ಮೀಫ್ ವತಿಯಿಂದ ಉಚಿತ ನೀಟ್, ಸಿಇಟಿ ಕ್ರ್ಯಾಶ್ ಕೋರ್ಸ್
ಮಂಗಳೂರು: ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಯ ಮುಸ್ಲಿಮ್ ಶಿಕ್ಶಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಜೆಪ್ಪಿನಮೊಗರಿನ ಯೆನೆಪೋಯ ಪಿಯು ಕಾಲೇಜಿನ ಸಹಭಾಗಿತ್ವದಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸತತ 45 ದಿವಸಗಳ ಉಚಿತ ನೀಟ್, ಸಿಇಟಿ ಕ್ರ್ಯಾಶ್ ಕೋರ್ಸ್ ವಾರದ ಹಿಂದೆ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜಾತಿಮತ ಭೇದವಿಲ್ಲದೆ ದ.ಕ., ಉಡುಪಿ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೀಫ್, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಮತ್ತು ತರಬೇತುದಾರರು ಕೂಡ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಪ್ರವೇಶ ಪರೀಕ್ಷೆ ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಆರಂಭಿಸಲಾದ ಈ ಕಾರ್ಯಾಗಾರದಲ್ಲಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ 198 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. 2 ಪ್ರತ್ಯೇಕ ಬ್ಯಾಚ್‌ಗಳಲ್ಲಿ 15 ನುರಿತ ಉಪನ್ಯಾಸಕರು ತರಗತಿ ನಡೆಸುತ್ತಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದ ಅದರಲ್ಲೂ ಗ್ರಾಮೀಣ ಪ್ರದೇಶದ ವಿಶೇಷವಾಗಿ ಸರಕಾರಿ ಪಿಯುಸಿ ವಿದ್ಯಾರ್ಥಿಗಳು ಕೂಡ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ತಿಳಿಸಿದ್ದಾರೆ.
ನಮಗೆ ಸುಮಾರು 300 ಅರ್ಜಿಗಳು ಬಂದಿದ್ದವು. ಆ ಪೈಕಿ 198 ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಏರ್ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಮೂಸಬ್ಬ ಪಿ. ಬ್ಯಾರಿ ತಿಳಿಸಿದ್ದಾರೆ.
ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಉಚಿತವಾಗಿ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮೀಫ್‌ನ ಯೋಜನೆಗೆ ಯೆನೆಪೋಯ ಆಡಳಿತ ಮಂಡಳಿಯ ಸಹಕಾರದಿಂದ ನಾವು ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಲ್ಲಿ ನಮ್ಮೆಲ್ಲರ ಪ್ರಯತ್ನ ಸಾರ್ಥಕ ಎಂದು ಯೆನೆಪೋಯ ಪಿಯು ಕಾಲೇಜಿನ ಪ್ರಾಂಶುಪಾಲ ಉಝ್ವಲ್ ರೋಡ್ನಿ ಮೆನೇಜಸ್ ತಿಳಿಸಿದ್ದಾರೆ.