ಸುರತ್ಕಲ್‌ ರಸ್ತೆ ಬಂದ್‌ ಮಾಡಿ ಖಾಸಗಿ ಪ್ರತಿಷ್ಠಾನದಿಂದ ಫುಡ್‌ ಫೆಸ್ಟ್‌, ಸಂಗೀತ ರಸಮಂಜರಿ ಆಯೋಜನೆ

Update: 2024-11-02 18:50 GMT

ಸುರತ್ಕಲ್:‌ ಇಲ್ಲಿನ ಮುಖ್ಯ ರಸ್ತೆಯ ಒಂದು ಪಾರ್ಶ್ವವನ್ನೇ ಬಂದ್‌ ಮಾಡಿ ಖಾಸಗಿ ಪ್ರತಿಷ್ಠಾನವೊಂದಕ್ಕೆ ಫುಡ್‌ ಫೆಸ್ಟ್‌ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆ ಅವಕಾಶ ನೀಡಿರುವ ಕುರಿತು ಸಾರ್ವಜನಿಕರು ಆಕ್ಷೇಪ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ ಪೇಟೆಯ ಕೃಷ್ಣಾಪುರ - ಮಂಗಳೂರು ಮುಖ್ಯ ರಸ್ತೆಯನ್ನೇ ಬಂದ್‌ ಮಾಡಲಾಗಿದೆ. ರಸ್ತೆಯನ್ನು ಬಂದ್‌ ಮಾಡಿ ರಸ್ತೆಯ ಇಕ್ಕೆಲದಲ್ಲಿ ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಜೊತೆಗೆ ಸಂಗೀತ ರಸಮಂಜರಿಗಾಗಿ ಬೃಹತ್‌ ವೇದಿಕೆಯನ್ನೂ ರಸ್ತೆಯ ಮಧ್ಯದಲ್ಲೇ ನಿರ್ಮಿಸಲಾಗಿದೆ. ಹೀಗಾಗಿ ಪೇಟೆ ತುಂಬಾ ವಾಹನಗಳು ಬ್ಲಾಕ್‌ ಆಗುತ್ತಿವೆ. ವಾಹನ ಸವಾರರು ಸೇರಿದಂತೆ ಪಾದಚಾರಿಗಳು ನಡೆದಾಡಲೂ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾದ ಮುಖಂಡರೊಬ್ಬರದ್ದು ಎನ್ನಲಾದ ಕರಾವಳಿ ಸೇವಾ ಪ್ರತಿಷ್ಠಾನ ಎಂಬ ಖಾಸಗಿ ಫೌಂಡೇಶನ್‌ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಸುರತ್ಕಲ್‌ ಪೊಲೀಸ್‌ ಠಾಣೆಯಿಂದ ಅನುಮತಿ ನೀಡಲಾಗಿದೆಯೇ ಎಂದು ʼವಾರ್ತಾಭಾರತಿʼಯ ಪ್ರಶ್ನೆಗೆ "ಸುರತ್ಕಲ್‌ ಪೊಲೀಸ್‌ ಠಾಣೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ನಮ್ಮಿಂದ ಯಾವುದೇ ಅನುಮತಿ ನೀಡಲಾಗಿಲ್ಲ" ಎಂದು ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಅವರು ಮಾಹಿತಿ ನೀಡಿದ್ದಾರೆ.


ಅಲ್ಲದೆ, ಕಾರ್ಯಕ್ರಮ ಆಯೋಜನೆಗೆ ಟ್ರಾಫಿಕ್‌ ಪೊಲೀಸರಿಂದ ಅನುಮತಿ ನೀಡಲಾಗಿದೆಯೇ ಎಂದು ಕೇಳುವ ಸಲುವಾಗಿ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಶರೀಫ್‌ ವಾರ್ತಾಭಾರತಿಗೆ ಪ್ರತಿಕೃಯಿ ಸಿದ್ದು, ಟ್ರಾಫಿಕ್‌ ಪೊಲೀಸ್‌ ಠಾಣೆಗೆ ಅನುಮತಿ ನೀಡುವಂತೆ ಯಾವುದೇ ಮನವಿ ಪತ್ರಗಳು ಬಂದಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯದ ಪ್ರಭಾರ ವಲಯ ಆಯುಕ್ತರಾಗಿರುವ ಎಇಇ ಕಾರ್ತಿಕ್‌ ಶೆಟ್ಟಿ ಅವರನ್ನು ವಾರ್ತಾಭಾರತಿ ಮಾತನಾಡಿಸಿದ್ದು, "ಫುಡ್‌ ಫೆಸ್ಟ್‌ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಯಿಂದ ಯಾವುದೇ ಅನುಮತಿ ಪತ್ರ ನೀಡಿಲ್ಲ" ಎಂದು ಸ್ಪಷ್ಟ ಪಡಿಸಿದ್ದಾರೆ.

