ನುರಿತ ಪ್ರಾಧ್ಯಾಪಕರ ಕೊರತೆ ಹಿನ್ನೆಲೆ ಕೆಲವು ಪಿಜಿ ತರಗತಿ ಸ್ಥಗಿತಕ್ಕೆ ನಿರ್ಧಾರ; ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ

Update: 2025-03-29 23:37 IST
ನುರಿತ ಪ್ರಾಧ್ಯಾಪಕರ ಕೊರತೆ ಹಿನ್ನೆಲೆ ಕೆಲವು ಪಿಜಿ ತರಗತಿ ಸ್ಥಗಿತಕ್ಕೆ ನಿರ್ಧಾರ; ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ

ಮಂಗಳೂರು ವಿವಿ 

  • whatsapp icon

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಒಳಗಿರುವ ಇನ್ನೂ ಬಳಕೆಯಾಗದ ಅಂತರ್‌ರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉಪಯೋಗಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.

ಮಂಗಳೂರು ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಗರದಲ್ಲಿ ಸಾಕಷ್ಟು ಖಾಸಗಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿವೆ. ಅವರಿಗೆ ಈ ಕಟ್ಟಡ ಬಳಕೆಗೆ ಸಾಧ್ಯವಾಗುವ ನಿಟ್ಟಿನಲ್ಲಿ ಬೇರೆ ಯಾವುದಾದರೂ ವಿವಿಯಿಂದ ಇಂತಹ ಕ್ರಮ ಆಗಿದ್ದರೆ ಅದನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಸರಕಾರದ ಅನುಮತಿ ಪಡೆದು ಕ್ರಮ ವಹಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಸದ್ಯ ನಮ್ಮ ವಿವಿ ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಈ ಬಾರಿ 13 ಪೇಟೆಂಟ್‌ಗಳು ಮಂಗಳೂರು ವಿವಿಗೆ ದೊರಕಿವೆ. ನಮ್ಮ ವಿಜ್ಞಾನ ಪ್ರಯೋಗಾಲಯವನ್ನು ನಾವು ನಿರ್ವಹಣೆ ಮಾಡಬೇಕಾಗಿದೆ. ಸಂಶೋಧನಾ ವ್ಯವಸ್ಥೆ ಮಾಡಬೇಕಾಗಿದೆ. ಸಣ್ಣ ಮೊತ್ತವನ್ನಾದರೂ ಸಂಶೋಧನೆಗೆ ಬಳಕೆ ಮಾಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ನಾವು ಸಮಸ್ಯೆ ಎದುರಿಸಬೇಕಾಗಿದೆ. ಅದಕ್ಕಾಗಿ ನಿರಂತರ ತರಗತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.

ಘಟಕ ಕಾಲೇಜುಗಳ ನಿರ್ವಹಣೆ ಕಷ್ಟಸಾಧ್ಯ:

ಈಗಿರುವ ಪರಿಸ್ಥಿತಿಯಲ್ಲಿ ಮಂಗಳೂರು ವಿವಿಯ ಘಟಕ ಕಾಲೇಜುಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಪದವಿ ಕಾಲೇಜುಗಳಿಗೆ ಖಾಯಂ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರು ಉತ್ತಮವಾಗಿ ನಿರ್ವಹಣೆ ತೋರುತ್ತಿದ್ದರೂ, ಹಿರಿಯ ಅನುಭವಿ ಅಧ್ಯಾಪಕರ ಅಗತ್ಯ ಇದೆ. ಅದಕ್ಕಾಗಿ ಈ ಘಟಕ ಕಾಲೇಜುಗಳನ್ನು ಸರಕಾರಿ ಕಾಲೇಜು ಆಗಿ ಪರಿವರ್ತಿಸಲು ಮನವಿ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೂ ನ್ಯಾಯ ದೊರಕಿಸಲು ಸಾಧ್ಯವಾಗಲಿದೆ.

ಮಂಗಳೂರು ವಿವಿ ಕಾಲೇಜಿನ ಸಂಧ್ಯಾ ಕಾಲೇಜು, ಮಂಗಳಗಂಗೋತ್ರಿ, ಬನ್ನಡ್ಕ, ನೆಲ್ಯಾಡಿ ಸೇರಿ ನಾಲ್ಕು ಘಟಕ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರು ವಿವಿಯ ಸಂಧ್ಯಾ ಕಾಲೇಜಿಗೆ ಅಧಿಕೃತ ಸ್ಥಾನಮಾನವೇ ದೊರಕಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವವರು ಅತಿಥಿ ಉಪನ್ಯಾಸಕರು, ಪ್ರಾಂಶುಪಾಲರಾಗಿ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಿದ್ದಾರೆ. ಆದರೆ ಖಾಯಂ ಉಪನ್ಯಾಸಕರನ್ನು ನೇಮಕ ಮಾಡದೆ, ಕಾಲೇಜಿಗೆ ಅಧಿಕೃತ ಸ್ಥಾನಮಾನ ಇಲ್ಲದೆ ಕಾಲೇಜು ನಡೆಸುವುದು ವಿದ್ಯಾರ್ಥಿಗಳಿಗೂ ಮಾಡುವ ಅನ್ಯಾಯವಾಗುತ್ತದೆ. ಈ ಕಾರಣದಿಂದ ಸರಕಾರವು ಇವುಗಳನ್ನು ಸರಕಾರಿ ಕಾಲೇಜುಗಳಾಗಿ ಪರಿಗಣಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ಕೆಲವೊಂದು ಪಿಜಿ ತರಗತಿಗಳನ್ನು ನುರಿತ ಪ್ರಾಧ್ಯಾಪಕರ ಕೊರತೆಯಿಂದ ನಡೆಸಲು ಕಷ್ಟಸಾಧ್ಯವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ತರಗತಿ ನಿಲ್ಲಿಸಲು ನಿರ್ಧರಿಸಲಾಗಿದೆ. ಪದವಿ ತರತಿಗಳಿಗೆ ಕಲಿಸಲು ನೇಮಕ ಮಾಡಲಾದ ಉಪನ್ಯಾಸಕರು ಸ್ನಾತಕೋತ್ತರ ಪದವಿ ಮಕ್ಕಳಿಗೂ ಕಲಿಸುತ್ತಿದ್ದಾರೆ. ಅವರಿಗೆ ಅರ್ಹತೆ ಇಲ್ಲ ಎಂದಲ್ಲ. ಆದರೆ ಇದು ಕಲಿಕಾ ಮಾನದಂಡಗಳಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಇಂತಹ ಘಟಕ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಬದಲು ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಪ್ರೊ.ಧರ್ಮ ಮನವಿ ಮಾಡಿದರು.

