ಒಳಮೀಸಲಾತಿಗಾಗಿ ವಿಸ್ತ್ರತ ಸಮೀಕ್ಷೆಗೆ ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ

Update: 2025-04-01 21:37 IST
ಒಳಮೀಸಲಾತಿಗಾಗಿ ವಿಸ್ತ್ರತ ಸಮೀಕ್ಷೆಗೆ ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ
  • whatsapp icon

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳ ಜನರ ಸಾಮಾಜಿಕ - ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಗತಿ ಬಗ್ಗೆ ನಿಖರವಾದ ಯಾವುದೇ ಡೇಟಾ ಇಲ್ಲದಿರುವುದ ರಿಂದ, ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಶಿಫಾರಸ್ಸು ಮಾಡಲು ರಚಿಸಲಾದ ನ್ಯಾ. ನಾಗಮೋಹನ್

ದಾಸ್ ಏಕ ಸದಸ್ಯ ವಿಚಾರಣಾ ಆಯೋಗವೇ ಸ್ವತ ವಿಸ್ತ್ರತ ಸಮೀಕ್ಷೆ ನಡೆಸಬೇಕು ಎಂಬ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ - ಸಂಸ್ಥೆಗಳ ಮಹಾಒಕ್ಕೂಟವು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಬೇಡಿಕೆಗೆ ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಸರಕಾರವು ಅದನ್ನು ಅಂಗೀಕರಿಸಿ, ಹೊಸ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ. ಇದು ಮಹಾಒಕ್ಕೂಟದ ನ್ಯಾಯಯುತ ಹೋರಾಟಕ್ಕೆ ಸಂದ ಮೊದಲ ವಿಜಯ. ಇದನ್ನು ಮಹಾ ಒಕ್ಕೂಟ ಸ್ವಾಗತಿಸಿದೆ ಎಂದು ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ತಿಳಿಸಿದ್ದಾರೆ.

ಒಳಮೀಸಲಾತಿಗೆ ಅಗತ್ಯವಾದ ನ್ಯಾಯ ಸಮ್ಮತ ವರ್ಗೀಕರಣ ಮಾಡಲು ಆಯೋಗವೇ ಹೊಸತಾಗಿ 101 ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸ್ವತಃ ಕೈಗೆತ್ತಿಗೊಳ್ಳಬೇಕು ಎಂದು ಮಹಾಒಕ್ಕೂಟವು ಮಾ.31 ರಂದು ಮಹಾಒಕ್ಕೂಟದ ನಿಯೋಗ ನ್ಯಾ. ನಾಗಮೋಹನ್ ದಾಸ್ಅವರನ್ನು ಆಯೋಗದ ಬೆಂಗಳೂರು ಕಚೇರಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದೆ.

ಸರಕಾರಿ ಆಡಳಿತಯಂತ್ರದ ನೆರವಿನೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸುವುದಕ್ಕೆ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚನೆಗೆ ಕೂಡಾ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರಿಂದ, ಈ ಹೊಸ ಸಮೀಕ್ಷೆಗಾಗಿ ಸಿದ್ಧಪಡಿಸುವ ಪ್ರಶ್ನಾವಳಿಯಲ್ಲಿ 101 ಜಾತಿಗಳಿಗೆ ಸೇರಿದ ಜನರಲ್ಲಿ ಯಾವ್ಯಾವ ವೃತ್ತಿಗಳಲ್ಲಿ ಎಷ್ಟೆಷ್ಟು ಶೇಕಡಾ ಜನರು ಕೆಲಸ ಮಾಡುತ್ತಿದ್ದಾರೆ? ಅವರ ಕೌಟುಂಬಿಕ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆ ಏನು? ಯಾವ್ಯಾವ ಆರ್ಥಿಕ ಹಿನ್ನೆಲೆಯ ಮಕ್ಕಳು ಯಾವ್ಯಾವ ಶಿಕ್ಷಣ ಸಂಸ್ಥೆಗಳಲ್ಲಿ, ಎಂತಹ ಶಿಕ್ಷಣ ಪಡೆಯುತ್ತಿದ್ದಾರೆ? ಯಾರ ಉದ್ಯೋಗ ಏನು? ಕುಟುಂಬಗಳ ವಾರ್ಷಿಕ ಆದಾಯ ಎಷ್ಟು? ಎಂಬಿತ್ಯಾದಿಯಾಗಿ 101 ಜಾತಿಗಳಿಗೆ ಸೇರಿದ ಎಲ್ಲ ವರ್ಗಗಳ ಬದುಕಿಗೆ ಸೇರಿದ ಎಲ್ಲ ಅಂಶಗಳ ಬಗ್ಗೆ ಡೇಟಾ ಸಂಗ್ರಹಿಸಬೇಕು ಮತ್ತು ಹೀಗೆ ಸಂಗ್ರಹವಾದ ಡೇಟಾ ವನ್ನು ಸರಕಾರ / ಆಯೋಗ ಬಹಿರಂಗ ಪಡಿಸ ಬೇಕು ಎಂದು ಮಹಾ ಒಕ್ಕೂಟ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ನ್ಯಾ. ನಾಗಮೋಹನ್ ದಾಸ್ ಅವರನ್ನು ಆಗ್ರಹಿಸಿದೆ .

*ಕಾಂತರಾಜ್ ವರದಿ ಬಹಿರಂಗ ಮಾಡಿ:2015 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವೇ ನೇಮಿಸಿರುವ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು, ಸುಮಾರು 167 ಕೋಟಿ ರೂ ಖರ್ಚು ಮಾಡಿ ನಡೆಸಿರುವ, ರಾಜ್ಯದ ಎಲ್ಲ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಹಿರಂಗ ಗೊಳಿಸಬೇಕು ಎಂದು ಮಹಾಒಕ್ಕೂಟ ಸರಕಾರವನ್ನು ಆಗ್ರಹಿಸಿದೆ ಎಂದು ಲೋಲಾಕ್ಷ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News