2022-23ರ ದೀಪಾವಳಿ ಆಚರಣೆಯನ್ನು ಬಿಜೆಪಿ ಯುವ ಮೋರ್ಚಾದ ಹೆಸರಿನಲ್ಲಿ ಸುರತ್ಕಲ್‌ ಪೇಟೆಯನ್ನು ಬಂದ್‌ ಮಾಡಿ ಒಂದು ದಿನದ ಕಾರ್ಯಕ್ರಮವನ್ನು ಮಾಡಲಾಗಿತ್ತು. ಈ ಕುರಿತು ಆಕ್ಷೇಪಣೆಗಳು ಬಂದಿದ್ದ ಸಲುವಾಗಿ ಈ ಬಾರಿ ಯುವ ಮೋರ್ಚಾದ ಮುಖಂಡರೊಬ್ಬರ ಕರಾವಳಿ ಸೇವಾ ಪ್ರತಿಷ್ಠಾನದ ಹೆಸರಿನಲ್ಲಿ ರಸ್ತೆ ಬಂದ್‌ ಮಾಡಿ ಎರಡು ದಿನಗಳ ಕಾಲ ಫುಡ್‌ ಫೆಸ್ಟ್‌, ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಸಂಗೀತ ಸರ ಮಂಜರಿ ಕಾರ್ಯಕ್ರಮವನ್ನು ಸುರತ್ಕಲ್‌ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಈ ಮೊದಲು ಆಯೋಜಿಸಲಾ ಗಿತ್ತು. ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಸ್ತೆಯನ್ನೇ ಬಂದ್‌ ಮಾಡಿ ಸ್ಟೇಜ್‌ ಹಾಕಲಾಗಿದೆ ಎಂದು ಸಾರ್ವಜನಿಕರು ದೂರಿದ್ದು, ಶಾಸಕ ಭರತ್‌ ಶೆಟ್ಟಿ ನೇತೃತ್ವದದಲ್ಲಿ ಅವರ ಹಿಂಬಾಲಕರು ಕಾನೂನುಗಳನ್ನು ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ ಮಾಡಬಹುದೇ ಎಂದು ಮನಪಾ ಮತ್ತು ಪೊಲೀಸ್‌ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ.

ದೀಪಾವಳಿಯ ಹಿನ್ನೆಲೆಯಲ್ಲಿ ಎಂದಿನಂತೆ ಪ್ರತೀ ವರ್ಷದಂತೆ ಈ ವರ್ಷವೂ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ 2-3ಲಕ್ಷ ರೂ. ಬಂಡವಾಳ ಹಾಕಿ ಹೂವು ತಂದಿದ್ದೇನೆ. ಆದರೆ ಈ ಫುಡ್‌ ಫೆಸ್ಟ್‌ ನಿಂದಾಗಿ ನಮ್ಮಲ್ಲಿಗೆ ಬರುವ ಗ್ರಾಹಕರ ವಾಹನ ಗಳನ್ನು ಪಾರ್ಕ್‌ ಮಾಡಲು ಸ್ಥಳಗಳಿಲ್ಲ. ಎಲ್ಲಾ ಸ್ಥಳವನ್ನು ಫುಡ್‌ ಕೌಂಟರ್‌ ಹಾಕಿದ್ದಾರೆ. ವಾಹನಗಳನ್ನು ರಸ್ತೆ ಬದಿ ಪಾರ್ಕ್ ಮಾಡಲು ಟ್ರಾಫಿಕ್‌ ಪೊಲೀಸರು ಬಿಡುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ 10 ಲಕ್ಷ ರೂ. ವರೆಗೆ ಬಂಡವಾಳ ತೊಡಗಿಸಿಕೊಂಡು ವ್ಯಾಪಾರದ ನಿರೀಕ್ಷೆಯಲ್ಲಿದ್ದೆವು. ಆದರೆ ಖಾಸಗಿಯವರ ಕಾರ್ಯಕ್ರಮಕ್ಕಾಗಿ ಜನರಿಗೆ ತೊಂದರೆ ನೀಡುತ್ತಿರುವುದು ತಪ್ಪು. ಅವರಿಗೆ ಅನುಮತಿ ನೀಡಿರುವ ಮಹಾ ನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಯ ಕ್ರಮ ಒಪ್ಪುವಂತದ್ದಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಬಟ್ಟೆ ವ್ಯಾಪಾರಿ ಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಸುರತ್ಕಲ್‌ ಪೇಟೆಯಲ್ಲಿ ರಸ್ತೆ ಬಂದ್‌ ಮಾಡಿ ಫುಡ್‌ ಫೆಸ್ಟ್‌ ಮತ್ತು ಸಂಗೀತ ರಸ ಮಂಜರಿ ಆಯೋಜನೆಗೆ ಅನುಮತಿ ನೀಡಲಾಗಿದೆಯೇ ಎಂಬ ಕುರಿತಾಗಿ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್‌, ಟ್ರಾಫಿಕ್‌ ಎಸಿಪಿ ನಜ್ಮಾ ಫಾರೂಖಿ ಮತ್ತು ಕಾನೂನು ಸುವ್ಯವಸ್ಥೆಯ ಎಸಿಪಿ ಶ್ರೀಕಾಂತ್‌ ಕೆ. ಅವರಿಗೆ ದೂರವಾಣಿ ಮೂಲಕ ವಾರ್ತಾಭಾರತಿ ಸಂಪರ್ಕಿಸಿದ್ದು, ಯಾರೂ ಕರೆಗಳನ್ನು ಸ್ವೀಕರಿಸಿಲ್ಲ.

