ಸಂಪುಟ ಉಪ ಸಮಿತಿ ವರದಿ ಆಧಾರದಲ್ಲಿ ವಿವಿಗಳ ಸುಧಾರಣೆ: ಸಚಿವ ಡಾ. ಎಂ.ಸಿ. ಸುಧಾಕರ್

ಮಂಗಳೂರು: ರಾಜ್ಯದ ವಿವಿಗಳ ಸ್ಥಿತಿಗತಿಯನ್ನು ಸಮಗ್ರ ಅಧ್ಯಯನ ನಿಟ್ಟಿನಲ್ಲಿ ಸಂಪುಟ ಉಪಸಮಿತಿಯು ವರದಿ ತಯಾರಿಸಿದ್ದು, ಅದರ ಅಧಾರದಲ್ಲಿ ಆರ್ಥಿಕವಾಗಿ, ಆಡಳಿತಾತ್ಮಕವಾಗಿ ದುಸ್ಥಿತಿಯಲ್ಲಿರುವ ವಿವಿಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ಮಂಗಳೂರು ವಿವಿ ಸಹ ಕುಲಾಧಿಪತಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಭಿಪ್ರಾಯಿಸಿದ್ದಾರೆ.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಆವರಣದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ 43rd Annual Convocation - Mangalore Universityದಲ್ಲಿ ಗೌರವ ಡಾಕ್ಟರೇಟ್, ಸ್ನಾತಕೋತ್ತರ ಹಾಗೂ ಪದವಿ ತರಗತಿಗಳ ರ್ಯಾಂಕ್ ವಿಜೇತರು ಹಾಗೂ ಪಿಎಚ್‌ಡಿ ಪದವೀಧರರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ವಿದೇಶೀ ವಿವಿಗಳ ಅನುಕರಣೆಯಿಂದಾಗಿ ರಾಜ್ಯದ ಹಲವು ಪ್ರತಿಷ್ಟಿತ ವಿವಿಗಳು ಇಂದು ತೀರಾ ದುಸ್ಥಿತಿಗೆ ತಲುಪಿವೆ. ಹಿಂದೆಲ್ಲಾ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜುಗಳು ಕೂಡಾ ವಿವಿಗಳ ವ್ಯಾಪ್ತಿಗೊಳಪಡುತ್ತಿದ್ದವು. ಇದರಿಂದಾಗಿ ವಿವಿಗೆ ಸಾಕಷ್ಟು ಆದಾಯವೂ ಕ್ರೋಢೀಕರಣವಾಗುತ್ತಿತ್ತು. ಆದರೆ 25 ವರ್ಷಗಳಿಂದೀಚೆಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯಗಳು, ಮುಕ್ತ ವಿವಿಗಳು ಆರಂಭಗೊಂಡಂತೆಯೇ ವಿವಿಗಳ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ವಿದೇಶೀ ವಿವಿಗಳ ಸೌಲಭ್ಯಗಳನ್ನು ನಮ್ಮಲ್ಲಿಯೂ ಅಳವಡಿಸುವಲ್ಲಿ ವಿಫಲತೆಯನ್ನು ಎದುರಿಸುತ್ತಿದ್ದೇವೆ. ಹೊಸ ಹಾಗೂ ಕ್ರಾಂತಿಕಾರ ಬದಲಾವಣೆಯ ನಿಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನ ನಡೆಸದೆ ಭಾವನಾತ್ಮಕ ಆಲೋಚನೆಗಳ ಒತ್ತಡಕ್ಕೆ ಸಿಲುಕಿ ಹೊಸ ವಿವಿಗಳನ್ನು ಸ್ಥಾಪಿಸುವ ಭರದಲ್ಲಿ ಸಾಕಷ್ಟು ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದ್ದು, ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸಲಾಗುತ್ತಿದೆ. ವರದಿಯನ್ನು ಇನ್ನಷ್ಟೇ ಮಂಡನೆ ಮಾಡಬೇಕಾಗಿದೆ. ವರದಿಯನ್ನು ಸಂಪುಟ ಸಭೆಯ ಮುಂದಿರಿಸಿ ಆಳವಾಗಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದವರು ಹೇಳಿದರು.
