ಮಂಗಳೂರು: ಅನಿರ್ವೇದ ಸಂಸ್ಥೆಯಿಂದ ‘ನೆರವಿನ ಶನಿವಾರ’ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ‘ಅನಿರ್ವೇದ’ವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ‘ನೆರವಿನ ಶನಿವಾರ’ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
ಕರ್ನಾಟಕದ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಇಫ್ತಿಕಾರ್ ಅಲಿ ಅವರು ಮಂಗಳವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ.ಟಿ ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ‘ನೆರವಿನ ಶನಿವಾರ’ ಉಪಕ್ರಮವು ೨೦೨೫ರ ಮಾರ್ಚ್ ೨೯ರಿಂದ ಪ್ರತಿ ಶನಿವಾರದಂದು ಮೋರ್ಗನ್ಸ್ ಗೇಟ್ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
‘ನೆರವಿನ ಶನಿವಾರ’ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎ.ಎಸ್.ಡಿ), ಎ.ಡಿ.ಎಚ್.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಗೆ ಒತ್ತು ನೀಡುವ ಪರಿಸರವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಪೋಷಕರು, ಆರೈಕೆ ಒದಗಿಸುವವರು ಮತ್ತು ಸಮುದಾಯದ ಸದಸ್ಯರು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಪೋಷಕರ ತರಬೇತಿ ಮತ್ತು ಸಮಾನಸ್ಕಂಧ ನೆರವು ಸಹ ಈ ಮೂಲಕ ಲಭ್ಯವಿದ್ದು, ಸಹಯೋಗದಿಂದ ಕೂಡಿದ ನೆರವು ಜಾಲವನ್ನು ಈ ಮೂಲಕ ರೂಪಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
