ಬಡವರ ವಸತಿ ಯೋಜನೆಯ ಬಗ್ಗೆ ಧ್ವನಿ ಎತ್ತದ ಶಾಸಕ ಕಾಮತ್ ರಾಜೀನಾಮೆ ನೀಡಲಿ: ಸುನಿಲ್ ಕುಮಾರ್ ಬಜಾಲ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು 40 ವರ್ಷಗಳು ಕಳೆದಿವೆ. ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಒಂದು ತುಂಡು ಭೂಮಿಯನ್ನು ಬಡವರಿಗೆ ನೀಡಲಾಗಿಲ್ಲ. ಕಳೆದ 25 ವರ್ಷಗಳಿಂದ ನಿವೇಶನರಹಿತರ ಹೋರಾಟ ನಡೆದ ಫಲವಾಗಿ ನಿವೇಶನ ರಹಿತರ ಪಟ್ಟಿ ರೆಡಿಯಾ ಗಿದೆ. ಒಂದೆರಡು ಕಡೆಗಳಲ್ಲಿ ಭೂಮಿ ನಿಗದಿಪಡಿಸಲಾಗಿದೆ. ಆದರೆ ಇಲ್ಲಿನ ಬಿಲ್ಡರ್ ಮಾಫಿಯಾ ಅದಕ್ಕೆ ಅವಕಾಶ ನೀಡದೆ ಬಡವರನ್ನು ಶೋಷಿಸುತ್ತಲಿದೆ. ಈ ಬಗ್ಗೆ ಧ್ವನಿ ಎತ್ತದ ಶಾಸಕ ವೇದವ್ಯಾಸ ಕಾಮತ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆಗ್ರಹಿಸಿದರು.
ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ಹಾಗೂ ಇಡ್ಯಾ ಪ್ರದೇಶದಲ್ಲಿ ಎ+೩ ಮಾದರಿಯ ಯೋಜಿತ ವಸತಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ಸಮಿತಿಗಳ ಜಂಟಿ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಮುಂದೆ ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಪಿಎಂ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ನಾಯಕರಾದ ಸಂತೋಷ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಜಯಂತಿ ಶೆಟ್ಟಿ, ಮನೋಜ್ ವಾಮಂಜೂರು, ಪ್ರಮೀಳಾ ಶಕ್ತಿನಗರ, ದಿನೇಶ್ ಶೆಟ್ಟಿ, ಶಶಿಧರ್ ಶಕ್ತಿನಗರ, ರವಿಚಂದ್ರ ಕೊಂಚಾಡಿ, ಭಾರತಿ ಬೊಳಾರ, ಲೋಕೇಶ್ ಎಂ, ನಾಗೇಶ್ ಕೋಟ್ಯಾನ್, ರಶ್ಮಿ ವಾಮಂಜೂರು, ಜಯಲಕ್ಷ್ಮಿ, ಅಸುಂತ ಡಿಸೋಜ, ತಯ್ಯೂಬ್ ಬೆಂಗರೆ, ಅಶೋಕ್ ಶ್ರೀಯಾನ್, ಜಯಪ್ರಕಾಶ್ ಜಲ್ಲಿಗುಡ್ಡ, ಪ್ರಶಾಂತ್ ಕುದ್ಕೋರಿಗುಡ್ಡ ಭಾಗವಹಿಸಿದ್ದರು.