ಭಿನ್ನಾಭಿಪ್ರಾಯಗಳನ್ನು ಕಿತ್ತೊಗೆದಾಗ ಸಮುದಾಯದ ಏಳಿಗೆ ಸಾಧ್ಯ: ವಲಿ ರಹ್ಮಾನಿ
ಮಂಗಳೂರು: ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಕಿತ್ತೊಗೆದಾಗ ಸಮುದಾಯದ ಏಳಿಗೆ ಸಾಧ್ಯ ಎಂದು ಪಶ್ಚಿಮ ಬಂಗಾಳದ ಉಮೀದ್ ಗ್ಲೋಬಲ್ ಸ್ಕೂಲ್‌ನ ಸಂಸ್ಥಾಪಕ ವಲಿ ರಹ್ಮಾನಿ ಹೇಳಿದ್ದಾರೆ.
ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ (ಎಚ್‌ಐಎಫ್) ವತಿಯಿಂದ ಬುಧವಾರ ಇಲ್ಲಿನ ಪುರಭವನದಲ್ಲಿ ನಡೆದ ‘‘ಆಸ್ಪೈರ್ ಟು ಇನ್‌ಸ್ಪೈರ್ ಫಾರ್ ಬೆಟರ್ ಲೈಫ್’’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮುದಾಯದೊಳಗೆ ಏಕತೆಯನ್ನು ಬೆಳೆಸಲು ಸಂಘ ಸಂಸ್ಥೆಗಳು ಶ್ರಮಿಸಬೇಕಾಗಿದೆ ಎಂದ ಅವರು ಸಮಾಜದ ಒಳಿತಿಗಾಗಿ ನಿರಂತರ ಪ್ರಯತ್ನವನ್ನು ಮುಂದುವರಿಸಬೇಕಾಗಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಉಮೀದ್ ಅಕಾಡೆಮಿಯ ಕೇವಲ ಮೂರು ಅನಾಥ ಮಕ್ಕಳೊಂದಿಗೆ ಪ್ರಾರಂಭಗೊಂಡ ತಮ್ಮ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ವಿವರಿಸಿದ ಅವರು ಇವತ್ತು ಈ ಅಕಾಡೆಮಿ ಗ್ಲೋಬಲ್ ಸ್ಕೂಲ್ ಆಗಿ ಬೆಳೆದಿದೆ. ಈ ಸ್ಕೂಲ್‌ನಲ್ಲಿ 350 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಮಹಾರಾಷ್ಟ್ರದ ಜಾಮಿಯಾ ಅಕ್ಕಲ್‌ಕುವಾದ ಸಿಇಒ ಮೌಲಾನಾ ಹುಝೈಫಾ ವಸ್ತಾನ್ವಿ ಮಾತನಾಡಿ ಮಾನವನು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇವಲ ಶಿಕ್ಷಣದಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಶಿಕ್ಷಣದೊಂದಿಗೆ ಆಧ್ಯಾತ್ಮ ಅಗತ್ಯ. ಆಧ್ಯಾತ್ಮಿಕತೆಯ ನಡುವಿನ ಸಮತೋಲನದ ಅಗತ್ಯವಿದೆ ಎಂದರು. ಸಾಮಾಜಿಕ ಸಂಘಟನೆಗಳು ಸಾಮರಸ್ಯದ ಸಮಾಜವನ್ನು ಕಟ್ಟಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಇಸ್ಲಾಂನ ತತ್ವಗಳು ಸಾರ್ವತ್ರಿಕವಾಗಿವೆ ಮತ್ತು ಕೇವಲ ಮುಸ್ಲಿಮರಿಗೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಜನರಿಗೆ ಮಾರ್ಗದರ್ಶನ ಮತ್ತು ಪರಿಹಾರಗಳನ್ನು ನೀಡುತ್ತವೆ ಎಂದು ಅವರು ಹೇಳಿದರು.
ಆಹಿಲ್ ಎಸ್‌ಎಂ ಕಿರಾತ್ ಪಠಿಸಿದರು. ಎಚ್‌ಐಎಫ್ ಅಧ್ಯಕ್ಷ ಆದಿಲ್ ಪಾಂಡೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಝ್ ಯೂಸುಫ್ ರಶೀದ್ ವಂದಿಸಿದರು.