ಪೌರ ಕಾರ್ಮಿಕರ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 400 ಮಂದಿ ಭಾಗಿ : ಅನಿಲ್ ಕುಮಾರ್

Update: 2025-03-26 15:03 IST
ಪೌರ ಕಾರ್ಮಿಕರ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 400 ಮಂದಿ ಭಾಗಿ : ಅನಿಲ್ ಕುಮಾರ್
  • whatsapp icon

ಮಂಗಳೂರು : ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘವು ಎಪ್ರಿಲ್ 3ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ದೇಶದ ವಿವಿಧ ಭಾಗಗಳ ಸುಮಾರು 60 ಸಾವಿರ ಪೌರಕಾರ್ಮಿಕರು ಭಾಗವಹಿಸುವರು. ನಮ್ಮ ಜಿಲ್ಲೆಯಿಂದ  400 ಮಂದಿ ಭಾಗವಹಿಸಲಿದ್ದೇವೆ ಎಂದು ಸಂಘದ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತರಲಾಗಿದೆ ಎಂದರು.

ಪಾಲಿಕೆಯ 462 ಪೌರಕಾರ್ಮಿಕರು, ಕಸ ಸಾಗಣೆ ವಾಹನಗಳ 157 ಚಾಲಕರು, 127 ಲೋಡರ್‌ಗಳು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಸೇರಿ ನಮ್ಮ ಜಿಲ್ಲೆಯಲ್ಲಿ 671 ಮಂದಿಯ ಕೆಲಸ ಖಾಯಂಗೊಳ್ಳಬೇಕಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಶುಭ ಸುದ್ದಿ ನೀಡುವ ನಿರೀಕ್ಷೆ ಇದೆ ಎಂದರು.

ನಗರದಲ್ಲಿ ಪೌರಕಾರ್ಮಿಕರನ್ನು ಅವಾಚ್ಯವಾಗಿ ಬೈದು ಹಲ್ಲೆ ನಡೆಸುವ ಪರಿಪಾಠ ಹೆಚ್ಚುತ್ತಿದೆ. ಬಿಕರ್ನಕಟ್ಟೆಯಲ್ಲಿ ಹಾಗೂ ಬಂದರಿನಲ್ಲಿ ಇಂತಹ ಘಟನೆಗಳು ನಡೆದಿವೆ. ಕುಡಿಯಲು ನೀರು ಕೇಳುವ ಪೌರಕಾರ್ಮಿಕರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತಿದೆ. ಪೌರಕಾರ್ಮಿಕರಿಗೆ ರಕ್ಷಣೆಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಪಿ. ಆನಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ಸೇಸಪ್ಪ ಹಾಗೂ ಆನಂದ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News