ಮಂಗಳೂರು: ಸಿಐಎಸ್‌ಎಫ್ ಸೈಕಲ್ ರ್‍ಯಾಲಿಗೆ ಸ್ವಾಗತ
ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ವತಿಯಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಉದ್ದಕ್ಕೂ ಸಂಚರಿಸುತ್ತಿರುವ ಸೈಕಲ್ ರ್‍ಯಾಲಿ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2025ಗೆ ಬುಧವಾರ ಸಂಜೆ ಮಂಗಳೂರಿನಲ್ಲಿ ಸ್ವಾಗತ ನೀಡಲಾಯಿತು.
ಪಣಂಬೂರು ಬೀಚ್‌ನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ಸಿಐಎಸ್‌ಎಫ್ ಯೋಧರಿಗೆ ಸ್ವಾಗತ ಕೋರಲಾಯಿತು. ಯೋಧರನ್ನು ಸ್ವಾಗತಿಸಲು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹುಲಿವೇಷ ನೃತ್ಯ, ಚಂಡೆ ವಾದ್ಯ ಮೇಳ, ಭರತನಾಟ್ಯ, ಜನಪದ ನೃತ್ಯಗಳು ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಯೋಧರನ್ನು ಆಕರ್ಷಿಸಿದವು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಪಂ ಸಿಇಒ ಡಾ. ಆನಂದ್, ಸಿಐಎಸ್‌ಎಫ್ ಡಿಐಜಿ ಆರ್. ಪೊನ್ನಿ, ಕೋಸ್ಟ್‌ಗಾರ್ಡ್ ಡಿಐಜಿ ಮುಹಮ್ಮದ್ ಶಹನವಾಝ್, ಸಿಐಎಸ್‌ಎಫ್ ಅಧಿಕಾರಿಗಳಾದ ವಿ.ಎಂ. ಜೋಶಿ, ಆರ್.ಪಿ. ಪಾಠಕ್, ಅನೂಪ್ ಸಿನ್ಹಾ ಉಪಸ್ಥಿತರಿದ್ದರು.
ಗುರುವಾರ ಬೆಳಗ್ಗೆ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್ ಪಣಂಬೂರು ಬೀಚ್‌ನಿಂದ ಕನ್ಯಾಕುಮಾರಿ ಕಡೆಗೆ ಪ್ರಯಾಣವನ್ನು ಮುಂದುವರಿಸಿತು. ಈ ಸಂದರ್ಭ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಯೋಧರನ್ನು ಬೀಳ್ಕೊಟ್ಟರು.