ಪ್ರಕಾಶ್ ಶೆಟ್ಟಿಗೆ ವಂದನಾ ಪ್ರಶಸ್ತಿ

ಮಂಗಳೂರು: ಖ್ಯಾತ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸುಧೀರ್ಘ ಸೇವೆ, ಕೊಡುಗೆಯನ್ನು ಪರಿಗಣಿಸಿ ನಗರದ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ವಂದನಾ ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ 22 ನೇ ವಾರ್ಷಿಕ ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಂದನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಪ್ರಕಾಶ್ ಶೆಟ್ಟಿ ಯವರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಪ್ರಶಸ್ತಿ ಪ್ರದಾನದ ವಿಧಿ ವಿಧಾನವನ್ನು ನೆರವೇರಿಸಿದರು. ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಬಿದ್ದಪ್ಪ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ಮಾಹಿತಿ ನೀಡಿದರು.
ಸಹಾಯಕ ಗವರ್ನರ್ ಕೆ.ಎಮ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ರೋಟರ್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಸಂಜಯ್ ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ ‘ಸೆಂಟೊರ್’ ಬಿಡುಗಡೆಗೊಳಿಸಿದರು.
ರೋಟರಿ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಬ್ರಿಯಾನ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸುಧೀರ್ ಶೆಟ್ಟಿಯವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಲಾಯಿತು.
ಕಾರ್ಯದರ್ಶಿ ರಾಜೇಶ್ ಸೀತಾರಾಮ್ ವರದಿ ಮಂಡಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟಾರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು. ಲೆಕ್ಕ ಪರಿಶೋಧಕ ನಿತಿನ್ ಶೆಟ್ಟಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.