ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೆಸರಿ ಪೊಲೀಸ್ ಕಮಿಷನರ್‌ಗೆ ನಕಲಿ ಕರೆ ಆರೋಪ: ಇಂಟಕ್ ಕಾರ್ಯಕರ್ತನಿಂದ ಮುಚ್ಚಳಿಕೆ

Update: 2025-04-01 20:10 IST
ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೆಸರಿ ಪೊಲೀಸ್ ಕಮಿಷನರ್‌ಗೆ ನಕಲಿ ಕರೆ ಆರೋಪ: ಇಂಟಕ್ ಕಾರ್ಯಕರ್ತನಿಂದ ಮುಚ್ಚಳಿಕೆ
  • whatsapp icon

ಮಂಗಳೂರು: ರಿವಾಲ್ವರ್ ಅಮಾನತು ರದ್ದುಪಡಿಸಲು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್‌ಗೆ ನಕಲಿ ಕರೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಇಂಟಕ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಪಡೆದು ಕಳುಹಿಸಿದ್ದಾರೆ.

ಈ ಹಿಂದೊಮ್ಮೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈತನ ಬಂಧನವಾಗಿತ್ತು. ಈತನ ಕ್ರಿಮಿನಲ್ ಚಟುವಟಿಕೆ ಗಮನಿಸಿ ರಿವಾಲ್ವರ್‌ನ್ನು ಪೊಲೀಸರು ಅಮಾನತ್ತಿನಲ್ಲಿರಿಸಿದ್ದರು. ಪೊಲೀಸರು ದಾಖಲಿಸಿಕೊಂಡಿದ್ದ ಈ ಪ್ರಕರಣವು ಹೈಕೋರ್ಟ್‌ನಲ್ಲಿ ರದ್ದುಗೊಂಡಿತ್ತು. ಈ ಆದೇಶವನ್ನು ಮುಂದಿರಿಸಿ ತನ್ನ ರಿವಾಲ್ವರ್ ಲೈಸೆನ್ಸ್ ಅಮಾನತನ್ನು ರದ್ದುಪಡಿಸಬೇಕೆಂದು ಆರೋಪಿಯು ಪೊಲೀಸರ ಮೇಲೆ ಸತತ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆದರೂ ಅಮಾನತು ರದ್ದುಪಡಿಸಲು ಕಮಿಷನರ್ ಮುಂದಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಅಮಾನತು ರದ್ದುಪಡಿಸಲು ತಾನು ಮಾಡಿದ ಪ್ರಯತ್ನ ವಿಫಲಗೊಂಡ ಬಳಿಕ ಆರೋಪಿಯು ಕಳೆದ ವಾರ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯ ಹೆಸರಿನಲ್ಲಿ ಪೊಲೀಸ್ ಕಮಿಷನರಿಗೆ ಕರೆ ಮಾಡಿ ರಿವಾಲ್ವರ್ ಅಮಾನತನ್ನು ರದ್ದುಗೊಳಿಸುವಂತೆ ಸೂಚಿಸಿದ್ದ. ಇದರಿಂದ ಸಂಶಯಗೊಂಡ ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಚಾರಿಸಿದಾಗ ಅಂತಹ ಯಾವುದೇ ಕರೆ ಮಾಡದಿರುವುದು ತಿಳಿದು ಬಂತು. ತಕ್ಷಣ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಯಿಸಿ ಬಿಡಲಾಯಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News