ದಮ್ಮಾಮ್-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ವಿಳಂಬ

ಸಾಂದರ್ಭಿಕ ಚಿತ್ರ (PTI)
ದಮ್ಮಾಮ್: ತಾಂತ್ರಿಕ ಸಮಸ್ಯೆಯಿಂದಾಗಿ ದಮ್ಮಾಮ್-ಮಂಗಳೂರು ನಡುವಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಹಾರಾಟ ವಿಳಂಬವಾಗಿದ್ದು, ಇದರಿಂದ ನೂರಾರು ಪ್ರಯಾಣಿಕರು ಸಮಸ್ಯೆಗೆ ಸಿಲುಕಿರುವುದಾಗಿ ವರದಿಯಾಗಿದೆ.
ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ಸಮಸ್ಯೆಯಿಂದ ಇನ್ನೂ ಹಾರಾಟ ನಡೆಸಲಿಲ್ಲ ಎನ್ನಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ತಿಳಿದು ಬಂದಿದೆ.
ದಮ್ಮಾಮ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನ, ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪಸಮಯದಲ್ಲೇ ಮತ್ತೆ ಲ್ಯಾಂಡ್ ಆಗಿದೆ ಎನ್ನಲಾಗಿದೆ. ಇದರಿಂದ ಪ್ರಯಾಣಿಕರನ್ನು ರಾತ್ರಿ ಎರಡು ಗಂಟೆಯವರೆಗೂ ವಿಮಾನದಲ್ಲೇ ಕುಳ್ಳಿರಿಸಿ ನಂತರ ಇಳಿಯುಂತೆ ಸಿಬ್ಬಂದಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಬುಧವಾರ ಸಂಜೆ ವಿಮಾನ ಹೊರಡಲಿದೆ ಎಂದು ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲೇ ಕಾದು ಕುಳಿತು ಸುಸ್ತಾಗಿದ್ದ ಪ್ರಯಾಣಿಕರಿಗೆ ಮುಂಜಾವ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನಲಾಗಿದೆ.
ಪ್ರತೀ ಮಂಗಳವಾರ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.