ಗುತ್ತಿಗೆದಾರರಿಗೆ ಪಾವತಿ ಬಾಕಿ: ಹಣದ ಕೊರತೆ

ಅಂತರ್‌ರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಕಾಮಗಾರಿಯ ಗುತ್ತಿಗೆ ಪಾವತಿ ಸೇರಿದಂತೆ ಮಂಗಳೂರು ವಿವಿ ಕ್ಯಾಂಪಸ್‌ನ ವಿವಿಧ ಕಾಮಗಾರಿಗಳ ಸುಮಾರು 35ರಿಂದ 40ರಷ್ಟು ಗುತ್ತಿಗೆದಾರರಿಗೆ ಅಂದಾಜು 40 ಕೋಟಿ ರೂ. ಪಾವತಿಗೆ ಬಾಕಿ ಇದೆ. ಇದರಲ್ಲಿ ಅಂತರ್‌ರಾಷ್ಟ್ರೀಯ ಹಾಸ್ಟೆಲ್ ಕಟ್ಟಡದ ಬಾಕಿ ಸುಮಾರು 20 ಕೋಟಿ ರೂ. ಕೂಡಾ ಸೇರಿದೆ ಎಂದು ತಿಳಿಸಿದರು.

ಮಂಗಳೂರು ವಿವಿ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದೆ. ವಿವಿಯ ಶೇ.72ರಷ್ಟು ತಾತ್ಕಾಲಿಕ ಉದ್ಯೋಗಿಗಳಿಗೆ ವೇತನ ನೀಡಬೇಕು. ಕೆಲ ಸಮಯದ ಹಿಂದೆ ಐದಾರು ತಿಂಗಳು ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ ಇದೀಗ ಪ್ರತೀ ತಿಂಗಳು ವೇತನ ಪಾವತಿ ಹಂತಕ್ಕೆ ಬಂದಿದ್ದೇವೆ ಎಂದರು.

ಗ್ರಾಪಂ ತೆರಿಗೆ ಹಂತ ಹಂತವಾಗಿ ಪಾವತಿ: ಸ್ಥಳೀಯ ಗ್ರಾಪಂ ಮಂಗಳೂರು ವಿವಿ ಕ್ಯಾಂಪಸ್‌ನ ವಿಶ್ವ ಮಂಗಳ ಟ್ರಸ್ಟ್‌ಗೂ ತೆರಿಗೆ ವಿಧಿಸಿದೆ. ಅದು ವಿವಿ ಕ್ಯಾಂಪಸ್‌ನಲ್ಲಿ ಇದೆಯಾದರೂ ಅದರ ವ್ಯವಹಾರ ವಿವಿ ವ್ಯಾಪ್ತಿಗೊಳಪಟ್ಟಿಲ್ಲ. ಅದು ಟ್ರಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಅಂ.ರಾಷ್ಟ್ರೀಯ ಹಾಸ್ಟೆಲ್ ಕಟ್ಟಡವನ್ನು ವಾಣಿಜ್ಯ ಕಟ್ಟಡವಾಗಿ ಪರಿಗಣಿಸಲಾಗಿದೆ. ಆದರೆ ಆ ಕಟ್ಟಡ ಬಳಕೆಯಾಗದ ಸೊತ್ತಾಗಿದ್ದು, ಅದನ್ನು ಕಮರ್ಶಿಯಲ್ ಆಗಿ ಪರಿಗಣಿಸಿರಿರುವುದರಿಂದ ಅಧಿಕ ತೆರಿಗೆ ವಿಧಿಸಲಾಗಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಬಳಕೆ ಆಗದ ಇವೆರಡೂ ಕಟ್ಟಡಗಳನ್ನು ಹೊರತುಪಡಿಸಿ ತೆರಿಗೆ ವಿಧಿಸುವಂತೆ ಕೋರಲಾಗಿದೆ. ಆ ಬಗ್ಗೆ ಕ್ರಮ ಕೈಗೊಂಡ ತಕ್ಷಣವೇ ಹಂತ ಹಂತವಾಗಿ ತೆರಿಗೆ ಪಾವತಿಸುವ ಒಡಂಬಡಿಕೆ ಮಾಡಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News