ಉಳ್ಳಾಲ ತಾಲೂಕಿನ 7,563 ಬಿಪಿಎಲ್ ಕಾರ್ಡುದಾರರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ: ರಫೀಕ್ ಅಂಬ್ಲಮೊಗರು
ಉಳ್ಳಾಲ : ರಾಜ್ಯ ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉಳ್ಳಾಲ ತಾಲೂಕಿನ 7,563 ಬಿಪಿಎಲ್ ಕಾರ್ಡುದಾರರು ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದರಲ್ಲಿ 420 ಮಂದಿಯ ಬಿಪಿಎಲ್ ಕಾರ್ಡುಗಳನ್ನು ಅಮಾನತಿನಲ್ಲಿರಿಸಲಾಗಿದೆ. ಶೀಘ್ರವೇ ರಾಜ್ಯ ಸರಕಾರ ಹಾಗೂ ರಾಜ್ಯ ಆಹಾರ ಇಲಾಖೆ ಸಚಿವರು ಗೊಂದಲಗಳನ್ನು ಪರಿಹರಿಸಬೇಕು ಎಂದು ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ತಿಳಿಸಿದರು.
ತೊಕ್ಕೊಟ್ಟು ಸೇವಾಸೌಧದ 2ನೇ ಮಹಡಿಯಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ತಾಲೂಕಿನಲ್ಲಿ ಸುಮಾರು 29415 ಬಿಪಿಎಲ್ ಪಡಿತರಿದ್ದಾರೆ. ಇದರಲ್ಲಿ 420 ಪಡಿತರ ಚೀಟಿಯನ್ನು ಹಲವು ಮಾನದಂಡಗಳ ಆಧಾರದ ಮೇಲೆ ಅಮಾನತಿನಲ್ಲಿರಿಸಲಾಗಿದೆ. ಅಲ್ಲದೆ 7563 ಬಿಪಿಎಲ್ ಪಡಿತರನ್ನು ಗ್ರಾಮ ಆಡಳಿತಾಧಿಕಾರಿಗಳ ವರದಿಗಾಗಿ ಕಳುಹಿಸಲಾಗಿದೆ. ಕೇಂದ್ರಕ್ಕೆ ಸೇವಾ ತೆರಿಗೆ ಕಟ್ಟಿದವರನ್ನು ಅಮಾನತಿನಲ್ಲಿರಿಸಿದ್ದು, ಮನೆ ಕಟ್ಟುವ ಉದ್ದೇಶದಿಂದ ಬ್ಯಾಂಕ್ ಸಾಲ ಪಡೆಯಲು ಹಲವು ಕುಟುಂಬಸ್ಥರು ಸೇವಾ ತೆರಿಗೆ ಪಾವತಿಸಿರುತ್ತಾರೆ. ಅದರ ಮೇಲೆ ಮಾನದಂಡ ಪ್ರಯೋಗ ಸೂಕ್ತವಲ್ಲ. ಅಮಾನತಿನಲ್ಲಿರಿಸಲಾದ ಪಡಿತರ ಚೀಟಿದಾರರ ವರದಿಯನ್ನು ಆದಷ್ಟು ಬೇಗ ಸಂಗ್ರಹಿಸಿ ಸರಿಪಡಿಸಬೇಕು, ಅಲ್ಲದೆ ವರದಿಗಾಗಿ ಕಾದಿರಿಸಿದ 7563 ಬಿಪಿಎಲ್ ಪಡಿತರ ವಿವರಗಳನ್ನು ಸರಿಪಡಿಸಿ, ಯೋಜನೆಗಳಿಂದ ವಂಚಿತರಾಗದಂತೆ ಕ್ರಮಕೈಗೊಳ್ಳಬೇಕಿದೆ . ಈಗಾಗಲೇ ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪತ್ರದ ಮೂಲಕ ಗೊಂದಲಗಳನ್ನು ನಿವಾರಿಸಲು ರಾಜ್ಯ ಆಹಾರ ಇಲಾಖೆಯ ಗಮನ ಸೆಳೆದಿದೆ. ಆಯಾಯ ಗ್ರಾಮ ಪಂಚಾಯತಿನ ಸದಸ್ಯರು ಗ್ರಾಮಕರಣಿಕರ ಜತೆಗೆ ಸಹಕರಿಸಬೇಕಿದೆ ಎಂದರು.
ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಅನುಷ್ಠಾನ 14 ನೇ ಕಂತು ದೀಪಾವಳಿ ಹಬ್ಬದ ಸಂಭ್ರಮದಂದೇ ಬಿಡುಗಡೆಯಾಗಲಿದೆ. ಕೆಲವರಿಗೆ 2-3 ಕಂತುಗಳು ಪಾವತಿಯಾದ ನಂತರ ನಿಂತಿದೆ. ಇದು ಆಧಾರ್ - ಪ್ಯಾನ್ ಲಿಂಕ್ ನಿಂದಾಗಿ ಇನ್ಕಮ್ ಟ್ಯಾಕ್ಸ್ ಕಟ್ಟಿದ ವಿವರ ಸಾಫ್ಟ್ ವೇರ್ ನಲ್ಲಿ ಅಪ್ಡೇಟ್ ಆಗಿರುವ ಸಾಧ್ಯತೆಯಿಂದ ಆಗಿರುವ ಗೊಂದಲಗಳು. ಅಂತಹವರ ಸ್ಟೇಟಸ್ ಪರಿಶೀಲಿಸ ಬೇಕಿದೆ. ಹಲವರ ಸ್ಟೇಟಸ್ ನಲ್ಲಿ ಜಿ.ಎಸ್.ಟಿ ನಮೂದಾಗಿದೆ. ಅದನ್ನು ರಾಜ್ಯ ದ ಆರ್ಥಿಕ ಇಲಾಖೆ ಅಧಿಕಾರಿಗಳೇ ಸರಿಪಡಿ ಸಬೇಕಿದೆ. ಅಂತಹ ಫಲಾನುಭವಿಗಳು ತೊಕ್ಕೊಟ್ಟು ಸೇವಾಸೌಧ ಮೂರನೇ ಮಹಡಿಯಲ್ಲಿ ನವೆಂಬರ್ ತಿಂಗಳಿನಿಂದ ಆರಂಭವಾಗುವ ಗ್ಯಾರಂಟಿ ಅನುಷ್ಠಾನ ಕಚೇರಿ ಅಥವಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಲ್ಲಿ ಸಂಪರ್ಕಿಸಬಹುದು ಎಂದರು.
ಈ ಸಂದರ್ಭ ಸದಸ್ಯರಾದ ವಿಲ್ಫ್ರೆಡ್ ಡಿಸೋಜ, ದೇವಾನಂದ ಶೆಟ್ಟಿ, ಜೆಸಿಂತಾ ಮೆಂಡೋನ್ಸಾ, ರೇವತಿ ವಿಶ್ವನಾಥ್, ಸಲಾಂ ಕೆ.ಸಿ.ರೋಡ್ ಉಪಸ್ಥಿತರಿದ್ದರು.