ಬಜ್ಪೆ: ಅಕ್ರಮ ದನ ಸಾಗಾಟದ ವಾಹನ ತಡೆದ ಪೊಲೀಸರು; 17 ದನಗಳ ರಕ್ಷಣೆ

Update: 2025-03-28 20:23 IST
ಬಜ್ಪೆ: ಅಕ್ರಮ ದನ ಸಾಗಾಟದ ವಾಹನ ತಡೆದ ಪೊಲೀಸರು; 17 ದನಗಳ ರಕ್ಷಣೆ
  • whatsapp icon

ಬಜ್ಪೆ: ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ತಡೆದ ಬಜ್ಪೆ ಪೊಲೀಸರು ಸುಮಾರು 17 ದನಗಳನ್ನು ರಕ್ಷಿಸಿರುವ ಘಟನೆ ಶುಕ್ರವಾರ ಮುಂಜಾನೆ ಸೂರಲ್ಪಾಡಿ ಮಸೀದಿ ಬಳಿ ನಡೆದಿದೆ.

ವಾಹನವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳಾದ ತೌಸೀಫ್ ಪೆರಾಡಿ, ಹಾರೀಸ್ ಪೆರಾಡಿ ಮತ್ತು ಮುಹಮ್ಮದ್‌ ಫೈಝಲ್ ಎಂಬವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗೂಡ್ಸ್‌ ವಾಹನವೊಂದರಲ್ಲಿ ದನಗಳನ್ನು ಹಿಂಸಾತ್ಮಕ ರೂಪದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಜ್ಪೆ ಪಿಎಸ್ಸೆಐ ಲತಾ ಕೆ.ಎನ್.‌ ಅವರಿಗೆ ಶುಕ್ರವಾರ ಬೆಳಗ್ಗಿನ ಜಾವ ಬಂದ ಮಾಹಿತಿ ಬಂದಿದ್ದು, ಈ ಹಿನ್ನೆಲೆ ಸೂರಲ್ಪಾಡಿ ಮಸೀದಿಯ ಬಳಿ ಬಜ್ಪೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ವಾಹನ ತಪಾಸನೆ ಆರಂಭಿಸಿದ್ದರು. ಇದನ್ನು ಕಂಡ ದನ ಸಾಗಾಟ ಮಾಡುತ್ತಿದ್ದ ವಾಹನದ ಚಾಲಕ ಮತ್ತು ಇತರ ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಳಿಕ ವಾಹನವನ್ನು ವಶಕ್ಕೆ ಪಡೆದುಕೊಂಡ ಬಜ್ಪೆ ಪೊಲೀಸರು, ವಾಹನದಲ್ಲಿದ್ದ 19 ದನಗಳನ್ನು ಪೊಲೀಸ್‌ ಠಾಣೆಗೆ ರವಾನಿಸಿದ್ದಾರೆ. ಅಲ್ಲಿ ಪಶುವೈದ್ಯರು ದನಗಳನ್ನು ತಪಾಸಣೆ ನಡೆಸಿದಾಗ ಎರಡು ದನಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದನಗಳನ್ನು ತುಂಬಿಕೊಂಡು ಬರುತ್ತಿರುವ ವಾಹನಕ್ಕೆ ಬೆಂಗಾವಲಾಗಿ ಇನ್ನೋವಾ ಕಾರು ಬರುತ್ತಿತ್ತು. ಇದು ಎಡಪದವು ರಾಮಮಂದಿರದ ಬಳಿ ಬರುತ್ತಿರುವಾಗ ಚಂದನ್‌ ಉಪಾಧ್ಯಾಯ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಇನೋವಾ ಕಾರಿಗೆ ಬೆಂಗಾವಲು ಕಾರಿನ ಚಾಲಕ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ. ಚಂದನ್‌ ಅವರು ಪೊಲೀಸರಿಗೆ ಮಾಹಿತಿ ನೀಡುವ ಹೆದರಿಕೆಯಿಂದ ಅವರ ಮೇಲೆ ಗುಂಡು ಹಾರಿಸಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿ ಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದನಸಾಗಾಟಕ್ಕೆ ಸಂಬಂಧಿಸಿದಂತೆ ಚಂದನ್ ಉಪಾಧ್ಯಾಯ ಎಂಬವರ ದೂರಿಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್ ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದು, ಇನ್ನೋವಾ ಕಾರಿನಲ್ಲಿ ಅಕ್ರಮ ದನ ಸಾಗಾಟಗಾರರಿಗೆ ಬೆಂಗಾವಲಾಗಿ ಬರುತ್ತಿದ್ದ ಇನ್ನೋವಾ ಕಾರಿನ ಚಾಲಕ ಬಂದೂಕು ಹೊಂದಿರುವ ಬಗ್ಗೆ ಮತ್ತು ಚಂದನ್‌ ಉಪಾಧ್ಯಾಯ ಅವರ ಕಾರಿನ ಮೇಲೆ ಬಂದೂಕು ಚಲಾಯಿಸಿರುವ ಕುರಿತು ಯಾವುದೇ ಕುರುಹುಗಳು, ಪುರಾವೆಗಳು ಲಭ್ಯವಾಗಿಲ್ಲ. ಸಿಸಿ ಟಿವಿ ಪರಿಶೀಲಿಸಿದಾಗಲೂ ಬಂದೂಕು ಬಳಸಿದ ಬಗ್ಗೆ ಯಾವುದೇ ಪುರಾವೆ ದೊರೆತಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News