ಮಂಗಳೂರು ವಿವಿಗೆ ಈಗಾಗಲೇ ನಿವೃತ್ತ ನೌಕರರ ಪಿಂಚಣಿಗಾಗಿ 11.30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಲವು ಯೋಜನೆಗಳಿಗಾಗಿ ವಿವಿಯಲ್ಲಿ ಕೋಟ್ಯಂತರ ರೂ ಬಂಡವಾಳ ಹಾಕಲಾಗಿದೆ. ಇವುಗಳಿಗೆಲ್ಲಾ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎಂದವರು ಹೇಳಿದರು.
ರಾಜ್ಯದಲ್ಲಿ ಒಟ್ಟು 2800 ಬೋಧಕ ಹುದ್ದೆಗಳು ಖಾಲಿ ಇದ್ದು, ಪರಿಹಾರಕ್ಕಾಗಿ ಮುಖ್ಯಮಂತ್ರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಹಲವು ವಿವಿಗಳಲ್ಲಿ ಅನಗತ್ಯವಾಗಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಹಣಕಾಸು ಇಲಾಖೆಯ ಅನುಮತಿ ಹೊರತಾಗಿ ನೇಮಕ ಮಾಡಿರುವ ಬಗ್ಗೆ ಅನಿಸಿಕೆ ವ್ಯಕ್ತವಾಗಿದೆ. ಹಾಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿನಿಯಮಗಳ ಬದಲಾವಣೆ ತರುವ ಪ್ರಕ್ರಿಯೆಯ ನಡೆಯಬೇಕಿದೆ. ಬೇಡಿಕೆ ಇರುವ ಕೋರ್ಸ್‌ಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಬೋಧಕರ ನೇಮಕಾತಿಗೆ ಕ್ರಮ ಆಗಬೇಕಾಗಿದೆ. ಹಾಗಾಗಿ ವಿವಿಗಳ ಆರ್ಥಿಕ ಹಾಗೂ ಆಡಳಿತ ಶಿಸ್ತು ಕಾಪಾಡುವ ಸವಾಲು ನಮ್ಮ ಮುಂದಿದೆ ಎಂದು ಸಚಿವರು ಹೇಳಿದರು.
ಪಿಎಚ್‌ಡಿ ಪದವೀಧರರು, ರ್ಯಾಂಕ್ ವಿಜೇತರು, ಚಿನ್ನದ ಪದಕ ಪಡೆದವರು ಸೇರಿದಂತೆ ಸ್ನಾತಕೋತ್ತರ ಹಾಗೂ ಸ್ನಾತಕ ಪದವೀಧರನ್ನು ಹಾರೈಸಿದ ಸಚಿವ ಡಾ. ಎಂ.ಸಿ. ಸುಧಾಕರ್, ನಮ್ಮಲ್ಲಿ ನಾವು ವಿಶ್ವಾಸವಿರಿಸಿಕೊಂಡು ನಮ್ಮ ವೈಯಕ್ತಿಕ ಆಯ್ಕೆ ಹಾಗೂ ಬದುಕನ್ನು ರೂಪಿಸಿಕೊಂಡಾಗ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಮುಂಬೈ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಎನ್. ರಾಜಶೇಖರನ್ ಪಿಳ್ಳೈ ಮಾತನಾಡಿ, ವಿಶ್ವವಿದ್ಯಾನಿಲಯವೆನ್ನುವುದು ಪ್ರಪಂಚದ ಸೂಕ್ಷ್ಮರೂಪ. ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರಗಳಿಂದ ಕೂಡಿ ಕಲಿಯುವ ಮತ್ತು ಬೆಳೆಯುವ ಸ್ಥಳ ಇದಾಗಿದೆ. ಈ ವೈವಿಧ್ಯತೆಯು ನಮ್ಮ ಶಕ್ತಿಯಾಗಿದ್ದು, ಅದನ್ನು ವಿವಿಯ ತರಗತಿಯಿಂದ ಹೊರಗೆ ಕೊಂಡೊಯ್ಯುವಲ್ಲಿಯೂ ವಿದ್ಯಾರ್ಥಿಗಳು ತಮ್ಮ ಜವಾಬ್ಧಾರಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಜೀವನದ ಜತೆಗೆ ತಮ್ಮ ಸಮುದಾಯ ಹಾಗೂ ತಮ್ಮ ವೃತ್ತಿ ನಿರ್ವಹಿಸುವ ಸ್ಥಳಗಳಲ್ಲಿಯೂ ವೈವಿಧ್ಯತೆಯನ್ನು ಸಹಿಸುವುದು ಮಾತ್ರವಲ್ಲ, ಅದರ ಮೌಲ್ಯವನ್ನು ಗೌರವಿಸಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವರಾದ ಪ್ರೊ. ದೇವೇಂದ್ರಪ್ಪ, ರಾಜುಮೊಗವೀರ, ಹಣಕಾಸು ಅಧಿಕಾರಿ ಸಂಗಪ್ಪ, ವಿವಿಧ ನಿಕಾಯಗಳ ಪ್ರಮುಖರು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
ಡಾ. ಎಂ. ಎನ್. ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿಗೆ ಗೌರವ ಡಾಕ್ಟರೇಟ್ ಪ್ರದಾನ
ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉದ್ಯಮಿಗಳಾದ ಡಾ. ಎಂ. ಎನ್ . ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಇದೇ ವೇಳೆ ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ - 11, ಶಿಕ್ಷಣ ನಿಕಾಯ - 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್‌ಡಿ) ಪ್ರದಾನ ಮಾಡಲಾಯಿತು. 54 ಚಿನ್ನದ ಪದಕ ಮತ್ತು 56 ನಗದು ಬಹುಮಾನ, ವಿವಿಧ ಸ್ನಾತಕ/ಸ್ನಾತಕೋತ್ತರ ವಿಭಾಗದ ವಿವಿಧ ಪದವಿಗಳ ಒಟ್ಟು 127 ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು.
ಬಿಕಾಂ ಪದವೀಧರೆ ಆರಾಧನಾ ಶೆಣೈಗೆ 3 ಚಿನ್ನದ ಪದಕ
ಮ್ಯಾಪ್ಸ್ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು 650 ಅಂಕಗಳೊಂದಿಗೆ ಪ್ರಥಮ ರ್ಯಾಂಕ್‌ನಲ್ಲಿ ಪೂರೈಸಿರುವ ಆರಾಧನಾ ವಿ. ಶೆಣೈ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಮಂಗಳೂರಿನ ವಿನಿತಾ ವಿ. ಶೆಣೈ ಮತ್ತು ಸುಧಾಕರ ಶೆಣೈ ದಂಪತಿ ಪುತ್ರಿಯಾಗಿರುವ ಬಿಕಾಂ ಪದವಿ ಜತೆ ಸಿಎ ಶಿಕ್ಷಣವನ್ನೂ ಮುಂದುವರಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸುಜಾತ ಅವರ ಪುತ್ರಿ ವೀಕ್ಷಿತಾ ಕನ್ನಡ ಎಂಎಯಲ್ಲಿ ಪ್ರಥಮ ರ್ಯಾಂಕ್‌ನೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯಿಯ ದುಡಿಮೆಯೇ ವೀಕ್ಷಿತಾ ಅವರ ಓದಿಗೆ ಆಧಾರವಾಗಿದೆ.
ಪ್ರಸಕ್ತ ಬಿಎಡ್ ಅಧ್ಯಯನ ನಡೆಸುತ್ತಿರುವ ವೀಕ್ಷಿತಾಗೆ ಎಂಎಡ್ ಮಾಡುವ ಇರಾದೆಯೂ ಇದ್ದು, ಬೋಧಕಿಯಾಗುವ ಬಯಕೆಯನ್ನು ಹೊಂದಿದ್ದಾರೆ.