತೆಯ ಅಡ್ಯಾರ್‌ನ ಷಾ ಗಾರ್ಡನ್‌ನಲ್ಲಿ ಎ.18ರಂದು ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶ ದಲ್ಲಿ ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ. ಈ ಪ್ರತಿಭಟನಾ ವೇಳೆ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಹಾದು ಹೋಗುವ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಎ.18 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಬಾರದಂತೆ ನಿರ್ಬಂಧಿಸಲಾಗಿದ್ದು, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀನದಲ್ಲಿ ರುವ ನಗರದ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ಬರುವ ಹಾಗೂ ಹೊರಡುವ ಟ್ಯಾಂಕರ್ ಮತ್ತು ಇತರ ಘನ ಸರಕು ವಾಹನಗಳನ್ನು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸಲು ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಲ್ಲಿ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರು(ಸಂಚಾರ ಮತ್ತು ಅಪರಾಧ ) ಸೂಚಿಸಿದ್ದಾರೆ.
ವಾಹನಗಳ ಸಂಚಾರಕ್ಕೆ ನಿಗದಿಪಡಿಸಲಾದ ಮಾರ್ಗಗಳ ವಿವರ ಇಂತಿವೆ.
ಮೆಲ್ಕಾರು ಜಂಕ್ಷನ್- ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ, ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್ - ಬೋಳಿಯಾರ್ ಮುಡಿಪು ದೇರಳಕಟ್ಟೆ - ತೊಕ್ಕೊಟು ಮೂಲಕ ಸಂಚರಿಸಬೇಕು.
*ಬಿ.ಸಿ. ರೋಡ್ ಪೊಳಲಿ ದ್ವಾರ -ಬಿ.ಸಿ.ರೋಡ್ ಕಡೆಯಿಂದ ಮಂಗಳೂರು, ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮುಖಾಂತರ ಕಲ್ಪನೆ ಜಂಕ್ಷನ್ ನೀರುಮಾರ್ಗ ಬೈತುರ್ಲಿ ಕುಲಶೇಖರ - ನಂತೂರು ಮೂಲಕ ಸಂಚರಿಸುವುದು.
*ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನ ಗಳು ತೊಕ್ಕೊಟ್ಟು - ದೇರಳಕಟ್ಟೆ - ಮುಡಿಪು - ಬೊಳಿಯಾರ್ ಮೆಲ್ಕಾರ್ ಮೂಲಕ ಸಂಚರಿಸುವುದು.
*ನಂತೂರು ವೃತ್ತ-ಬಿಕರ್ನಕಟ್ಟೆ-ಬೈತುರ್ಲಿ ಜಂಕ್ಷನ್- ಮಂಗಳೂರು ನಗರ , ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕುಲಶೇಖರ ಬೈತುರ್ಲಿ ನೀರುಮಾರ್ಗ ಕಲ್ಪನೆ ಜಂಕ್ಷನ್ - ಬಿ.ಸಿ. ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.
*ಕೆ.ಪಿ.ಟಿ. ವೃತ್ತ- ಮಂಗಳೂರು ನಗರ , ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ ಪಚ್ಚನಾಡಿ - ಬೈತುರ್ಲಿ ಮೂಲಕ ಅಥವಾ ಬೋಂದೆಲ್ - ಕಾವೂರು ಬಜಪೆ ಕೈಕಂಬ ಮೂಡಬಿದ್ರೆ ಮೂಲಕ ಸಂಚರಿಸುವುದು.
*ಮುಲ್ಕಿ ವಿಜಯಸನ್ನಿದಿ: ಉಡುಪಿ ,ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ - ಮೂಡಬಿದ್ರೆ - ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.
*ಪಡುಬಿದ್ರೆ: ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ ಮೂಡಬಿದ್ರೆ ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.