ಮಂಗಳೂರು ವಿವಿ : ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಸೌಹಾರ್ದ ಇಫ್ತಾರ್ ಸಂಗಮ

ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಅಲ್ಪಸಂಖ್ಯಾತರ ಸ್ನಾತಕೋತ್ತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸೌಹಾರ್ದ ಇಫ್ತಾರ್ ಸಂಗಮ ಕಾರ್ಯಕ್ರಮ ಮಂಗಳವಾರ ನಡೆಯಿತು.
ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ಪವಿತ್ರವಾದ ರಮಝಾನ್ ಮಾಸದಲ್ಲಿ ವಿದ್ಯಾರ್ಥಿನಿಯರು ಸೇರಿಕೊಂಡು ಸೌಹಾರ್ದತೆಯ ಜೊತೆಗೆ ಪ್ರೀತಿಯನ್ನು ಹಂಚುವ ಕೆಲಸ ಆಗಿದೆ. ಒಂದು ತಿಂಗಳ ಕಾಲ ಮಾತ್ರವಲ್ಲ, ವರ್ಷವಿಡೀ ಎಲ್ಲರೂ ಪರಸ್ಪರ ಇನ್ನೊಂದು ಧರ್ಮದ ಸಂಸ್ಕೃತಿ ಆಚಾರ ವಿಚಾರಗಳನ್ನು ಅರಿತುಕೊಂಡು ಪ್ರೀತಿ ವಿಶ್ವಾಸದಿಂದ ಬಾಳುವ ವಾತಾವರಣ ಈ ಮೂಲಕ ನಿರ್ಮಾಣವಾಗಲಿ. ಯುವ ಸಮುದಾಯದಿಂದ ಉತ್ತಮ ವಾತಾವರಣವನ್ನು ನಿರ್ಮಿಸಲು ಸಾಧ್ಯ, ಈ ಮೂಲಕ ಅಭಿವೃದ್ಧಿ ಹಾಗೂ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್.ಧರ್ಮ ಮಾತನಾಡಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಲಯದಲ್ಲಿ ಪ್ರಥಮ ಬಾರಿ ಆಯೋಜಿಸಿರುವ ಸೌಹಾರ್ದ ಸಂಗಮ ಇಫ್ತಾರ್ ಕೂಟ ಎಲ್ಲರಲ್ಲಿ ಉತ್ತಮ ಸಂದೇಶ ಸಾರಲಿ. ಹೆತ್ತವರ ಆಶೋತ್ತರಗಳನ್ನು ಈಡೇರಿಸುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಬೆಳೆಯಲಿ ಎಂದರು.
ಅಲ್ಪಸಂಖ್ಯಾತರ ಸ್ನಾತಕೋತ್ತರ ಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿನಿಯರು ಕೂಡ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಗೀತಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹೈಫತ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಿಂದಿಯಾ , ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ತಾಲೂಕು ವಿಸ್ತರಣಾಧಿಕಾರಿ ಮುಹಮ್ಮದ್ ಫಾರೂಕ್, ಹಾಸ್ಟೆಲ್ ವಾರ್ಡನ್‌ಗಳಾದ ರತ್ನಮ್ಮ, ಪುಷ್ಪಲತಾ, ಬಾಳೆಪುಣಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್. ನಾಸಿರ್ ನಡುಪದವು, ಮುಖಂಡರಾದ ಇಬ್ರಾಹಿಂ ನಡುಪದವು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ರಮೇಶ್ ಶೆಟ್ಟಿ ಬೋಳಿಯಾರ್, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಅಚ್ಯುತ್ತ ಗಟ್ಟಿ ಕೊಣಾಜೆ, ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯೆ ಗುಲಾಬಿ ಶೆಟ್ಟಿಗಾರ್, ಪಜೀರು ಗ್ರಾ.ಪಂ ಸದಸ್ಯ ಇಮ್ತಿಯಾಝ್ ಪಜೀರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಕೊಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಚಂಚಲಾಕ್ಷಿ, ಮಾಜಿ ಸದಸ್ಯ ಶೌಕತ್ ಆಲಿ, ತಾ.ಪಂ ಮಾಜಿ ಸದಸ್ಯೆ ಪದ್ಮಾವತಿ ಉಪಸ್ಥಿತರಿದ್ದರು.