ಸುರತ್ಕಲ್ | ಕಲುಷಿತಗೊಂಡಿರುವ ಚೇಳಾಯರು ಖಂಡಿಗೆ ನಂದಿನಿ ನದಿ ವೀಕ್ಷಿಸಿದ ಶಾಸಕ ಉಮಾನಾಥ ಕೋಟ್ಯಾನ್

ಸುರತ್ಕಲ್ : ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು, ಕೊಡಿಪಾಡಿಯ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ವಸತಿ ಸಂಕೀರ್ಣಗಳ ತ್ಯಾಜ್ಯ ನೀರು, ಖಾಸಗಿ ಆಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರಿನಿಂದಾಗಿ ಸಂಪೂರ್ಣ ಕಲುಷಿತಗೊಂಡಿರುವ ಇತಿಹಾಸ ಪ್ರಸಿದ್ದ ಚೇಳಾಯರು ಖಂಡಿಗೆ ನಂದಿನಿ ನದಿಯನ್ನು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ನದಿಯನ್ನು ಪುನರುಜ್ಜೀವನ ಗೊಳಿಸಬೇಕೆಂದು ಆಗ್ರಹಿಸಿ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳಾಯರು ಇದರ ನೇತೃತ್ವದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಬೆಂಗಳೂರು ಅಧಿವೇಶನದಲ್ಲಿ ಇದ್ದ ಕಾರಣ ಬರಲಾಗಲಿಲ್ಲ. ಬೆಂಗಳೂರು ಅಧಿವೇಶನದಲ್ಲಿ ನಂದಿನಿ ನದಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ ದ.ಕ. ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದ ದಿಶಾ ಸಭೆಯಲ್ಲೂ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಶಿಘ್ರ ನದಿಯ ಪುನರುಜ್ಜೀವಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ನುಡಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪಾಲಿಕೆ ಆಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶಾಸಕರು, ನಂದಿನಿ ನದಿ ಕಲುಷಿತ ನೀರು ಬಿಡುವುದು ಬಂದ್ ಆಗಬೇಕು ಮತ್ತು ನದಿಯಲ್ಲಿ ಬೆಳೆದ ಕಲುಷಿತ ಗಿಡ ಗಂಟಿಗಳನ್ನು ಒಂದು ತಿಂಗಳೊಳಗೆ ತೆಗೆಯಿಸಿ ನದಿಯನ್ನು ಸ್ವಚ್ಛಗೊಳಿಸಬೇಕು. ಇತಿಹಾಸ ಪ್ರಸಿದ್ಧ ಖಂಡಿಗೆ ಉಳ್ಳಾಯ ದೈವದ ಮೀನು ಹಿಡಿಯುವ ಜಾತ್ರೆ ಈ ಬಾರಿ ಯಶಸ್ವಿಯಾಗಿ ನಡೆಸಲು ಅವಕಾಶ ಆಗುವಂತೆ ಮಾಡಬೇಕು ಎಂದು ಸೂಚಿಸಿದರು. ಇಲ್ಲದಿದ್ದರೆ ಗ್ರಾಮಸ್ಥರ ಜೊತೆ ನಾನು ಸೇರಿಕೊಂಡು ಪ್ರತಿಭಟನೆಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಚೇಳಾಯರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷೆ ರೇಖಾ, ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ, ಯಶೋದ ಬಿ., ಸುಕುಮಾರಿ, ನಂದಿನಿ ನದಿ ಸಂರಕ್ಷಣಾ ಸಮಿತಿಯ ಪ್ರಮುಖರಾದ ದಿವಾಕರ ಸಾಮಾನಿ ಚೇಳಾಯರುಗುತ್ತು, ಸುಕೇಶ್ ಶೆಟ್ಟಿ ಖಂಡಿಗೆ, ರಮೇಶ್ ಪೂಜಾರಿ ಚೇಳಾಯರು, ಗಂಗಾಧರ ಪೂಜಾರಿ ಕಾಲನಿ ಮುಂತಾದವರು ಉಪಸ್ಥಿತರಿದ್ದರು.