"ಹಬ್ಬ ಆಚರಣೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡಿಕೊಂಡು ಹಬ್ಬ ಆಚರಿಸುವು ದನ್ನು ದೇವರೂ ಮೆಚ್ಚಲಾರ. ಮಾಡಲೇಬೇಕೆಂದಿದ್ದರೆ ಸರಕಾರಿ ಸ್ಥಳಗಳು, ಕೂಳೂರಿನ ಗೋಲ್ಡ್‌ ಪಿಂಚ್‌ ಮೈದಾನ, ಕೃಷ್ಣಾಪುರದ ಪ್ಯಾರಡೈಸ್‌ ಮೈದಾನ, ಅಥವಾ ಎನ್‌ ಐಟಿಕೆ ಬೀಚ್‌ನಲ್ಲಿ ಮಾಡಬಹುದಿತ್ತು. ಅದು ಬಿಟ್ಟು ಸಾರ್ವಜನಿಕರಿಗೆ ತೊಂದರೆ ನೀಡುತ್ತಾ ಪೇಟೆಯನ್ನು ಬಂದ್‌ ಮಾಡಿ ಮಾಡಿರುವುದು ಅಕ್ಷಮ್ಯ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದ್ದೇನೆ. ಆಯುಕ್ತರು ನೇರವಾಗಿ ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತು ಮುಂದಿನ ಸಭೆಯಲ್ಲಿ ಪ್ರಶ್ನೆ ಮಾಡಲಾಗುವುದು".

- ಕಿಶೋರ್‌ ಶೆಟ್ಟಿ, ಮನಪಾ ನಾಮ ನಿರ್ದೇಶಿತ ಸದಸ್ಯ

ಜವಾಬ್ದಾರಿಯುವ ಸ್ಥಾನದಲ್ಲಿರುವ ಶಾಸಕರೇ ನೇತೃತ್ವ ನೀಡಿ ಕಾರ್ಯಕ್ರಮ ಆಯೋಜಿಸಿದ್ದರೆ ಅದು ತಪ್ಪು. ಈ ಬಗ್ಗೆ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಂಗಳೂರಿಗೆ ಬಂದಿದ್ದರು. ಅವರಿಗೆ ಈ ವಿಷಯ ತಿಳಿಸಿ ಕ್ರಮಕೈಗೊಳ್ಳುತ್ತಿದ್ದೆವು. ಜಿಲ್ಲಾಧಿಕಾರಿಯಲ್ಲಿ ಈ ಕುರಿತು ವಿಚಾರಿಸಿ ಕ್ರಮಕ್ಕೆ ಆಗ್ರಹಿಸಲಾಗುವುದು.

-ಹರೀಶ್‌ ಕುಮಾರ್‌, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ





Full View

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News