ಬೀಡಿಯ ಮೇಲಿನ ಜಿಎಸ್‌ಟಿಯನ್ನು ಶೇ. 5ಕ್ಕೆ ಇಳಿಸಲು ಬೀಡಿ ಕಾರ್ಮಿಕ ಸಂಘಟನೆಗಳ ಆಗ್ರಹ
ಮಂಗಳೂರು: ಬೀಡಿಯ ಮೇಲೆ ವಿಧಿಸಲಾದ ಜಿಎಸ್‌ಟಿಯನ್ನು ಶೇ 28ರಿಂದ ಶೇ 5ಕ್ಕೆ ಇಳಿಸುವಂತೆ ಬಿಎಂಎಸ್ ಸಂಯೋಜಿತ ಬೀಡಿ ಮಜ್ದೂರ್ ಸಂಘ(ರಿ) ಮತ್ತು ಎಚ್‌ಎಂಎಸ್ ಸಂಯೋಜಿತ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಸರಕಾರವನ್ನು ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೀಡಿ ಮಜ್ದೂರ್ ಸಂಘದ ಕೆ ವಿಶ್ವನಾಥ ಶೆಟ್ಟಿ ಮತ್ತು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷ ಮಹಮ್ಮದ್ ರಫಿ ಅವರು ಕರ್ನಾಟಕದಲ್ಲಿ ಜಿಎಸ್‌ಟಿ ಹೆಚ್ಚಳದಿಂದ ಬೀಡಿ ಕಾರ್ಮಿಕರು ಇನ್ನಷ್ಟು ಸಮಸ್ಯೆ ಎದುರಿಸಬೇಕಾದಿತು ಎಂದು ಆತಂಕ ವ್ಯಕ್ತಪಡಿಸಿದರು.
ತಂಬಾಕು ಉತ್ಪನ್ನಗಳ ಜಿಎಸ್‌ಟಿ ದರವನ್ನು ಶೇ 35ಕ್ಕೆ ಹೆಚ್ಚಿಸುವ ಪ್ರಸ್ತಾಪದಿಂದ ಬೀಡಿಯನ್ನು ಹೊರಗಿಡಬೇಕು ಮತ್ತು ಬೀಡಿ ಮೇಲಿನ ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.
ಬೀಡಿ ಕೈಗಾರಿಕೆ ಎಂಬುದು ಸುಮಾರು 120 ವರ್ಷಗಳ ಇತಿಹಾಸವುಳ್ಳ ಗುಡಿ ಕೈಗಾರಿಕೆಯಾಗಿದೆ. ದೇಶಾದ್ಯಂತ ಈ ಕೈಗಾರಿಕೆಯಲ್ಲಿ ಇಂದು ಸುಮಾರು 3 ಕೋಟಿಗಿಂತಲೂ ಹೆಚ್ಚು ಕಾರ್ಮಿಕ ವರ್ಗ ದುಡಿಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇಂದು ಸರಿಸುಮಾರು 25 ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಈ ಕೈಗಾರಿಕೆಯಿಂದ ದುಡಿಯುವ ವರ್ಗದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದು ವೈದ್ಯರು, ಇಂಜಿನಿಯರ್, ವಕೀಲರು, ಪ್ರಾಧ್ಯಾಪಕರು ಆಗಿ ರೂಪುಗೊಂಡಿದ್ದಾರೆ ಎಂದು ಕೆ. ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ಬೀಡಿ ಉದ್ಯಮವು ದೇಶಾದ್ಯಂತ 3 ಕೋಟಿ ಹೆಚ್ಚು ಜನರಿಗೆ ಲಾಭದಾಯಕ ಉದ್ಯೋಗವನ್ನು ನೀಡುತ್ತದೆ. ಈ ಪೈಕಿ ಶೇ 80ರಷ್ಟು ಗ್ರಾಮೀಣ ಪ್ರದೇಶಗಳ ಮಹಿಳೆಯರಾಗಿರುತ್ತಾರೆ. ದೇಶದ ಉದ್ದಗಲಕ್ಕೂ ಬೀಡಿ ಉದ್ಯಮದಿಂದ ದೊರೆಯುವ ಉದ್ಯೋಗವನ್ನು ಪರಿಗಣಿಸಿ ಅನೇಕ ರಾಜ್ಯಗಳಲ್ಲಿ ವ್ಯಾಟ್ ಆಡಳಿತದ ಕಾಲದಲ್ಲಿ ಈ ಉದ್ಯಮಕ್ಕೆ ತೆರಿಗೆ ವಿಧಿಸಿರುವುದಿಲ್ಲ ಎಂದು ವಿಶ್ವನಾಥ ಶೆಟ್ಟಿ ಮಾಹಿತಿ ನೀಡಿದರು.
ಜಿಎಸ್‌ಟಿ, ಕೇಂದ್ರೀಯ ಅಬಕಾರಿ ಸುಂಕ ಮತ್ತು ಕಾರ್ಮಿಕ ಕಾನೂನುಗಳನ್ನು ತಪ್ಪಿಸಿಕೊಳ್ಳುವ ನೋಂದಾಯಿತರಲ್ಲದ ಆನೇಕ ತಯಾರಿಕರಿದ್ದಾರೆ. ಜಿಎಸ್‌ಟಿ ಏರಿಸಿದರೆ ಇಂತವರಿಂದ ಬೀಡಿ ಕಾರ್ಮಿಕರು ಇನ್ನಷ್ಟು ಶೋಷಣೆಗೊಳಗಾಗುತ್ತಾರೆ. ಬೀಡಿ ಕೈಗಾರಿಕೆಯ ಬಹುಪಾಲು ಈಗಾಗಲೇ ತೆರಿಗೆ ತಪ್ಪಿಸುವ ಅಗ್ಗದ ಬೀಡಿ ತಯಾರಕರ ಕೈಯಲ್ಲಿದೆ. ಇವರು ಸರಕಾರಕ್ಕೆ ಆದಾಯ ತೆರಿಗೆ ವಂಚನೆ ಮಾಡುವ ಜೊತೆಗೆ ಕಾರ್ಮಿಕರಿಗೆ ನ್ಯಾಯ ಸಮ್ಮತ ವೇತನ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುತ್ತಿಲ್ಲ. ಜಿಎಸ್‌ಟಿ ಏರಿಕೆಯಿಂದಾಗಿ ಬ್ರ್ಯಾಂಡಡ್ ಬೀಡಿ ತಯಾರಿಕಾ ಕಂಪೆನಿಗಳಿಗೆ ತೊಂದರೆಯಾ ಗುತ್ತಿದೆ. ಬೀಡಿ ಉದ್ಯಮವು ಉತ್ಪಾದನಾ ವೆಚ್ಚ ಕಡಿಮೆ ಇರುವ ಪಶ್ಚಿಮ ಬಂಗಾಳಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಮುಹಮ್ಮದ್ ರಫಿ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ 5 ಲಕ್ಷ ಬೀಡಿ ಕಾರ್ಮಿಕರ ಜೀವನೋಪಾಯಕ್ಕೆ ಸಮಸ್ಯೆಯಾಗುವುದನ್ನು ತಪ್ಪಿಸಲು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ (ಎಚ್‌ಎಂಎಸ್ ) ಮತ್ತು ಬೀಡಿ ಮಜ್ದೂರ್ ಸಂಘ (ಬಿಎಂಎಸ್ )ದ ಪ್ರಮುಖರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಸ್ಪೀಕರ್ ಯು. ಟಿ. ಖಾದರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೀಡಿ ಮಜ್ದೂರ್ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನಳಿನಿ ಅಡ್ಯಾರ್, ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಹರೀಶ್ ಕೆಎಸ್, ಧುರೀಣರಾದ ಪದ್ಮಾವತಿ ಮತ್ತು ಇತರರು ಉಪಸ್ಥಿತರಿದ್ದರು.