ಮಂಗಳೂರು: ಫೇಸ್‌ಬುಕ್‌ನಲ್ಲಿ ಟೆಲಿಗ್ರಾಂ ಪೇಜ್ ನಂಬಿ ಮೋಸ ಹೋದ ವ್ಯಕ್ತಿ
ಮಂಗಳೂರು: ಫೇಸ್‌ಬುಕ್‌ನಲ್ಲಿ ಟೆಲಿಗ್ರಾಂ ಪೇಜ್ ನಂಬಿ ವ್ಯಕ್ತಿಯೊಬ್ಬರು ಮೋಸ ಹೋದ ಘಟನೆ ನಡೆದಿದ್ದು, ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.1ರಂದು ತಾನು ಫೆಸ್‌ಬುಕ್ ಪೇಜ್ ನೋಡುವಾಗ ‘ವರ್ಕ್ ಫ್ರಂ ಹೋಂ’ ಜಾಹೀರಾತು ಕಂಡು ಅದನ್ನು ಕ್ಲಿಕ್ ಮಾಡಿದ್ದೆ. ಆಗ ಹೊಸ ಟೆಲಿಗ್ರಾಮ್ ಪೇಜ್ ತೆರೆದುಕೊಂಡಿತ್ತು. ಆ ಟೆಲಿಗ್ರಾಂ ಗ್ರೂಪ್‌ನಲ್ಲಿ ಕೆಲವು ಟಾಸ್ಕ್ ಮಾಡುವಂತೆ ತಿಳಿಸಲಾಯಿತು. ಗ್ರೂಪ್‌ಗೆ ಸೇರ್ಪಡೆಯಾಗಿರುವುದಕ್ಕಾಗಿ ತನ್ನ ಖಾತೆಗೆ 120 ರೂ. ಹಾಗೂ ನಂತರ 20 ಟಾಸ್ಕ್ ನಿರ್ವಹಿಸಿರುವುದಕ್ಕೆ 200 ರೂ.ಗಳನ್ನು ವರ್ಗಾಯಿಸಲಾಯಿತು. ಬಳಿಕ 800 ರೂ. ಪಾವತಿ ಮಾಡುವಂತೆ ಹಾಗೂ ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 1040 ರೂ.ಗಳನ್ನು ಪಾವತಿ ಮಾಡಲಾಯಿತು. ಮಾ.4ರಂದು ತಾನು 40,000 ರೂ.ಗಳನ್ನು ಅಪರಿಚಿತರು ನೀಡಿದ ಖಾತೆಗೆ ಪಾವತಿ ಮಾಡಿದ್ದೆ. ಅನಂತರವೂ ಅಧಿಕ ಲಾಭದ ಆಮಿಷಕ್ಕೆ ಒಳಗಾಗಿ ಮಾ.13ರವರೆಗೆ ಅಪರಿಚಿತರು ನೀಡಿದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ 16.42 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದೆ. ಮಾ.18ರಂದು ಆ ಹಣವನ್ನು ವಾಪಸ್ ಕೇಳಿದಾಗ ನೀಡಲಿಲ್ಲ. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಹಣಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.