ದಲಿತ ಮಹಿಳೆಗೆ ಹಲ್ಲೆ ಪ್ರಕರಣ : ರಾಜಿಯಲ್ಲಿ ಮುಗಿಸುವ ವಿಷಯವೇ ಅಲ್ಲ: ದಸಂಸ

ಮಂಗಳೂರು : ಉಡುಪಿಯಲ್ಲಿ ಮಹಿಳೆಗೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ. ಮಾತ್ರವಲ್ಲದೆ ಇದು ರಾಜಿಯಲ್ಲಿ ಮುಗಿಸುವ ವಿಷಯವೇ ಅಲ್ಲ ಎಂದು ದ.ಕ. ಜಿಲ್ಲಾ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ), ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಪೌರ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶದ ಕುರಿತ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಎಸ್.ಪಿ. ಈ ಬಗ್ಗೆ ಪ್ರತಿಕ್ರಿಯಿಸಿದರು.
ಮೀನು ಕದ್ದಿರು ವುದು ತಪ್ಪು. ಈ ರೀತಿ ಮೀನು ತೆಗೆಯುವುದು ಸಾಮಾನ್ಯ. ಪ್ರತಿನಿತ್ಯ ನಡೆಯುತ್ತಿರುತ್ತದೆ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆಯುತ್ತಿದೆ. ಆದರೆ ಇದು ಕರ್ನಾಟಕ. ಇದನ್ನು ಸಮರ್ಥನೆ ಕೊಡುವ ವಿಚಾರವಾಗಲಿ , ಬೆಂಬಲಿಸುವುದಾಗಿ ರಾಜಕಾರಣಿಗಳು ಮಾಡಬಾರದು ಎಂದು ಅವರು ಹೇಳಿದರು.
ದಲಿತ ದೌರ್ಜನ್ಯ ಕಾಯ್ದೆ ಗಂಭೀರ ವಿಚಾರ. ಹಲ್ಲೆ ನಡೆಸುವುದು ಮಾನಹಾನಿಕರ. ಇಂತಹ ಪ್ರಕರಣದಲ್ಲಿ ನ್ಯಾಯಾಧೀಶರು ವೈಯಕ್ತಿಕವಾಗಿ ವಿಚಾರಿಸುತ್ತಾರೆ. ದೌರ್ಜನ್ಯ ಪ್ರಕರಣ ದಾಖಲಾದ ಬಳಿಕ ರಾಜಿಗೆ ಬರಲ್ಲ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ರಾಜಿ ಮಾಡಲು ಆಗುವ ಪ್ರಕರಣ ಅಲ್ಲ. ಇದು ಬಲಾಢ್ಯರ ವಿರುದ್ಧದ ಹೋರಾಟ. ಮಹಿಳೆಯಿಂದ ತಪ್ಪಾಗಿದ್ದರೆ ಅದಕ್ಕೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಈ ರೀತಿ ದೈಹಿಕ ಹಲ್ಲೆ ನಡೆಸುವುದನ್ನು ಸಮರ್ಥಿಸುವ ಕಾರ್ಯ ನಡೆಯಬಾರದು. ಇದು ಕರ್ನಾಟಕ , ಉತ್ತರ ಪ್ರದೇಶ ರೀತಿಯ ಪ್ರಕರಣಗಳು ಇಲ್ಲಿ ನಡೆಯಲು ಅವಕಾಶ ನೀಡಬಾರದು ಎಂದರು.
ದಲಿತರಿಗೆ ರಕ್ಷಣೆ ಇಲ್ಲ. ಒತ್ತಡ ಹಾಕುವುದು ಸರಿಯಲ್ಲ. ಇದು ಪುನರಾವರ್ತನೆ ಆದರೆ ಬೃಹತ್ ಪ್ರತಿಭಟನೆಗೆ ಸಭೆ ಮಾಡಿದ್ದೇವೆ. ಮುಖ್ಯಂತ್ರಿ ಅವರು ಕಠಿಣ ನಿಲುವು ತೋರಿಸಿದ್ದಾರೆ ಎಂದರು.